ಹೊಸದುರ್ಗ: ಎಸ್‌ಎಸ್‌ಎಲ್‌ಸಿ ಮಕ್ಕಳು ಭಯವಿಲ್ಲದೆ ಪರೀಕ್ಷೆಯನ್ನು ಎದುರಿಸಿ ತಾಲೂಕಿಗೆ ಉತ್ತಮ ಫಲಿತಾಂಶ ತರಬೇಕು ಎಂದು ಶಾಸಕ ಗೂಳಿಹಟ್ಟಿ ಡಿ.ಶೇಖರ್ ತಿಳಿಸಿದರು.
ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿಗೆ ಗುರುವಾರ ಭೇಟಿ ನೀಡಿದ ಅವರು ಪರೀಕ್ಷಾ ಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಮಕ್ಕಳಲ್ಲಿ ಧೈರ್ಯ ತುಂಬಿದರು.
ಕರೊನಾ ಸಮಸ್ಯೆಯಿಂದ ಪರೀಕ್ಷೆ ತಡವಾಗಿದೆ. ಆದರೂ ರಾಜ್ಯ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಂಡಿದೆ. ತಾಲೂಕಿನಲ್ಲಿ ಮಕ್ಕಳಿಗೆ ಯಾವುದೇ ಸಮಸ್ಯೆ ಆಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಮಕ್ಕಳು ಪರೀಕ್ಷೆಗೆ ಹಾಜರಾಗಿ ಶೈಕ್ಷಣಿಕ ಪ್ರಗತಿ ಸಾಧಿಸಬೇಕು ಎಂದರು.
ಪರೀಕ್ಷೆ ಬರೆಯುವ ಪ್ರತಿ ವಿದ್ಯಾರ್ಥಿಗೂ ಮಾಸ್ಕ್ ಒದಗಿಸಿದರು. ಬಿಇಒ ಎಲ್.ಜಯಪ್ಪ ಇತರರು ಉಪಸ್ಥಿತರಿದ್ದರು.
ತಾಲೂಕಿನ 12 ಕೇಂದ್ರಗಳಲ್ಲಿ 2757 ವಿದ್ಯಾರ್ಥಿಗಳು ಹಾಜರಾಗಿದ್ದರು. ಒಟ್ಟು 3013 ವಿದ್ಯಾರ್ಥಿಗಳಿದ್ದು, 256 ಮಂದಿ ಗೈರಾಗಿದ್ದರು. 60 ಜನ ಬೇರೆ ತಾಲೂಕಿನ ವಲಸೆ ವಿದ್ಯಾರ್ಥಿಗಳು ಪರೀಕ್ಷೆ ಬರೆದರು.