More

    ಬರಡು ಭೂಮಿಯಲ್ಲಿ ಹಸಿರು ವನ ನಿರ್ಮಿಸಿದ ಸಾಧಕ ‘ಶಿಕ್ಷಕಿ’

    ಶ್ರೀನಿವಾಸ್ ಟಿ.ಹೊನ್ನಾಳಿ
    ಹೆಣ್ಣು ಸಮಾಜದ ಕಣ್ಣು ಅಂತಾರೆ. ಗುರು-ಮಾತೆಯಾಗಿ ಸಮಾಜವನ್ನು ತಿದ್ದಬಲ್ಲಳು. ಇಂದಿನ ಯಾಂತ್ರಿಕ ಯುಗದಲ್ಲಿ ಔದ್ಯೋಗಿಕವಾಗಿ ಕೂಡ ಛಾಪು ಮೂಡಿಸುತ್ತಿದ್ದಾಳೆ. ಹೊಲ-ಮನೆಯಲ್ಲಿ ಆಳಾಗಿ ದುಡಿದು ಕುಟುಂಬ ನಿರ್ವಹಿಸುತ್ತ ತಾನೇನು ಎಂಬುದನ್ನು ನಿರೂಪಿಸುತ್ತಲೇ ಇದ್ದಾಳೆ.

    ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಲ್ಲಳು ಎಂಬುದಕ್ಕೆ ಹೊನ್ನಾಳಿ ತಾಲೂಕು ರಾಮೇಶ್ವರದ ಕೃಷಿ ಸಾಧಕಿ ಯಶೋಧಮ್ಮ ಮಹೇಶ್ವರಪ್ಪ ನಿದರ್ಶನ. ಮೂಲತಃ ಶಿವಮೊಗ್ಗದವರಾದ ಇವರು ರಾಮೇಶ್ವರದ ಮಹೇಶ್ವರಪ್ಪ ಅವರನ್ನು ವರಿಸಿ ಬಂದಾಗ ಸ್ವಾಗತಿಸಿದ್ದು 15 ಎಕರೆ ಬರಡು ಭೂಮಿ.

    ಶೈಕ್ಷಣಿಕವಾಗಿ ಬಿಎ, ಬಿ.ಎಡ್. ಪದವಿಧರೆಯಾದ ಯಶೋಧಮ್ಮ ರಾಮೇಶ್ವರಕ್ಕೆ ಬಂದ ಹೊಸದರಲ್ಲಿ ಒಂದೆರಡು ವರ್ಷ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದರು. ಬಳಿಕ ಕೃಷಿಯತ್ತ ಒಲವು ತೋರಿ ಪತಿ ಮಹೇಶ್ವರಪ್ಪ ಅವರಿಗೆ ಸಾಥ್ ನೀಡತೊಡಗಿದರು. ಕ್ರಮೇಣ ಕೃಷಿಯಲ್ಲೇ ಸಕ್ರಿಯರಾಗಿ, ಕ್ರಿಯಾಶೀಲರಾಗಿ ಹೊಸ ಹೊಸ ಪದ್ಧತಿ, ಆವಿಷ್ಕಾರಗಳನ್ನು ಅಳವಡಿಸಿಕೊಂಡು ಸಾಫಲ್ಯತೆ ಪಡೆಯುತ್ತಿದ್ದಾರೆ.

    ಬರಡು ಭೂಮಿಯನ್ನು ಈಗ ಹಸಿರುವನವಾಗಿದಿದ್ದಾರೆ. ಅಡಕೆ, ತೆಂಗಿನಂತಹ ವಾಣಿಜ್ಯ ಬೆಳೆ ಜತೆಗೆ ದ್ವಿದಳ ಧಾನ್ಯ, ಸಂಬಾರ ಉತ್ಪನ್ನಗಳ ಬೆಳೆ ಬೆಳೆದು. ಹೆಚ್ಚು ಹೆಚ್ಚು ಆದಾಯ ಪಡೆಯುತ್ತ ಬಂಗಾರದ ಬದುಕು ನಡೆಸುತ್ತಿದ್ದಾರೆ ಈಗ.

    ಸಮಗ್ರ ಕೃಷಿ ಪದ್ಧತಿ:

    15 ಎಕರೆ ಜಮೀನಿನಲ್ಲಿ ಅಡಕೆ, ತೆಂಗಿನ ಮಧ್ಯೆ ಮೆಕ್ಕೆಜೋಳ, ಎಲೆಬಳ್ಳಿ, ಶೇಂಗಾ, ತೊಗರಿ, ಬಾಳೆ, ಕಾಫಿ, ಈರುಳ್ಳಿ, ಬೆಳ್ಳುಳ್ಳಿ, ಉದ್ದು, ಕೊತ್ತಂಬರಿ, ಸಾಸಿವೆ, ನಿಂಬೆ ಗಿಡ, ಚಕ್ಕೆ, ಲವಂಗ, ಏಲಕ್ಕಿ ಹೀಗೆ ತರಹಾವರಿ ಬೆಳೆಗಳನ್ನು ಬೆಳೆಯುತ್ತ ವರ್ಷಕ್ಕೆ ಕನಿಷ್ಠ 20 ಲಕ್ಷ ರೂ. ವಹಿವಾಟು ನಡೆಸುತ್ತಿದ್ದು, 13 ಲಕ್ಷ ರೂ. ಆದಾಯ ಗಳಿಸುತ್ತ ಆರ್ಥಿಕವಾಗಿ ಸದೃಢರಾಗಿದ್ದಾರೆ. ಕೃಷಿ ಜತೆಗೆ ಬಿಡುವಿನ ವೇಳೆಯಲ್ಲಿ ಹೈನುಗಾರಿಕೆ, ಜೇನು ಸಾಕಾಣಿಕೆಯಲ್ಲಿ ತೊಡಗಿಕೊಳ್ಳುತ್ತಾರೆ.

    ಸಾವಯವ ಗೊಬ್ಬರ

    ತಮ್ಮ ಜಮೀನಲ್ಲಿ ಬೆಳೆಗೆ ರಾಸಾಯನಿಕ ಗೊಬ್ಬರಕ್ಕೆ ತಿಲಾಂಜಲಿ ಇಟ್ಟು, ಸಾವಯವ ಗೊಬ್ಬರ ಬಳಕೆಗೆ ಪ್ರಾಧಾನ್ಯತೆ ನೀಡಿದ್ದಾರೆ. ಎರೆಹುಳು ಸಾಕಾಣಿಕೆ, ಅಜೋಲಾ ಘಟಕ, ಜೀವಾಮೃತ ಬಳಕೆ ಹಾಗೂ ಸುಧಾರಿತ ಕಾಂಪೋಸ್ಟ್ ಗೊಬ್ಬರ ಬಳಸುತ್ತ ಇಳುವರಿ ವೃದ್ಧಿಸಿಕೊಂಡಿದ್ದಾರೆ. ಕೃಷಿ ವಿವಿ, ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ ಹಾಗೂ ಸಂಘ ಸಂಸ್ಥೆಗಳು ಏರ್ಪಡಿಸುವ ವಿವಿಧ ತರಬೇತಿ ಶಿಬಿರಗಳಲ್ಲಿ ತೊಡಗಿ ಹೆಚ್ಚು ಹೆಚ್ಚು ಅನುಭವ ಪಡೆದುಕೊಳ್ಳುವ ಯಶೋಧಮ್ಮ ಫಸಲಿನ ಇಳುವರಿ ಹೆಚ್ಚಿಸಿಕೊಳ್ಳುವಲ್ಲಿ ಇತರರಿಗೆ ಮಾದರಿ ಮಾತ್ರವಲ್ಲ, ಅನೇಕ ಮಹಿಳೆಯರನ್ನೂ ಕೃಷಿಗೆ ಪ್ರೇರೇಪಿಸುತ್ತಿದ್ದು, ಯಶಸ್ವಿ ರೈತ ಮಹಿಳೆಯಾಗಿ ಹೊರಹೊಮ್ಮಿದ್ದಾರೆ.

    ಪ್ರಶಸ್ತಿ ಪುರಸ್ಕಾರ:

    ಪ್ರಗತಿಪರ ಕೃಷಿ ಸಾಧಕಿ ಯಶೋಧಮ್ಮ ಅವರಿಗೆ ಶಿವಮೊಗ್ಗ ಕೃಷಿ ವಿಶ್ವವಿದ್ಯಾನಿಲಯದಿಂದ ಶ್ರೇಷ್ಠ ಕೃಷಿಕ ಮಹಿಳೆ ಪ್ರಶಸ್ತಿ ಮಾತ್ರವಲ್ಲದೆ ಹಲವಾರು ಸಂಘ-ಸಂಸ್ಥೆಗಳಿಂದಲೂ ಸನ್ಮಾನ, ಪ್ರಶಸ್ತಿಗಳು ಅರಸಿ ಬಂದಿವೆ.

    ಕೃಷಿಯನ್ನು ನಂಬಿ ಯಾರೂ ಕೆಟ್ಟಿಲ್ಲ. ಶ್ರಮಪಟ್ಟು ಬೇಸಾಯ ಮಾಡಿದರೆ ಭೂ ತಾಯಿ ಕೈ ಹಿಡಿಯುತ್ತಾಳೆ. ಯಾವುದೇ ಬೆಳೆಯಾಗಲಿ ಸಕಾಲಕ್ಕೆ ಸರಿಯಾದ ಕ್ರಮದಲ್ಲಿ ಬಿತ್ತನೆ, ನಾಟಿ ಮಾಡಿ ಕೊನೆ ತನಕ ಸಂರಕ್ಷಣೆಯಲ್ಲಿ ಗಮನ ಹರಿಸಿದರೆ ನೂರಕ್ಕೆ ನೂರು ಯಶಸ್ವಿ ಕಾಣುತ್ತೇವೆ. ಇದೇ ಕೃಷಿಯ ಗುಟ್ಟು.

    ಯಶೋಧಮ್ಮ, ಪ್ರಗತಿಪರ ರೈತ ಮಹಿಳೆ

    ಕೃಷಿಯಲ್ಲಿ ಮಹಿಳೆಯರ ಪಾತ್ರ ದೊಡ್ಡದು. ಈ ನಿಟ್ಟಿನಲ್ಲಿ ಪೌಷ್ಠಿಕ ಕೈತೋಟದ ಮೂಲಕ ಕುಟುಂಬಕ್ಕೆ ಸಾವಯವ ತರಕಾರಿಗಳನ್ನು ಬೆಳೆಯುವದರ ಜೊತೆಗೆ ಗ್ರಾಮದ ಮಹಿಳೆಯರಿಗೆ ಆದಾಯೋತ್ಪನ್ನ ಕೃಷಿ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದರಲ್ಲಿ ಯಶೋಧಮ್ಮ ಅವರು ಪ್ರಗತಿಪರ ಮಹಿಳೆಯಾಗಿ ಉತ್ತಮ್ಮ ಕೃಷಿ ಕಾಯಕರಾಗಿ ತೊಡಗಿಸಿಕೊಂಡಿರುವುದು ಇಡೀ ಮಹಿಳಾ ಕುಲಕ್ಕೆ ಹೆಮ್ಮೆಯ ಸಂಗತಿ.

    – ಎಂ.ಜಿ.ಬಸವನಗೌಡ, ತೋಟಗಾರಿಕೆ ವಿಜ್ಞಾನಿ,
    ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ದಾವಣಗೆರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts