More

    ಸಾಮಾಜಿಕ ನ್ಯಾಯ ಜಾರಿಗೆ ತಂದ ಬಿಜೆಪಿ

    ದಾವಣಗೆರೆ : ಕೇವಲ ಭಾಷಣದಿಂದ ಸಾಮಾಜಿಕ ನ್ಯಾಯ ಸಿಗುವುದಿಲ್ಲ, ಅದನ್ನು ನಿಜವಾದ ಅರ್ಥದಲ್ಲಿ ಅನುಷ್ಠಾನಕ್ಕೆ ತಂದಿದ್ದು ಬಿಜೆಪಿ ಸರ್ಕಾರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
     ಹೊನ್ನಾಳಿ ಪಟ್ಟಣದಲ್ಲಿ ಶುಕ್ರವಾರ, ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ 1933 ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ ಮಾತನಾಡಿದರು.
     ಬಿ.ಎಸ್. ಯಡಿಯೂರಪ್ಪ ಸಿಎಂ ಇದ್ದಾಗ ಭಾಗ್ಯಲಕ್ಷ್ಮೀ ಯೋಜನೆ ಜಾರಿಗೆ ತಂದರು, ಅದರಲ್ಲಿ ಶೇ. 30 ರಷ್ಟು ಅಲ್ಪಸಂಖ್ಯಾತರಿಗೆ ಸೌಲಭ್ಯ ದೊರೆಯಿತು. ಅವರ ಅವಧಿಯಲ್ಲಿ ಕಾಗಿನೆಲೆ ಅಭಿವೃದ್ಧಿಯಾಯಿತು. ವಾಲ್ಮೀಕಿ ಹಾಗೂ ಸೇವಾಲಾಲ್ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಣೆಗೆ ತಂದರು. ತಾಂಡಾ ಅಭಿವೃದ್ಧಿ ನಿಗಮ, ಭೋವಿ ಅಭಿವೃದ್ಧಿ ನಿಗಮ ರಚಿಸಿ ಆ ಸಮುದಾಯಗಳಿಗೆ ನ್ಯಾಯ ಒದಗಿಸಿದರು ಎಂದರು.
     ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೀಸಲು ಹೆಚ್ಚಳ ಮಾಡಲು ಹೊರಟಾಗ ಜೇನುಗೂಡಿಗೆ ಕೈಹಾಕಬೇಡಿ ಎಂದು ಕೆಲವರು ಹೇಳಿದರು. ಆದರೆ ತಮಗೆ ಜೇನುಹುಳು ಕಚ್ಚಿದರೂ ಪರವಾಗಿಲ್ಲ, ಆ ಸಮುದಾಯಗಳಿಗೆ ಜೇನುತುಪ್ಪ ಸಿಗಬೇಕು ಎಂಬ ನಿಲುವು ತಾಳಿದ್ದಾಗಿ ಹೇಳಿದರು.
     ಪ್ರವಾಹದಿಂದ ಸಂಪೂರ್ಣ ಹಾನಿಗೊಳಗಾದ ಮನೆಗಳಿಗೆ 5 ಲಕ್ಷ, ಅಲ್ಪ ಹಾನಿಯಾದ ಮನೆಗಳಿಗೆ 3 ಲಕ್ಷ ರೂ.ಗಳ ಪರಿಹಾರವನ್ನು ಬಿ.ಎಸ್.ವೈ ಅವಧಿಯಲ್ಲಿ ನೀಡಲಾಯಿತು. ಬೆಳೆ ನಾಶಕ್ಕೆ 4 ಲಕ್ಷ ರೈತರಿಗೆ 3 ಸಾವಿರ ಕೋಟಿ ರೂ.ಗಳ ಪರಿಹಾರವನ್ನು ಒಂದು ತಿಂಗಳಲ್ಲಿ ನೀಡಿದ ದಾಖಲೆ ಡಬಲ್ ಇಂಜಿನ್ ಸರ್ಕಾರದ್ದು ಎಂದರು.
     ರೈತ ವಿದ್ಯಾನಿಧಿ ಯೋಜನೆ 13 ಲಕ್ಷ ಮಕ್ಕಳಿಗೆ ತಲುಪಿದೆ. ಯಶಸ್ವಿನಿ ಯೋಜನೆಯನ್ನು ಮತ್ತೆ ಜಾರಿಗೆ ತರಲಾಗಿದೆ. ಪ್ರತಿ ರೈತನಿಗೆ ಜೀವವಿಮೆ ನೀಡಲು 180 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಬ್ಯಾಂಕ್ ಸಾಲ 5 ಲಕ್ಷ ರೂ.ಗಳಿಗೆ ಏರಿಸಲಾಗಿದೆ. ಹೆಣ್ಣು ಮಕ್ಕಳಿಗೆ ಸ್ತ್ರೀ ಸಾಮರ್ಥ್ಯ ಯೋಜನೆ, ಯುವಕರಿಗೆ ಸ್ವಾಮಿ ವಿವೇಕಾನಂದ ಯೋಜನೆಯಡಿ ಸ್ವಯಂ ಉದ್ಯೋಗ ನೀಡುವ ಬೃಹತ್ ಕಾರ್ಯಕ್ರಮ ಜಾರಿಯಾಗಿದೆ ಎಂದು ವಿವರಿಸಿದರು.
     ದೇಶದ ಪ್ರತಿ ಮನೆಗೆ ಕುಡಿಯುವ ನೀರು ಒದಗಿಸುವುದಾಗಿ ಪ್ರಧಾನಿ ಮೋದಿ 3 ವರ್ಷಗಳ ಹಿಂದೆ ಘೋಷಿಸಿದ್ದರು. ಅದರಂತೆ 12 ಕೋಟಿ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts