More

    ಕಾಂತರಾಜ್ ವರದಿ ಜಾರಿಗೆ ಆಗ್ರಹಿಸಿ ಹೊನ್ನಾಳಿ ಎಸಿಗೆ ಮನವಿ

    ಹೊನ್ನಾಳಿ: ಕಾಂತರಾಜ್ ವರದಿಯನ್ನು ಕೂಡಲೆ ಜಾರಿಗೆ ಆಗ್ರಹಿಸಿ ತಾಲೂಕು ಅಹಿಂದ ಒಕ್ಕೂಟದ ಮುಖಂಡರು ಬುಧವಾರ ಪಟ್ಟಣದ ಟಿ.ಬಿ. ವೃತ್ತದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಉಪಉಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಅವರಿಗೆ ಮನವಿ ಸಲ್ಲಿಸಿದರು.

    ತಾಲೂಕು ಅಹಿಂದ ಒಕ್ಕೂಟದ ಅಧ್ಯಕ್ಷ ಡಾ. ಈಶ್ವರನಾಯ್ಕ ಮಾತನಾಡಿ, ಪಟ್ಟಭದ್ರಾ ಹಿತಾಸಕ್ತಿಗಳು ಶೈಕ್ಷಣಿಕ, ಸಾಮಾಜಿಕ, ಜಾತಿ ಜನಗಣತಿ ವರದಿ ಮಂಡನೆಗೆ ಅಡ್ಡಿಪಡಿಸುತ್ತಿರುವುದು ಸರಿಯಲ್ಲ. ಈ ವರದಿ ಇನ್ನೂ ಯಾರ ಕೈಗೂ ಸೇರಿಲ್ಲ. ಆದರೂ ಅದನ್ನು ಹತ್ತಿಕ್ಕುವ ಪ್ರಯತ್ನಗಳು ಕೆಲವೊಂದು ಮೇಲ್ವರ್ಗದವರಿಂದ ನಡೆಯುತ್ತಿರುವುದು ಸರಿಯಲ್ಲ. ಇಂತಹ ಪ್ರಯತ್ನ ಮುಂದುವರಿದರೆ ಮುಂದಿನ ದಿನಗಳಲ್ಲಿ ರಾಜ್ಯದ ಅಹಿಂದ ವರ್ಗ ಸಂಘಟಿಸಿ ಹೋರಾಟ ನಡೆಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.

    ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಎಚ್.ಎ. ಉಮಾಪತಿ ಮಾತನಾಡಿ, ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ. 80ರಷ್ಟಿರುವ ಅಹಿಂದ ವರ್ಗಗಳಿಗೆ ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರವೂ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ನ್ಯಾಯ ಸಿಕ್ಕಿಲ್ಲ. ಈ ಎಲ್ಲ ವರ್ಗಗಳ ಸ್ಥಿತಿಗತಿ ಅರಿಯಲು 2015ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂತರಾಜ್ ಅವರನ್ನು ನೇಮಿಸಿ ವರದಿ ನೀಡುವಂತೆ ಸೂಚಿಸಿದ್ದರು. ಅದರಂತೆ ಕಾಂತರಾಜ್ ಅವರು ಮನೆ ಮನೆ ಸರ್ವೇ ನಡೆಸಿದ್ದು ಸಮರ್ಪಕವಾಗಿದೆ. ಆದರೆ, ಕೆಲ ಪ್ರಬಲ ಸಮುದಾಯಗಳು ಅದನ್ನು ಪರಾಮರ್ಶೆ ಮಾಡದೇ ಏಕಾಏಕಿ ವಿರೋಧಿಸುತ್ತಿರುವುದು ಸರಿಯಲ್ಲ ಎಂದರು.

    ಜಿಪಂ ಮಾಜಿ ಅಧ್ಯಕ್ಷ ಆರ್. ನಾಗಪ್ಪ ಮಾತನಾಡಿ, ಸರ್ಕಾರ ತನ್ನದೇ ಆದ ನಿಯಮಗಳಡಿ ಮನೆ ಮನೆಗೆ ಭೇಟಿ ನೀಡಿ ವರದಿ ತಯಾರಿಸಿದೆ. ಆದರೆ, ಅದನ್ನು ಕೆಲವೇ ವರ್ಗದವರು ವರದಿ ಬಿಡುಗಡೆ ಮಾಡಿದರೆ ತಮ್ಮ ರಾಜಕೀಯ ಅಸ್ತಿತ್ವಕ್ಕೆ ಕುತ್ತು ಬರುತ್ತದೋ ಎನ್ನುವ ಕಾರಣಕ್ಕೆ ವಿರೋಧಿಸುತ್ತಿದ್ದಾರೆ ಎಂದು ದೂರಿದರು.

    ಕರವೇ ಅಧ್ಯಕ್ಷ ಎಸ್.ಎಸ್. ಶ್ರೀನಿವಾಸ್, ಎಂ.ಎಸ್. ಪಾಲಾಕ್ಷಪ್ಪ, ಎಚ್.ಎ. ರಂಜಿತ್, ವಕೀಲರಾದ ಚಂದ್ರಪ್ಪ, ಮಾರಿಕೊಪ್ಪ ಮಂಜು, ಬೆನಕನಹಳ್ಳಿ ಪರಮೇಶ್, ತಾಲೂಕು ಬಂಜಾರ ಸಂಘದ ಅಧ್ಯಕ್ಷ ಅಂಜುನಾಯ್ಕ, ರಾಜು ಕಡಗಣ್ಣಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts