More

    ರೋಡಿಗಿಳಿದ ಪುಂಡರಿಗೆ ಲಾಠಿ ರುಚಿ

    ಹೊಸದುರ್ಗ: ಕರೊನಾ ಸೋಂಕು ನಿಯಂತ್ರಣಕ್ಕಾಗಿ ಹೊಸದುರ್ಗ ತಾಲೂಕನ್ನು ಬುಧವಾರ ಸಂಪೂರ್ಣ ಲಾಕ್‌ಡೌನ್ ಮಾಡಲಾಗಿತ್ತು.

    ಯುಗಾದಿ ಹಬ್ಬದ ಕಾರಣ ಸರ್ಕಾರದ ಆದೇಶ ಮೀರಿ ರಸ್ತೆಗಿಳಿದ ಜನರನ್ನು ಮನೆಗೆ ಕಳುಹಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

    ಮುಂಜಾನೆಯೇ ಪಿಎಸ್‌ಐ ಶಿವಕುಮಾರ್ ನೇತೃತ್ವದಲ್ಲಿ ಎರಡು ತಂಡಗಳಾಗಿ ಪೊಲೀಸರು ರಸ್ತೆಗಳಿದರು.

    ಅಗ್ನಿಶಾಮಕದಳದ ಸಿಬ್ಬಂದಿ ಅಗ್ನಿ ನಂದಕ ವಾಹನ ಸಹಾಯದಿಂದ ರಸ್ತೆಗಳಿಗೆ ಕ್ರಿಮಿನಾಶಕ ಸಿಂಪಡಿಸಿದರು. ನಿರ್ಬಂಧದ ಹೊರತಾಗಿಯೂ ರಸ್ತೆಗಿಳಿದು ಅಡ್ಡಾಡುತ್ತಿದ್ದ ಬೈಕ್ ಸವಾರರಿಗೆ ಪೊಲೀಸರು ಬೆತ್ತದ ರುಚಿ ತೋರಿಸಿ ಮನೆಗೆ ಕಳುಹಿಸಿದರು.

    ತಾಲೂಕಿನ ಹಕ್ಕಿ ತಿಮ್ಮಯ್ಯನಹಟ್ಟಿ, ಹಳೆ ಕುಂದೂರು, ಬಾಗೂರು ಮತ್ತಿತರ ಗ್ರಾಮಗಳಲ್ಲಿ ಗ್ರಾಮಸ್ಥರೇ ರಸ್ತೆ ಬಂದ್ ಮಾಡಿ ಹೊರಗಿನ ಜನರು ಗ್ರಾಮ ಪ್ರವೇಶಿಸದಂತೆ ನಿರ್ಬಂಧ ಹೇರಿದ್ದರು.

    ಶಿವನೆಕಟ್ಟೆ ಗ್ರಾಮಸ್ಥರು ಜನರಲ್ಲಿ ಜಾಗೃತಿ ಮೂಡಿಸುವ ಜತೆಗೆ ಗ್ರಾಮದಿಂದ ಯಾರೂ ಹೊರ ಹೋಗದಂತೆ ಹಾಗೂ ಒಳ ಬಾರದಂತೆ ಸ್ವಯಂ ನಿರ್ಬಂಧ ವಿಧಿಸಿಕೊಂಡಿದ್ದಾರೆ.

    ಮಧ್ಯಾಹ್ನ ಪುರಸಭೆ ಸಭಾಂಗಣದಲ್ಲಿ ಪೊಲೀಸರು ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿದರು. ತರಕಾರಿ, ದಿನಸಿ ಮತ್ತಿತರ ಅಗತ್ಯವಸ್ತುಗಳ ಖರೀದಿಗೆ ಸುವ್ಯವಸ್ಥಿತ ಅವಕಾಶ ಒದಗಿಸುವ ಕುರಿತು ವರ್ತಕರು ಹಾಗೂ ಜನಪ್ರತಿನಿಧಿಗಳಿಂದ ಸಲಹೆ ಪಡೆದರು.

    ಸಿಪಿಐ ಫೈಜುಲ್ಲಾ ಮಾತನಾಡಿ, ಸರ್ಕಾರದ ಆದೇಶ ಪಾಲನೆಗೆ ಜನರು ಸಹಕಾರ ನೀಡಬೇಕು. ಪರಿಸ್ಥಿತಿ ಕೈ ಮೀರಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಮಾರಕ ಕರೊನಾ ವಿರುದ್ಧ ಹೋರಾಡಲು ಎಲ್ಲರ ಸಹಕಾರ ಅಗತ್ಯ ಎಂದರು.

    ಪಿಎಸ್‌ಐ ಶಿವಕುಮಾರ್ ಮಾತನಾಡಿ, ತರಕಾರಿ ಹಾಗೂ ದಿನಸಿ ಸಾಮಗ್ರಿ ಮನೆ ಬಾಗಿಲಲ್ಲೇ ಸಿಗುವ ಅವಕಾಶ ಕಲ್ಪಿಸಲಾಗುವುದು. ತರಕಾರಿ ಗಾಡಿಗಳು ಬೀದಿಗೆ ಬಂದಾಗ ಒಬ್ಬರ ನಂತರ ಒಬ್ಬರು ಖರೀದಿಸಬೇಕು. ಪುರಸಭೆ ಟ್ಯಾಂಕರ್ ಬಂದಾಗ ಒಬ್ಬೊಬ್ಬರಾಗಿಯೇ ನೀರು ಹಿಡಿದುಕೊಳ್ಳಬೇಕು ಎಂದು ಎಚ್ಚರಿಸಿದರು.

    ಮನುಕುಲಕ್ಕೆ ಮಾರಕವಾಗಿರುವ ಕರೊನಾ ಹೊಡೆದೋಡಿಸಲು ಪ್ರತಿಯೊಬ್ಬರು ಸೈನಿಕರಂತೆ ಕೆಲಸ ಮಾಡಬೇಕು. ಹೊಸದುರ್ಗ ಠಾಣೆಯಲ್ಲಿ ಕೇವಲ 40 ಮಂದಿ ಸಿಬ್ಬಂದಿ ಇದ್ದಾರೆ. ಎಲ್ಲವನ್ನು ನಾವೇ ಮಾಡುವುದು ಅಸಾಧ್ಯ. ಜನರೇ ಸ್ವಯಂ ಪೊಲೀಸರಂತೆ ಕೆಲಸ ಮಾಡಬೇಕು. ಅನಗತ್ಯವಾಗಿ ಮನೆಯಿಂದ ಹೊರಬರಬಾರದು ಎಂದು ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts