More

    ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಅದ್ದೂರಿ ರಥೋತ್ಸವ

    ಕಳಸ: ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಿ ಜಾತ್ರೆ ರಥೋತ್ಸವ ಬುಧವಾರ ನಡೆಯಿತು. ಗಣಪತಿ ಪೂಜೆ, ರಂಗಪೂಜೆಯೊಂದಿಗೆ ಆರಂಭಗೊಂಡ ಉತ್ಸವ ಅದ್ದೂರಿಯಾಗಿ ನೆರವೇರಿತು.
    ಹೊರನಾಡು, ಕಳಸ, ಚಿಕ್ಕನಕುಡಿಗೆ, ಬಲಿಗೆ, ಬಾಳೆಹೊಳೆ, ಕುದುರೆಮುಖ, ಜಾಂಬ್ಳೆ, ನೆಲ್ಲಿಬೀಡು, ಕಲ್ಕೋಡು, ಮರಸಣಿಗೆ, ಹಿರೇಬೈಲು, ಕಲ್ಮಕ್ಕಿ, ಜಾವಳಿ, ಹಳುವಳ್ಳಿ, ಮುನ್ನೂರುಪಾಲ್, ಬಸರೀಕಟ್ಟೆ, ಹೊರ ರಾಜ್ಯದಿಂದಲೂ ಸಾವಿರಾರು ಭಕ್ತರು ಬಂದು ದೇವರ ದರ್ಶನ ಪಡೆದು ಗಂಧ ಪ್ರಸಾದ ಸ್ವೀಕರಿಸಿದರು.
    ಊರನ್ನು ಸ್ವಚ್ಛಗೊಳಿಸಿ ತಳಿರುತೋರಣಗಳಿಂದ ಅಲಂಕಾರ ಮಾಡಲಾಗಿತ್ತು. ಇಡೀ ದೇವಾಲಯ ವಿದ್ಯುತ್‌ದೀಪಗಳಿಂದ ಶೃಂಗಾರಗೊಂಡಿತ್ತು. ರಸ್ತೆಯ ಇಕ್ಕೆಲಗಳಲ್ಲಿನ ಅಂಗಡಿಗಳು ಜಾತ್ರೆಗೆ ಇನ್ನಷ್ಟು ಮೆರುಗು ನೀಡಿದವು. ಭವ್ಯ ಬ್ರಹ್ಮರಥದಲ್ಲಿ ಶ್ರೀ ಅನ್ನಪೂರ್ಣೇಶ್ವರಿ ವಿರಾಜಮಾನರಾಗುವುದನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಕಾತರದಿಂದ ಕಾಯುತ್ತಿದ್ದರು. ಮಧ್ಯಾಹ್ನ 12 ಗಂಟೆಗೆ ಸ್ತುತಿ ಪಾಠಕರು ಸ್ತುತಿ ಘೋಷಗಳನ್ನು ಪಠಿಸುತ್ತ, ಚತ್ರಿ ಚಾಮರ ಮಂಗಳವಾದ್ಯ ಹಾಗೂ ಹೂವಿನ ಅಲಂಕಾರದೊಂದಿಗೆ ಸಿಂಗರಿಸಿ ಶ್ರೀ ದೇವರ ಉತ್ಸವ ಮೂರ್ತಿಯನ್ನು ಹೊತ್ತುಕೊಂಡು ಬಂದರು.
    ರಥದ ಬಳಿ ಬಂದ ಅನ್ನಪೂರ್ಣೇಶ್ವರಿಯನ್ನು ಭವ್ಯ ರಥದಲ್ಲಿ ಕುಳ್ಳಿರಿಸಿ ಪೂಜೆ ಮಾಡಲಾಯಿತು. ಆ ವೇಳೆ ಭಕ್ತರು ದೇವರಿಗೆ ಲ, ಪುಷ್ಪ ಅರ್ಚನೆ ಸೇವೆ ಮಾಡುವುದರೊಂದಿಗೆ ತಾವು ಬೆಳೆದ ಕಾಫಿ, ಕಾಳುಮೆಣಸು, ಏಲಕ್ಕಿ ಮುಂತಾದ ದವಸ ಧಾನ್ಯಗಳನ್ನು ಬ್ರಹ್ಮರಥಕ್ಕೆ ಎಸೆದರು.
    ಭಕ್ತರು ರಥದ ಚಕ್ರಕ್ಕೆ ತೆಂಗಿನಕಾಯಿಯನ್ನು ಒಡೆದು ಹರಕೆ ತೀರಿಸಿಕೊಂಡರು. ನಂತರ ಅಲಂಕೃತಗೊಂಡ ಭವ್ಯ ಬ್ರಹ್ಮ ರಥವನ್ನು ಎಳೆದರು. ಈ ಸುಂದರ ದೃಶ್ಯವನ್ನು ಭಕ್ತರು ಕಣ್ತುಂಬಿಸಿಕೊಂಡರು.
    ರಾತ್ರಿ ವೇಳೆ ರಾಜಬೀದಿಯಲ್ಲಿ ಗ್ರಾಮ ಪ್ರದಕ್ಷಿಣೆ ಹಾಕಲಾಯಿತು. ಜಾತಿ, ಮತ, ವರ್ಗ ಭೇದವಿಲ್ಲದೆ ಸರ್ವಜನಾಂಗವೂ ವಿನಮ್ರಪೂರ್ವಕವಾಗಿ ಭಕ್ತಿಯಿಂದ ನಮಿಸಿದರು. ಕೆಲವರು ಮನೆ ಬಾಗಿಲಲ್ಲಿ ಹಣ್ಣು, ಕಾಯಿ, ಲ ಪುಷ್ಪಗಳನ್ನು ದೇವಿಗೆ ಅರ್ಪಿಸಿ ಸಂಕಷ್ಟಗಳನ್ನು ನಿವಾರಿಸುವಂತೆ ಕೋರಿದರು. ಗ್ರಾಮದುದ್ದಕ್ಕೂ ಮೆರವಣಿಗೆ ವೈಭವಯುತವಾಗಿ ಸಾಗಿ ಮರಳಿ ದೇಗುಲ ತಲುಪಿತು. ರಾಜ ಬೀದಿಯಲ್ಲಿ ಸಾಗುವಾಗ ಚಂಡೆ, ಓಲಗ ಸೇರಿ ವಿವಿಧ ವಾದ್ಯಗಳು ಹಾಗೂ ವೇಷಭೂಷಣಗಳು ನೋಡುಗರ ಗಮನಸೆಳೆಯಿತು.
    ದೇವಾಲಯದ ಧರ್ಮಕರ್ತ ಡಾ. ಜಿ.ಭೀಮೇಶ್ವರ ಜೋಷಿ ಸೇರಿದಂತೆ ಜೋಷಿ ಕುಟುಂಬ ವರ್ಗ ಹಾಗೂ ಸಮಸ್ತ ಭಕ್ತರು ಭವ್ಯ ರಥೋತ್ಸವಕ್ಕೆ ಸಾಕ್ಷಿಯಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts