More

    ಸಚಿವ ಮಲ್ಲಿಕಾರ್ಜುನ್ ಆರೋಪಕ್ಕೆ ಸಿದ್ದೇಶ್ವರ ತಿರುಗೇಟು

    ದಾವಣಗೆರೆ : ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತಮ್ಮ ವಿರುದ್ಧ ಮಾಡಿರುವ ಆರೋಪಕ್ಕೆ ಸಂಸದ ಜಿ.ಎಂ. ಸಿದ್ದೇಶ್ವರ ತಿರುಗೇಟು ನೀಡಿದ್ದಾರೆ.
     ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಆನೆ ಹೋಗುತ್ತಿರುತ್ತದೆ, ನಾಯಿ ಬೊಗಳುತ್ತಿರುತ್ತದೆ. ಬೊಗಳುವ ನಾಯಿ ಕಚ್ಚುವುದಿಲ್ಲ, ಕಚ್ಚುವ ನಾಯಿ ಬೊಗಳುವುದಿಲ್ಲ. ಆನೆ ತೂಕ ಆನೆಗೆ, ನಾಯಿ ತೂಕ ನಾಯಿಗೆ’ ಎಂದು ಪ್ರತಿಕ್ರಿಯಿಸಿದರು.
     ನಮ್ಮೂರಿನಲ್ಲಿ ಗಣಿ ಲಾರಿಗಳು ನಮ್ಮ ಮನೆ ಮುಂದೆಯೇ ಹಾದು ಹೋಗುವುದರಿಂದ ಸಮಸ್ಯೆಯಾಗುತ್ತಿದೆ, ಅವುಗಳ ಮಾರ್ಗ ಬದಲಿಸಿ ಎಂದು ಈ ಹಿಂದೆ ನಾನು ಹೇಳಿದ್ದೆ. ಬೊಮ್ಮೇನಹಳ್ಳಿಯಲ್ಲೂ ಊರಿನ ಮಧ್ಯದಲ್ಲಿ ರಸ್ತೆಯಿದ್ದು ಆ ಗ್ರಾಮಸ್ಥರದೂ ಇದೇ ಬೇಡಿಕೆಯಾಗಿತ್ತು. ಅಪಘಾತ ಸಂಭವಿಸಿ ಜನರು ಕೆಲವು ಲಾರಿಗಳನ್ನು ಸುಟ್ಟಿದ್ದರು ಎಂದು ತಿಳಿಸಿದರು.
     ಈಗ ಲಾರಿಗಳ ಓಡಾಟ ನಿಲ್ಲಿಸಿದ್ದಾರೆ, ಕಾರಣ ಏನು ಎಂಬುದನ್ನು ತಿಳಿಸಬೇಕು. ಜನರಿಗೆ ಅನನುಕೂಲವಾಗುತ್ತದೆ ಎಂದು ನಿಲ್ಲಿಸಿದ್ದರೆ ಸ್ವಾಗತಿಸುವುದಾಗಿ ಹೇಳಿದರು.
     ಬೇಲಿಕೇರಿ ಅದಿರು ಪ್ರಕರಣದಲ್ಲಿ ತಾವು ಯಾವುದೇ ಅಕ್ರಮ ಎಸಗಿಲ್ಲ, ರಫ್ತಿನಲ್ಲಿ ಯಾವ ವ್ಯತ್ಯಾಸವೂ ಆಗಿಲ್ಲ. ಆಗಲೂ ಕಾಂಗ್ರೆಸ್ ಸರ್ಕಾರವಿತ್ತು, ಇದೇ ಮಂತ್ರಿ ನನ್ನ ಮೇಲೆ ಗೂಬೆ ಕೂರಿಸಲು ನನ್ನ ತಮ್ಮನಿಗೆ ತೊಂದರೆ ಕೊಟ್ಟರು. ಆ ಪ್ರಕರಣ ನ್ಯಾಯಾಲಯದಲ್ಲಿ ವಜಾ ಆಯಿತು ಎಂದು ತಿಳಿಸಿದರು.
     ನಾವು ಕಳ್ಳತನ, ಭ್ರಷ್ಟಾಚಾರದಿಂದ ಆಸ್ತಿ ಮಾಡಿಲ್ಲ. ನಮ್ಮ ಮನೆಯಲ್ಲಿ 6 ಮಂದಿ ದುಡಿಯುತ್ತೇವೆ. ಪ್ರಾಮಾಣಿಕ ದುಡಿಮೆಯಿಂದ ಗಳಿಸಿದ್ದೇವೆ. ವರ್ಗಾವಣೆ ಅಥವಾ ಇನ್ನಿತರ ವಿಚಾರಗಳಿಗೆ ಹಣ ಪಡೆದಿಲ್ಲ. ಅವರದೇ ಸರ್ಕಾರವಿದೆ, ಬೇಕಿದ್ದರೆ ವಿಚಾರಣೆ ಮಾಡಲಿ. ಭ್ರಷ್ಟಾಚಾರ ಆರೋಪ ಸಾಬೀತು ಪಡಿಸಿದರೆ ಆಸ್ತಿಯನ್ನೆಲ್ಲ ಅವರಿಗೆ ಬರೆಯುವೆ, ಶಿಕ್ಷೆಗೆ ಒಳಪಡಲು ಸಿದ್ಧನಿದ್ದೇನೆ ಎಂದರು.
     ಶಾಮನೂರು ಕುಟುಂಬದವರಿಗೆ ಈ ಹಿಂದೆ ತಾವು ಸಾಲ ನೀಡಿದ ವಿಚಾರವನ್ನು ಪ್ರಸ್ತಾಪಿಸಿದ ಸಿದ್ದೇಶ್ವರ, 1994ರಲ್ಲಿ ಲಕ್ಷ್ಮೀ ಫ್ಲೋರ್ ಮಿಲ್ ವಿಚಾರವಾಗಿ ನನ್ನಿಂದ ಸಾಲ ಪಡೆದಿದ್ದಾರೆ. 1996ರಲ್ಲಿ ಮದ್ರಾಸ್ ಬಂದರಿಗೆ ಸಕ್ಕರೆ ಆಮದು ಆದಾಗ ಶಾಮನೂರು ಶಿವಶಂಕರಪ್ಪ ಅವರೇ ನನ್ನ ಬಳಿ ಸಾಲ ಪಡೆದಿದ್ದರು. 1997 ರಲ್ಲಿ ಸ್ವಯಂ ಘೋಷಣೆ ಯೋಜನೆ ಜಾರಿಯಾದಾಗ ನಾನು 6 ಕೋಟಿ ರೂ. ಎಂದು ಘೋಷಿಸಿ 1.85 ಕೋಟಿ ರೂ. ತೆರಿಗೆ ಪಾವತಿಸಿದ್ದೆ. ಆಗಲೂ ಅವರಿಗೆ ನಾನು ಹಣ ನೀಡಿದ್ದೆ, ನಂತರ ಬಡ್ಡಿ ಸಮೇತ ವಸೂಲಿ ಮಾಡಿದೆ ಎಂದು ವಿವರಿಸಿದರು.
     ದುಡಿಮೆಯ ಹಣದಿಂದ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದ್ದಾಗಿ ಸಮರ್ಥಿಸಿಕೊಂಡ ಅವರು, ಅದನ್ನೆಲ್ಲ ಗಮನಿಸಲು ಆದಾಯ ತೆರಿಗೆ ಇಲಾಖೆಯಿದೆ. ಕಾಲೇಜುಗಳನ್ನು ಕಟ್ಟಲು ಶಕ್ತಿಯಿದೆ, ಕಟ್ಟಿದ್ದೇವೆ. ಅದನ್ನು ಕೇಳಲು ಇವರ‌್ಯಾರು ಎಂದು ಪ್ರಶ್ನಿಸಿದರು.
     ಆಶ್ರಯ ನಿವೇಶನ ಹಂಚಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ನಗರಾಭಿವೃದ್ಧಿ ಪ್ರಾಧಿಕಾರಕ್ಕೂ, ನನಗೂ ಸಂಬಂಧವಿಲ್ಲ, ನಾನು ಅದರ ಸದಸ್ಯನೂ ಅಲ್ಲ ಎಂದು ತಿಳಿಸಿದರು. ತನಿಖೆ ಆಗುವುದಿದ್ದರೆ ಮಲ್ಲಿಕಾರ್ಜುನ್ ಮಂತ್ರಿ ಆಗಿದ್ದಾಗಿನಿಂದ ಇಲ್ಲಿಯ ವರೆಗೆ ಎಲ್ಲವೂ ಆಗಲಿ ಎಂದು ಹೇಳಿದರು.
     ಸ್ಮಾರ್ಟ್‌ಸಿಟಿ ಕಾಮಗಾರಿಗಳು ಕಳಪೆಯಾಗಿವೆ ಎಂಬ ಆರೋಪಕ್ಕೆ ಉತ್ತರಿಸಿ, ಈ ಹಿಂದೆಯೂ ಕೆಲವು ಕಾಮಗಾರಿ ಕಳಪೆ ಎಂದು ಕಂಡುಬಂದಾಗ ನಾನೇ ಅದನ್ನು ರಿಪೇರಿ ಮಾಡಿಸಿದ್ದೇನೆ ಎಂದು ತಿಳಿಸಿದರು.
     ಎರಡು ತಿಂಗಳಿಂದ ದೂಡಾದಿಂದ ನಿರಾಕ್ಷೇಪಣಾ ಪತ್ರ (ಎನ್‌ಒಸಿ), ಮಹಾನಗರ ಪಾಲಿಕೆಯಿಂದ ಡೋರ್ ನಂಬರ್ ನೀಡುತ್ತಿಲ್ಲ. ಮೊದಲು ಅರ್ಹರಿಗೆ ಅದನ್ನು ಕೊಡಿಸಲಿ. ಅಧಿಕಾರ ಇದೆಯೆಂದು ಏನೇನೋ ಮಾತನಾಡುವುದು ಸರಿಯಲ್ಲ ಎಂದರು.
     ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಅನ್ನು ‘ಅಕ್ಬರ್, ಅಂಥೋನಿ ಫುಲ್ ಖುಷ್, ಅಮರ್ ಮಟ್ಯಾಶ್’ ಎಂದು ವಿಶ್ಲೇಷಿಸಿದರು. ದಾವಣಗೆರೆ ವಿಮಾನ ನಿಲ್ದಾಣ, ಕೈಗಾರಿಕಾ ಕಾರಿಡಾರ್, ಸರ್ಕಾರಿ ವೈದ್ಯಕೀಯ ಕಾಲೇಜುಗಳ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪವೇ ಇಲ್ಲ ಎಂದು ಟೀಕಿಸಿದರು.
     ಮಾಜಿ ಮೇಯರ್ ಬಿ.ಜಿ. ಅಜಯಕುಮಾರ್, ಪಕ್ಷದ ಮುಖಂಡರಾದ  ಬಿ.ಎಂ. ಸತೀಶ್, ಎಚ್.ಎನ್. ಶಿವಕುಮಾರ್, ಎನ್.ಎ. ಮುರುಗೇಶ್ ಇದ್ದರು.
     …
     (ಬಾಕ್ಸ್)
     ರೇಣು ಲೋಕಸಭೆಗೆ ಬಂದರೆ, ನಾನು ಹೊನ್ನಾಳಿಯಿಂದ ಸ್ಪರ್ಧಿಸುವೆ
     ಲೋಕಸಭಾ ಚುನಾವಣೆಯ ಟಿಕೆಟ್ ಮೇಲೆ ಕಣ್ಣಿಟ್ಟಿರುವ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರಿಗೆ ಸಂಸದ ಜಿ.ಎಂ. ಸಿದ್ದೇಶ್ವರ ಟಾಂಗ್ ಕೊಟ್ಟಿದ್ದಾರೆ.
     ರೇಣುಕಾಚಾರ್ಯ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಾದರೆ ನಾನು ಹೊನ್ನಾಳಿ ವಿಧಾನಸಭಾ ಕ್ಷೇತ್ರದಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುವೆ. ಆಗ ನಮ್ಮದೇ ಸರ್ಕಾರ ರಚನೆ ಆಗಲಿದ್ದು ಗೆದ್ದು ಮಂತ್ರಿಯಾಗುವೆ ಎಂದು ತಿಳಿಸಿದರು.
     ಲೋಕಸಭಾ ಚುನಾವಣೆಗೆ ತಾವೂ ಆಕಾಂಕ್ಷಿ, ಆದರೆ ಪಕ್ಷದ ತೀರ್ಮಾನಕ್ಕೆ ಬದ್ಧ ಎಂದು ಪುನರುಚ್ಚರಿಸಿದ ಅವರು, ರೇಣುಕಾಚಾರ್ಯ ಅವರಿಗೆ ಆಸೆ ಇದ್ದರೆ ಲೋಕಸಭಾ ಚುನಾವಣೆಗೆ ನಿಲ್ಲಲಿ, ನಾನು ಹೊನ್ನಾಳಿ ಕ್ಷೇತ್ರಕ್ಕೆ ಹೋಗುವೆ. ಅಲ್ಲಿನ ಜನರು ನಾನು ಬರಬೇಕೆಂದು ಅಪೇಕ್ಷೆಪಟ್ಟಿದ್ದಾರೆ. ರೇಣುಕಾಚಾರ್ಯ ನನಗೆ ಶಿಫಾರಸು ಮಾಡಲಿ, ನಾನು ಅವರಿಗೆ ಶಿಫಾರಸು ಮಾಡುವೆ ಎಂದು ಹೇಳಿದರು.
     …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts