More

    ದ್ವೇಷದ ವಿಷ ಬೀಜ ಬಿತ್ತುವ ಪಕ್ಷಗಳತ್ತ ಇರಲಿ ಎಚ್ಚರ

    ಹೊಸದುರ್ಗ: ಜಾತ್ಯತೀತ ಭಾರತ, ಪೂರ್ವಿಕರ ದೊಡ್ಡ ಕೊಡುಗೆ. ಅದನ್ನು ಉಳಿಸಿಕೊಂಡು ಹೋಗುವ ಬಹುದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ರಾಜ್ಯ ರೈತ ಸಂಘದ ಕಾರ್ಯಾದ್ಯಕ್ಷ ಈಚಘಟ್ಟ ಸಿದ್ದವೀರಪ್ಪ ತಿಳಿಸಿದರು.

    ಗೊರವಿನಕಲ್ಲು ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ರೈತ ಸಂಘದ ಮಹಿಳಾ ಗ್ರಾಮ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಸ್ವಾರ್ಥಕ್ಕಾಗಿ ಜಾತಿ, ಧರ್ಮದ ವಿಷಬೀಜವನ್ನು ಬಿತ್ತುವ ಕೆಲಸವನ್ನು ರಾಜಕೀಯ ಪಕ್ಷಗಳು ಮಾಡುತ್ತಿವೆ. ಈ ಕುರಿತು ಸದಾ ಎಚ್ಚರಿಕೆ ವಹಿಸಬೇಕು ಎಂದರು.

    ಸರ್ಕಾರಗಳು ಜಾತಿ ಹೆಸರಿನಲ್ಲಿ ಕೃಷಿ ಮತ್ತು ಶಿಕ್ಷಣ ಕ್ಷೇತ್ರವನ್ನು ಒಡೆಯುವ ಕೆಲಸ ಮಾಡುತ್ತಿವೆ. ರೈತರಲ್ಲಿ ಯಾವುದೇ ಜಾತಿ ತಾರತಮ್ಯವಿಲ್ಲ, ಕೃಷಿಕರೆಲ್ಲ ಒಂದೇ ಜಾತಿಗೆ ಸೇರಿದವರಾಗಿದ್ದಾರೆ. ವಿದ್ಯಾರ್ಥಿಗಳಿಗೆ ಹಾಗೂ ರೈತರಿಗೆ ಸರ್ಕಾರ ಸೌಲಭ್ಯಗಳನ್ನು ಒದಗಿಸುವಾಗ ಜಾತಿ ತಾರತಮ್ಯ ಮಾಡಬಾರದು ಎಂದು ಒತ್ತಾಯಿಸಿದರು.

    ಚುನಾವಣಾ ವ್ಯವಸ್ಥೆ ಕೂಡ ಜಾತಿ, ಹಣದ ಮೇಲೆ ನಡೆಯುತ್ತಿರುವುದು ಸಂವಿಧಾನಕ್ಕೆ ಮಾಡುತ್ತಿರುವ ದ್ರೋಹವಾಗಿದೆ. ಬೆಂಬಲ ಬೆಲೆ ರಾಗಿ ಖರೀದಿಗೆ ಸರ್ಕಾರ ದೊಡ್ಡ ರೈತರು ಮತ್ತು ಸಣ್ಣ ರೈತರು ಎಂದು ವಿಭಾಗ ಮಾಡಿರುವುದು ಸರಿಯಲ್ಲ. ದೊಡ್ಡ ರೈತರು ಕೂಡ ದೇಶದ ಜನರಿಗಾಗಿಯೇ ಬೆಳೆ ಬೆಳೆಯುತ್ತಿದ್ದಾರೆ ಎನ್ನುವುದನ್ನು ಸರ್ಕಾರ ತಿಳಿದುಕೊಳ್ಳಬೇಕು. ರೈತರು ಬೆಳೆದ ಬೆಳೆಯನ್ನು ಯಾವುದೇ ಷರತ್ತಿಲ್ಲದೆ ಖರೀದಿಸುವ ವ್ಯವಸ್ಥೆ ಜಾರಿಯಾಗಬೇಕು ಎಂದು ಆಗ್ರಹಿಸಿದರು.

    ಕೃಷಿಕರಿಗೆ ಪ್ರೋತ್ಸಾಹಧನದ ಹೆಸರಿನಲ್ಲಿ 6 ಸಾವಿರ ನೀಡುತ್ತಿರುವ ಸರ್ಕಾರ, ಮತ್ತೊಂದೆಡೆ ರಸಗೊಬ್ಬರದ ಬೆಲೆ ಹೆಚ್ಚಿಸುವ ಮೂಲಕ ವಂಚನೆ ಮಾಡುತ್ತಿದೆ. ಪೆಟ್ರೋಲ್, ಅಡುಗೆ ಅನಿಲ, ಕೃಷಿ ಉಪಕರಣಗಳ ಬೆಲೆ ಹೆಚ್ಚಳದಿಂದ ರೈತ ಸಮುದಾಯ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಎಲ್ಲವನ್ನೂ ವ್ಯಾಪಾರದ ದೃಷ್ಟಿಯಲ್ಲಿ ನೋಡುತ್ತಿರುವ ಸರ್ಕಾರಗಳಿಂದ ರೈತರ ಹಿತ ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು.

    ರೈತ ಸಂಘದ ತಾಲೂಕಾಧ್ಯಕ್ಷ ಚಿತ್ತಪ್ಪ, ಮುಖಂಡರಾದ ಸಾವಿತ್ರಮ್ಮ, ಪಲ್ಲವಿ, ದೊಡ್ಡಮ್ಮ, ಸುಮಾ, ಶಿವಕುಮಾರ್, ಕರಿಸಿದ್ದಯ್ಯ, ಬೋರೇಶ್ ಅರಲಹಳ್ಳಿ, ರಘು, ಪ್ರಕಾಶ್, ಹರೀಶ್ ಇತರರಿದ್ದರು.

    ರೈತರ ಹಿತ ಕಾಯದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಹೋರಾಟ ನಡೆಸುವ ಮೂಲಕ ಕೃಷಿಕರಿಗೆ ನ್ಯಾಯ ದೊರಕಿಸಲು ರೈತ ಸಂಘ ಬದ್ಧತೆ ಹೊಂದಿದೆ. ಕೃಷಿಕರು ಒಗ್ಗಟ್ಟು ಪ್ರದರ್ಶಿಸುವ ಮೂಲಕ ಜನವಿರೋಧಿ ನೀತಿ ಹಿಂಪಡೆಯುವಂತೆ ಸರ್ಕಾರದ ಮೇಲೆ ಒತ್ತಡ ತರಬೇಕಿದೆ.
    ಕೊರಟಿಕೆರೆ ಮಹೇಶ್ವರಪ್ಪ ರಾಜ್ಯ ರೈತಸಂಘದ ಸದಸ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts