More

    ಶತಮಾನಗಳ ಬಳಿಕ ಸಹೋದರರ ಸಮಾಗಮ

    ಹೊಸದುರ್ಗ: ಮೂರು ಶತಮಾನಗಳಿಂದ ದೂರವಿದ್ದ ಸಹೋದರರಿಬ್ಬರ ಕೂಡು ಭೇಟಿಗೆ ಕೆಲ್ಲೋಡು ಗ್ರಾಮ ಬುಧವಾರ ಸಾಕ್ಷಿಯಾಯಿತು. ಧಾರ್ಮಿಕ ಕಾರ್ಯಕ್ರಮದಲ್ಲಿ ಸಿದ್ದೇಶ್ವರ ಸ್ವಾಮಿ ಮತ್ತು ದೇವಪುರದ ಬೀರಲಿಂಗೇಶ್ವರ ಸ್ವಾಮಿ ಆರಾಧಕರು, ಭಕ್ತರು ಪರಸ್ಪರ ಆಲಿಂಗನ ಮಾಡಿಕೊಂಡು ಒಂದಾಗುವ ಮೂಲಕ ಸಂತಸ ಹಂಚಿಕೊಂಡರು.

    ಹಾಲುಮತ ಸಮುದಾಯದ ಆರಾಧ್ಯ ದೈವಗಳಾದ ತಾಲೂಕಿನ ಕೆಲ್ಲೋಡು ಗ್ರಾಮದ ಸಿದ್ದೇಶ್ವರ ಸ್ವಾಮಿ ಹಾಗೂ ದೇವಪುರದ ಬೀರಲಿಂಗೇಶ್ವರ ಸ್ವಾಮಿ (ಬೆಳಕಲ್ ಸಿದ್ದಪ್ಪ ) ದೇವರು ಶತಮಾನಗಳಿಂದ ಮುಖಾಮುಖಿಯಾಗದೆ, ದೂರ ಉಳಿದಿದ್ದರು.

    ದೇವರುಗಳ ಒಕ್ಕಲು ಭಕ್ತರು ಕೂಡ ಪರಸ್ಪರ ದೇಗುಲಗಳಿಗೆ ಹೋಗುವುದನ್ನು ನಿಲ್ಲಿಸಿದ್ದರು. ಆದರೆ, ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಒತ್ತಾಸೆಯಂತೆ ಸಹೋದರರು ಹಾಗೂ ಪರಿವಾರವನ್ನು ಒಂದುಗೂಡಿಸುವ ಪ್ರಯತ್ನ ಯಶಸ್ವಿಯಾಯಿತು.

    ಕೆಲ್ಲೋಡು ಗ್ರಾಮದ ಸಿದ್ದೇಶ್ವರ ಸ್ವಾಮಿಯ ನೂತನ ದೇವಾಲಯ ಉದ್ಘಾಟನೆಗಾಗಿ ಬುಧವಾರ ಸಂಜೆ ಗ್ರಾಮಕ್ಕೆ 300 ವರ್ಷಗಳ ಬಳಿಕ ದೇವಪುರದ ಶ್ರೀ ಬೀರಲಿಂಗೇಶ್ವರ ಸ್ವಾಮಿ ಆಗಮಿಸಿತು. ಈ ವೇಳೆ ಸಹೋದರನನ್ನು ಸಿದ್ದೇಶ್ವರ ಸ್ವಾಮಿಯು ಸಕಲ ಬಿರುದಾವಳಿಗಳೊಂದಿಗೆ ಸ್ವಾಗತಿಸುವ ಮೂಲಕ ಪರಸ್ಪರ ಮುಖಾಮುಖಿಯಾಗಿ ಕೂಡು ಭೇಟಿಯಾದರು. ಎರಡು ದೇವರುಗಳ ಭೇಟಿಯನ್ನು ಭಕ್ತರು ಕಣ್ತುಂಬಿಕೊಂಡರು.

    ಅಂದಾಜು ಮುನ್ನೂರು ವರ್ಷಗಳ ನಂತರ ನಡೆದ ಕೂಡುಭೇಟಿಯ ಅಪರೂಪದ ಹಾಗೂ ಐತಿಹಾಸಿಕ ಘಟನೆಯನ್ನು ಸಾಕ್ಷಿಕರಿಸಲು ಎರಡು ದೇವರುಗಳ ವಕ್ಕಲು ಬಳಗ ಹಾಗೂ ಭಕ್ತರು ಇದ್ದರು. ಎರಡು ದೇವರುಗಳು ಪರಸ್ಪರ ಅಲಂಗಿಸುತ್ತಿದಂತೆ ಭಕ್ತರು ಸಂತಸದಿಂದ ಹರ್ಷೋದ್ಗಾರ ವ್ಯಕ್ತಪಡಿಸಿದರು.

    ನೂತನ ದೇಗುಲದ ಉದ್ಘಾಟನಾ ಸಮಾರಂಭಕ್ಕೆ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಅವರನ್ನು ಆಹ್ವಾನಿಸಲು ಈಚೆಗೆ ಕಾಗಿನೆಲೆ ಮಠಕ್ಕೆ ಭಕ್ತರು ತೆರಳಿದ್ದರು. ಆ ಸಂದರ್ಭದಲ್ಲಿ ಶ್ರೀಗಳು, ದೇವರುಗಳು ಭೇಟಿಯಾಗದಿರುವ ಸಮಸ್ಯೆಯನ್ನು ಭಕ್ತರೊಂದಿಗೆ ಚರ್ಚಿಸಿದ್ದರು.

    ಉದ್ಘಾಟನೆಯ ದಿನ ಮೈಲಾರ ಕ್ಷೇತ್ರದಲ್ಲಿ ಜಾತ್ರೆಯಿರುವುದರಿಂದ ಕಾರ್ಯಕ್ರಮಕ್ಕೆ ಬರಲು ಸಾಧ್ಯವಿಲ್ಲ. ಆದರೆ, ನೀವು ಎರಡು ದೇವರುಗಳ ಕೂಡು ಭೇಟಿ ಮಾಡುವ ಮೂಲಕ 300 ವರ್ಷಗಳ ವಿರಸಕ್ಕೆ ಮಂಗಳ ಹಾಡಿದರೆ ಸಂತೋಷದಿಂದ ಕಾರ್ಯಕ್ರಮಕ್ಕೆ ಆಗಮಿಸುವುದಾಗಿ ತಿಳಿಸಿದ್ದರು. ಶ್ರೀಗಳ ಆಶಯದಂತೆ ಭಕ್ತರು ಎರಡು ದೇವರ ಬಳಿ ಅಪ್ಪಣೆ ಕೇಳಿ, ಒಪ್ಪಿಗೆ ದೊರೆತ ಬಳಿಕ ಭೇಟಿ ಉತ್ಸವ ಕ್ಕೆ ಸಿದ್ಧತೆ ನಡೆಸಿ, ಬುಧವಾರ ವಿಜೃಂಭಣೆಯಿಂದ ಆಚರಿಸಿದರು.

    ಬೀರಪ್ಪನ ಕೋಪ: ಪ್ರಚಲಿತದಲ್ಲಿರುವ ದಂತಕಥೆಯೊಂದರ ಪ್ರಕಾರ ಪ್ರತಿ ವರ್ಷ ನಡೆಯುವ ಕೆಲ್ಲೋಡು ಸಿದ್ದೇಶ್ವರ ಸ್ವಾಮಿ ಜಾತ್ರೆಯಲ್ಲಿ ಮೊದಲು ದೇವಪುರದ ಬೀರಲಿಂಗೇಶ್ವರ ಸ್ವಾಮಿ ರಥವೇರಿದ ನಂತರ ಸಿದ್ದೇಶ್ವರ ದೇವರು ರಥವೇರಿದ ಬಳಿಕ ಜಾತ್ರೆ ನಡೆಯುವ ಪದ್ಧತಿಯಿತ್ತು. ಒಮ್ಮೆ ಭಾನುವಾರ ಪೂಜಾ ಕಾರ್ಯಕ್ರಮ ತಡವಾದ ಕಾರಣ ಬೀರಲಿಂಗೇಶ್ವರ ದೇವರು ಜಾತ್ರೆಗೆ ಬರುವುದು ತಡವಾಗಿದೆ. ಅಷ್ಟರಲ್ಲಿ ಸಿದ್ದೇಶ್ವರ ಸ್ವಾಮಿ ರಥವೇರಿದ ಕಾರಣ ಕೋಪಗೊಂಡ ಬೀರಲಿಂಗೇಶ್ವರ ಸ್ವಾಮಿ, ದೇಗುಲಕ್ಕೆ ಹಿಂದಿರುಗಿದ ಕಾರಣ ಅಂದಿನಿಂದ ಇಲ್ಲಿಯವರೆಗೆ ಎರಡು ದೇವರುಗಳು ಪರಸ್ಪರ ಮುಖಾಮುಖಿಯಾಗಿರಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts