More

    ಮಳೆಯಿಂದ ತೋಟಗಾರಿಕೆ ಬೆಳೆ ನಷ್ಟ: ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ

    ಮೈಸೂರು: ಬಿರುಗಾಳಿ ಮತ್ತು ಆಲಿಕಲ್ಲು ಮಳೆಯಿಂದ ಅಪಾರ ಪ್ರಮಾಣದ ಬಾಳೆ ಮತ್ತು ಇತರ ತೋಟಗಾರಿಕೆ ಬೆಳೆ ನಷ್ಟವಾಗಿದೆ. ಹೀಗಾಗಿ ಸರ್ಕಾರ ಕೂಡಲೇ ನಷ್ಟದ ಅಂದಾಜು ಸಿದ್ಧಪಡಿಸಿ ಪರಿಹಾರ ನೀಡಬೇಕು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಸರ್ಕಾರವನ್ನು ಆಗ್ರಹಿಸಿದರು.
    ರಾಜ್ಯದಲ್ಲಿ ಈ ವರ್ಷ ಕಂಡರಿಯದ ಬರದಿಂದ ತತ್ತರಿಸಿದ್ದ ರೈತರಿಗೆ ಈಗ ಆಲಿಕಲ್ಲು ಮಳೆ ಹಾಗೂ ಬಿರುಗಾಳಿಯಿಂದಾಗಿ ಇದ್ದ ಫಸಲು ನಾಸವಾಗಿದೆ. ಹೀಗಾಗಿ ಸರ್ಕಾರ ಮಳೆಯಿಂದ ಉಂಟಾಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
    ರೈತರು ಸ್ವಂತ ಬಂಡವಾಳ ಹಾಗೂ ಶ್ರಮ ಹಾಕಿ ಕೃಷಿ ಪಂಪ್‌ಸೆಟ್‌ಗಳ ಮೂಲಕ ಹಣ್ಣು-ತರಕಾರಿ ಮತ್ತು ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದಾರೆ. ಆದರೆ ಅಕ್ರಮ ಸಕ್ರಮಕ್ಕೆ ಹಾಗೂ ಹೊಸ ಸಂಪರ್ಕಕ್ಕೆ ರಾಜ್ಯ ಸರ್ಕಾರ ಈ ಸಾಲಿನಲ್ಲಿ ಹೆಚ್ಚಿಸಿರುವ ದುಬಾರಿ ಶುಲ್ಕದಿಂದಾಗಿ ರೈತರು ಸಂಪರ್ಕ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಇದೇ ವೇಳೆ ಬೇಸರ ವ್ಯಕ್ತಪಡಿಸಿದರು.
    ಹೊಸ ಸಂಪರ್ಕಕ್ಕೆ 2.50 ಲಕ್ಷ ರೂ. ಇದ್ದ ಶುಲ್ಕವನ್ನು 3 ಲಕ್ಷ ರೂ.ಗೆ ಹೆಚ್ಚಿಸಲಾಗಿದ್ದು, ಸರ್ಕಾರ ಈ ವೆಚ್ಚ ಕೈಬಿಟ್ಟು ಹಳೇ ಶುಲ್ಕ ಮುಂದುವರಿಸಬೇಕು. ಮಲೆನಾಡಿನ ಕಾಫಿ ಬೆಳೆಗಾರರ ಕೃಷಿ ಪಂಪ್‌ಸೆಟ್ ಶುಲ್ಕವನ್ನು ರೈತರೇ ಮೊದಲು ಪಾವತಿಸಬೇಕು ಹಾಗೂ ನಂತರ ಸರ್ಕಾರ ಅದನ್ನು ವಾಪಸ್ ತುಂಬಿಕೊಡುವುದಾಗಿ ಮಾಡಿರುವ ತೀರ್ಮಾನ ಹಿಂಪಡೆಯಬೇಕು. 10 ಎಚ್‌ಪಿ ಕೃಷಿ ಪಂಪ್‌ಸೆಟ್‌ಗಳಿಗೆ ಬೇರೆಲ್ಲ ರೈತರಿಗೆ ಅನುಸರಿಸುತ್ತಿರುವ ನೀತಿಯನ್ನು ಕಾಫಿ ಬೆಳೆಗಾರರಿಗೂ ಅನ್ವಯಿಸಬೇಕು ಎಂದು ಆಗ್ರಹಿಸಿದರು.
    ಕಬ್ಬಿನ ಬಾಕಿ ಪಾವತಿಸಿ, ಎಸ್‌ಎಪಿ ಘೋಷಿಸಬೇಕು. ಕೊಬ್ಬರಿ ಖರೀದಿಯಲ್ಲಿ ಕಿರುಕುಳ ತಪ್ಪಿಸಬೇಕು. ಬರ ಪರಿಹಾರದ ಬಗ್ಗೆ ಸರ್ಕಾರ ಸ್ವತಃ ವಿಶೇಷ ಪ್ಯಾಕೇಜ್ ಘೋಷಿಸಬೇಕು, ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಕೋರಿದರು.
    ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಕಿರುಕುಳ ಪ್ರಕರಣದ ತನಿಖೆ ದಿಕ್ಕು ತಪ್ಪಬಾರದು. ಈ ಹಗರಣವನ್ನು ಪರಸ್ಪರ ರಾಜಕೀಯ ಕೆಸರೆರೆಚಾಟಕ್ಕೆ ಬಳಸಿಕೊಳ್ಳುತ್ತಿರುವುದರಿಂದಾಗಿ ಅಮಾಯಕ ಮಹಿಳೆಯರ ಮಾನಹಾನಿ ಆಗುತ್ತಿದೆ. ಹೀಗಾಗಿ ಆರೋಪ-ಪ್ರತ್ಯಾರೋಪ ವೇಳೆ ಸಂಸ್ಕೃತಿ ಮರೆಯಬಾರದು ಎಂದು ಹೇಳಿದರು.
    ರೈತ ಸಂಘದ ರಾಜ್ಯ ಕಾರ್ಯದರ್ಶಿ ಗೋಪಾಲ್ ಪಾಪೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸರವಾಜು, ಮುಖಂಡರಾದ ಆನಂದೂರು ಪ್ರಭಾಕರ್, ಮಂಡಕಳ್ಳಿ ಮಹೇಶ್, ಪ್ರತಾಪ್‌ಕುಮಾರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts