More

    ಅಮ್ಮನ ಮಡಿಲು ಸೇರಿದ ಕರಡಿ ಮರಿ

    ಹೊಸದುರ್ಗ: ಅಮ್ಮನಿಂದ ಬೇರ್ಪಟ್ಟು ತೆಂಗಿನ ಮರದ ತುತ್ತ ತುದಿಯಲ್ಲಿ ಸಿಲುಕಿದ್ದ ನಾಲ್ಕು ತಿಂಗಳ ಕರಡಿ ಮರಿಯನ್ನು ಅಗ್ನಿಶಾಮಕ ದಳ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿ ಮತ್ತೆ ತಾಯಿಯ ಮಡಿಲು ಸೇರಿಸಿದ್ದಾರೆ.

    ತಾಲೂಕಿನ ದೊಡ್ಡಘಟ್ಟ ಗ್ರಾಮದ ರೈತ ಪ್ರಸನ್ನ ಎಂಬುವವರ ತೋಟದಲ್ಲಿ ರಾತ್ರಿ ಜೇನು ತಿನ್ನಲು ತಾಯಿ ಕರಡಿ ಮರಿ ಜತೆ 40 ಅಡಿಗೂ ಎತ್ತರವಿರುವ ತೆಂಗಿನ ಮರವೇರಿದೆ. ಈ ವೇಳೆ ಆಯಾ ತಪ್ಪಿ ತಾಯಿ ಕರಡಿ ಕೆಳಗೆ ಬಿದ್ದಿದ್ದು, ಗಾಬರಿಯಿಂದ ಹತ್ತಿರದ ಗುಡ್ಡಕ್ಕೆ ಓಡಿ ಹೋಗಿದೆ.

    ಮರದ ತುದಿಯಲ್ಲಿ ಸಿಲುಕಿದ್ದ ಕರಡಿ ಮರಿ ಚೀರಾಡುತ್ತಿದ್ದನ್ನು ಮುಂಜಾನೆ ತೋಟಕ್ಕೆ ತೆರಳಿದ್ದ ಜನ ನೋಡಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿ ಮರಿಯನ್ನು ಸುರಕ್ಷಿತವಾಗಿ ಹಿಡಿಯುವ ಉದ್ದೇಶದಿಂದ ತೆಂಗಿನ ಮರ ಹತ್ತಲು ಅಗ್ನಿಶಾಮಕ ದಳದ ನೆರವು ಪಡೆದರು.

    ಅಂದಾಜು ಮೂರು ಗಂಟೆ ಕಾರ್ಯಾಚರಣೆ ನಡೆಸಿ ಕರಡಿ ಮರಿಯನ್ನು ಸುರಕ್ಷಿತವಾಗಿ ಮರದಿಂದ ಕೆಳಗಿಳಿಸಿದರು. ನಂತರ ಅರಣ್ಯ ಇಲಾಖೆ ಸಿಬ್ಬಂದಿ ಚಿತ್ರದುರ್ಗಕ್ಕೆ ತೆಗೆದುಕೊಂಡು ಹೋಗಿದ್ದರು.

    ಮಧ್ಯಾಹ್ನದ ವೇಳೆ ತಾಯಿ ಕರಡಿ ತೋಟದ ಬಳಿ ಬಂದು ಆರ್ಭಟಿಸುವ ಮೂಲಕ ಜನರಿಗೆ ಆತಂಕ ಮೂಡಿಸಿತ್ತು. ವಿಷಯ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿ ಕರಡಿ ಮರಿಯನ್ನು ತೋಟದ ಬಳಿ ಕರೆತಂದು ಬಿಡುತ್ತಿದಂತೆ ದೂರದಲ್ಲಿದ್ದ ತಾಯಿ ಕರಡಿ ಓಡಿ ಬಂದು ಮರಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಸಮೀಪದ ಅರಣ್ಯದಲ್ಲಿ ಮರೆಯಾಯಿತು. ಈ ದೃಶ್ಯ ಕಣ್ಮುಂಬಿಕೊಂಡ ಇಲಾಖೆ ಸಿಬ್ಬಂದಿ, ಸ್ಥಳೀಯ ಜನರು ಸಂಭ್ರಮಿಸಿದರು.

    ಕಾರ್ಯಾಚರಣೆಯಲ್ಲಿ ಆರ್‌ಎಫ್‌ಒ ಪ್ರದೀಪ್ ಪವಾರ್, ರಾಘವೇಂದ್ರ, ಅಗ್ನಿಶಾಮಕ ದಳದ ಎಸ್‌ಐ ತಾರಾನಾಯ್ಕ, ಸಿಬ್ಬಂದಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts