More

    ರೈತರ ನಿದ್ದೆಗೆಡಿಸಿದ ಕಳ್ಳರು

    ಹೊಳಲ್ಕೆರೆ: ತಾಲೂಕಿನ ಗಡಿಭಾಗದ ಉಪ್ಪರಿಗೇನಹಳ್ಳಿ, ಕೆರೆಯಾಗಲಹಳ್ಳಿ, ಚೌಡಗೊಂಡನಹಳ್ಳಿಯಲ್ಲಿ ಈಚೆಗೆ ಕೃಷಿ ಬೆಳೆ ಹಾಗೂ ಪರಿಕರಗಳ ಕಳ್ಳತನದಂತಹ ಕೃತ್ಯಗಳು ಹೆಚ್ಚಾಗುತ್ತಿದ್ದು, ಕೆರೆಯಾಗಲಹಳ್ಳಿಯಲ್ಲಿ ಶ್ರೀಗಂಧ ಮರಗಳ ಕಳ್ಳತನವಾಗಿ ವಾರ ಕಳೆಯುವ ಮೊದಲೇ ಕೇಬಲ್ ಕದ್ದಿರುವುದು ರೈತರನ್ನು ಕಂಗೆಡಿಸಿದೆ.

    ಕೆರೆಯಾಗಲಹಳ್ಳಿಯಲ್ಲಿ ಎರಡ್ಮೂರು ತಿಂಗಳ ಹಂತದಲ್ಲಿ 10 ಲಕ್ಷ ರೂ. ಮೌಲ್ಯದ 20 ಶ್ರೀಗಂಧ ಮರಗಳು ಕಳ್ಳತನವಾಗಿವೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಒಂದು ಸಣ್ಣ ತುಂಡೂ ಪತ್ತೆಯಾಗಲ್ಲಿಲ್ಲ. ಜಮೀನಿನಲ್ಲಿರುವ ಬೆಲೆ ಬಾಳುವ ಉಪಕರಣಗಳು, ಸಾಮಗ್ರಿಗಳು ಕಳ್ಳತನ ನಿರಾಂತಕವಾಗಿ ನಡೆಯುತ್ತಿದೆ.

    ಕೃಷಿಕರು ಅಡಕೆ, ತೆಂಗು, ಬಾಳೆ, ತೋಟಗಾರಿಕೆ ಜತೆ ಹಣ್ಣು, ಹೂವು, ತರಕಾರಿ ಬೆಳೆಯುತ್ತಾರೆ. ಅದಕ್ಕೆ ನೀರಿನ ಮೂಲ ಅಗತ್ಯವಾಗಿದೆ. ಅದಕ್ಕಾಗಿ ರೈತರು ಕೊಳವೆಬಾವಿ ಹಾಕಿಸಿ, ಮೋಟರ್ ಅಳವಡಿಸಿ, ಪೈಲ್‌ಲೈನ್ ಹಾಕಲು ಲಕ್ಷಾಂತರ ಹಣ ವ್ಯಯಿಸಿರುತ್ತಾರೆ. ಆದರೂ ಜೀವನಕ್ಕೆ ಆಧಾರವಾದ ಕೃಷಿ ಕೈಗೊಳ್ಳಲೇಬೇಕಾದ ಕಠಿಣ ಸ್ಥಿತಿಯ ನಡುವೆಯೂ ಈಚೆಗೆ ತೋಟ, ಹೊಲದ ಕೊಳವೆಬಾವಿಯ ಮೋಟರ್, ವೈರ್, ಪೈಪ್‌ಗಳ ಕಳ್ಳತನ ಕೃಷಿಕನಿಗೆ ಸಂಕಷ್ಟಕ್ಕೆ ತಳ್ಳಿವೆ.

    ಲಕ್ಷಾಂತರ ರೂ. ಮೌಲ್ಯದ ಕೇಬಲ್ ಕಳವು: ಚೌಡಗೊಂಡನಹಳ್ಳಿಯ 10ಕ್ಕೂ ಅಧಿಕ ಜಮೀನುಗಳ ಕೊಳವೆಬಾವಿಗಳಲ್ಲಿ ಲಕ್ಷಾಂತರ ರೂ. ಮೌಲ್ಯದ ಕೇಬಲ್ ಕಳವಾಗಿವೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ನಿತ್ಯ ದೂರುಗಳು ದಾಖಲಾಗುತ್ತಲೇ ಇವೆ. ಉಪ್ಪರಿಗೇನಹಳ್ಳಿ ರೈತ ಕೆ.ಸಿ.ದಿನೇಶ್ ಪ್ರತಿಕ್ರಿಯಿಸಿ, ಶ್ರೀಗಂಧ ಮರಗಳ ದಿಂಡುಗಳನ್ನು ರಾತ್ರೋರಾತ್ರಿ ಕಳವಾಗುತ್ತಿದ್ದರೂ ಪೊಲೀಸ್ ಇಲಾಖೆ ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಯಶಸ್ಸು ಕಾಣುತ್ತಿಲ್ಲ. ಸರ್ಕಾರದ ರಕ್ಷಣೆ ಇಲ್ಲದೆ ಶ್ರೀಗಂಧ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಕಳ್ಳರು ರೈತ ಪ್ರಾಣ ತೆಗೆದರೂ ಅಚ್ಚರಿಯಿಲ್ಲ ಎಂದರು.

    ಹೊಳಲ್ಕೆರೆ ಸಿಪಿಐ ರವೀಶ್ ಮಾತನಾಡಿ, ಕಳ್ಳರ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದೆ. ಶೀಘ್ರದಲ್ಲಿ ಪತ್ತೆ ಹಚ್ಚುವ ಸಾಧ್ಯತೆ ಇದ್ದು, ಮಾಲು ಸಹಿತ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts