More

    ಆಹಾರ ವಿತರಣೆ ಫೋಟೋಕ್ಕಿಲ್ಲ ಅವಕಾಶ

    ಯೋಗೀಶ್ ಎಂ.ಮೇಟಿಕುರ್ಕೆ ಹೊಸದುರ್ಗ: ಅದೆಷ್ಟೋ ಜನ ಲಾಕ್‌ಡೌನ್ ಸಂಕಷ್ಟಕ್ಕೆ ಸಿಲುಕಿದವರಿಗೆ ಅಲ್ಪ ಸಹಾಯ ಮಾಡಿ ಅಗ್ಗದ ಪ್ರಚಾರ ನಡೆಯುತ್ತಿರುವವರ ನಡುವೆ ಪ್ರತಿನಿತ್ಯ ಸಾವಿರಾರು ಜನರ ಹಸಿವು ನೀಗಿಸುವ ನಿಸ್ವಾರ್ಥ ಸೇವೆಯಲ್ಲಿ ತೊಡಗಿರುವ ಯುವಕರ ತಂಡವೊಂದು ಪ್ರಚಾರದಿಂದ ದೂರವುಳಿದು ಸಾಮಾಜಿಕ ಬದ್ಧತೆ ಮೆರೆದಿದೆ.

    ಪಟ್ಟಣದ ಶ್ರೀ ಗುರು ಒಪ್ಪತ್ತಿನಸ್ವಾಮಿ ವಿರಕ್ತಮಠದಲ್ಲಿ ಕಳೆದ ತಿಂಗಳಿನಿಂದ 30 ಸಮಾನ ಮನಸ್ಕರು ಒಂದುಗೂಡಿ ಊಟವಿಲ್ಲದೆ ಪರದಾಡುವ ಜನರಿಗಾಗಿ ಮಧ್ಯಾಹ್ನ 12ರಿಂದ 3ರ ವರೆಗೆ ಊಟ ನೀಡುವ ಕಾಯಕ ಮಾಡಿಕೊಂಡು ಬಂದಿದ್ದಾರೆ.

    ಪ್ರತಿ ದಿನ ಮುಂಜಾನೆ ನಾಲ್ಕು ಗಂಟೆಗೆ ಮಾರುಕಟ್ಟೆಗೆ ತೆರಳಿ ಅಗತ್ಯ ತರಕಾರಿ ತಂದು ಗುಣಮಟ್ಟದ ಅಡುಗೆ ತಯಾರಿಸಿ ಆಹಾರವನ್ನು ಅಲ್ಯುಮಿನಿಯಮ್ ಕವರ್‌ಗಳಲ್ಲಿ ಪ್ಯಾಕ್ ಮಾಡಿ ಆಸ್ಪತ್ರೆ, ಪೊಲೀಸ್ ಠಾಣೆ, ಪುರಸಭೆ, ಬ್ಯಾಂಕ್, ಸರ್ಕಾರಿ ಕಚೇರಿ, ಎಪಿಎಂಸಿ ಮಾರುಕಟ್ಟೆ ಮತ್ತಿತರ ಕಡೆಗಳಲ್ಲಿರುವ ಸಾರ್ವಜನಿಕರು ಹಾಗೂ ಸಿಬ್ಬಂದಿಗೆ ನೀಡುವ ಕೆಲಸ ಮಾಡಿದ್ದಾರೆ.

    ಪ್ರತಿದಿನ ಒಂದು ಕ್ವಿಂಟಾಲ್ ಅಕ್ಕಿಯಿಂದ ತಯಾರಿಸಿದ ಪಲಾವ್, ರೈಸ್‌ಬಾತ್, ವಾಂಗೀಬಾತ್, ಚಿತ್ರಾನ್ನದ ಜತೆಗೆ ಮೊಸರನ್ನ ಹಾಗೂ 250 ಮಿ.ಲೀ. ನೀರಿನ ಪ್ಯಾಕೆಟನ್ನು ಜನರಿಗೆ ತಲುಪಿಸುತ್ತಿದ್ದಾರೆ. ದಾನಿಗಳು ನೀಡಿದ ನೆರವಿನ ಜತೆಗೆ ಸ್ವಂತ ಹಣದಲ್ಲಿ ಆಹಾರ ಒದಗಿಸುವ ಕಾಯಕದಲ್ಲಿ ತೊಡಗಿದ್ದಾರೆ.

    ಯುವಕರ ತಂಡದಲ್ಲಿ ಪುರಸಭೆ ಸದಸ್ಯರು, ಉದ್ಯಮಿಗಳು, ಪತ್ರಕರ್ತರು, ಸರ್ಕಾರಿ ನೌಕರರು ಜನಸಾಮಾನ್ಯರಂತೆ ತಮ್ಮ ಕರ್ತವ್ಯದ ಜತೆಗೆ ಯಾವುದೇ ಪ್ರಚಾರ ಬಯಸದೆ ಜನ ಸೇವೆಯಲ್ಲಿ ತೊಡಗಿ ಇತರರಿಗೆ ಮಾದರಿಯಾಗಿದ್ದಾರೆ.

    ದಾಸೋಹ ಕಾರ್ಯದಲ್ಲಿ ಪಾಲ್ಗೊಳ್ಳುವ ಯಾರೂ ಕೂಡ ಪ್ರಚಾರ ಪಡೆಯಲು ಇಷ್ಟಪಡುತ್ತಿಲ್ಲ. ಜತೆಗೆ ಆಹಾರ ವಿತರಣೆ ವೇಳೆ ಫೋಟೋ ತೆಗೆಯುವುದನ್ನು ಕಡ್ಡಾಯವಾಗಿ ನಿಷೇಧಿಸಿದ್ದಾರೆ.

    ಹಸಿದವರಿಗೆ ಅನ್ನ ಕೊಟ್ಟು ಪ್ರಚಾರ ಪಡೆಯುವುದು ಸರಿಯಲ್ಲ ಎಂಬುದು ಈ ತಂಡದ ಅನಿಸಿಕೆ. ಆಕಸ್ಮಿಕ ಕಣ್ತಪ್ಪಿಸಿ ಫೋಟೋ ತೆಗೆದರೆ ಅವರನ್ನು ತಂಡದಿಂದ ಹೊರ ಹಾಕಲಾಗುತ್ತದೆ.

    ಯುವಕರ ಸೇವೆಗೆ ಗೌರವ: ಯುವಕರ ಸಾಮಾಜಿಕ ಕಾರ್ಯವನ್ನು ಮೆಚ್ಚಿ ಗುರು ಒಪ್ಪತ್ತಿನ ಸ್ವಾಮಿ ಮಠದ ಆಡಳಿತ ಸಮಿತಿ ಭಾನುವಾರ ಯುವಕರನ್ನು ಶ್ರೀಮಠಕ್ಕೆ ಕರೆಯಿಸಿ ಗೌರವಿಸಿತು. ಮಠದ ವ್ಯವಸ್ಥಾಪಕ ಚನ್ನಬಸವಯ್ಯ, ಒಪ್ಪತ್ತಿನಸ್ವಾಮಿ ಬ್ಯಾಂಕ್ ಅಧ್ಯಕ್ಷ ಸಿದ್ದಪ್ಪ, ಜಗದೀಶ್, ರೇಣುಕಪ್ಪ, ಷಡಕ್ಷರಪ್ಪ, ಸಿದ್ದರಾಮಣ್ಣ ಮತ್ತಿತರರಿದ್ದರು.

    ಒಪ್ಪತ್ತಿಸ್ವಾಮಿ ವಿರಕ್ತಮಠ ಕಾರ್ಯದರ್ಶಿ ಕೆ.ಎಸ್.ಕಲ್ಮಠ್ ಹೇಳಿಕೆ: ಯುವಕರ ತಂಡ ಮೋಜು ಮಸ್ತಿ ಮಾಡುವಂತಹ ಹವ್ಯಾಸ ಬೆಳಸಿಕೊಳ್ಳದೆ ನೊಂದವರ ಸೇವೆಗಾಗಿ ಮಿಡಿದಿರುವುದು ಸಂತಸದ ಸಂಗತಿ. ಇಂತಹ ಯುವಕರಿಂದ ಸಮಾಜ ಸುಧಾರಣೆ ಸಾಧ್ಯ. ಯಾವುದೇ ಪ್ರಚಾರವಿಲ್ಲದೆ ಸಾವಿರಾರು ಜನರ ಹಸಿವು ನೀಗಿಸುವ ಕೆಲಸ, ಅದು ಸ್ವಂತ ಹಣದಿಂದ ಕೈಗೊಂಡ ಸೇವೆ ಶ್ಲಾಘನಾರ್ಹ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts