More

    ಆನೆ ಹಾವಳಿ ತಡೆಗೆ ಜೇನು ಬೇಲಿ

    ಭರತ್ ಶೆಟ್ಟಿಗಾರ್ ಮಂಗಳೂರು
    ದಕ್ಷಿಣ ಕನ್ನಡ ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ಆನೆ ಸಹಿತ ವಿವಿಧ ಕಾಡು ಪ್ರಾಣಿಗಳ ಹಾವಳಿ ಸಾಮಾನ್ಯ. ಒಂದು ಸಲ ಆನೆ ದಾಳಿಯಿಟ್ಟಿತೆಂದರೆ ಸಂಪೂರ್ಣ ಬೆಳೆ ಸರ್ವನಾಶ. ಆನೆ ನಾಡಿಗೆ ಬರದಂತೆ ಸರ್ಕಾರ ಅರಣ್ಯ ಇಲಾಖೆ ಮೂಲಕ ಹಲವು ರೀತಿಯ ಅಧುನಿಕ ಕ್ರಮಗಳನ್ನು ಅನುಸರಿಸುತ್ತಿದ್ದರೂ, ನಿರೀಕ್ಷಿತ ಯಶಸ್ಸು ನೀಡಿಲ್ಲ. ಈಗ ‘ಜೇನು ಬೇಲಿ’ ಎನ್ನುವ ಹಳೇ ಪದ್ಧತಿ ಅನುಸರಿಸುವತ್ತ ಇಲಾಖೆ ಚಿಂತನೆ ನಡೆಸಿದೆ.

    ಈಗಾಗಲೇ ರಾಜ್ಯದ ಬಂಡೀಪುರ-ನಾಗರಹೊಳೆ ಪ್ರದೇಶ ಮತ್ತು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಶಿರಸಿ ಭಾಗದಲ್ಲಿ ಅರಣ್ಯ ಇಲಾಖೆ ಸಹಕಾರದಿಂದ ಈ ಪದ್ಧತಿ ಯಶಸ್ವಿಯಾಗಿದೆ. ಮೊದಲ ಬಾರಿಗೆ ಮಹಾರಾಷ್ಟ್ರದಲ್ಲಿ ಜೇನು ಬೇಲಿ ನಿರ್ಮಿಸಲಾಗಿತ್ತು. ಆನೆಗಳಿಗೆ ಜೇನಿನ ಕುರಿತಂತೆ ಹೆದರಿಕೆ ಹೆಚ್ಚಿರುವುರಿಂದ ಜೇನು ಬೇಲಿಗಳ ಮೂಲಕವೂ ಅವುಗಳನ್ನು ಹಿಮ್ಮೆಟ್ಟಿಸಬಹುದಾಗಿದೆ. ಜೇನು ನೊಣಗಳಿರುವ ಕಡೆ ಆನೆಗಳು ಸುಳಿಯುವುದಿಲ್ಲ. ಇದು ಕಡಿಮೆ ವೆಚ್ಚದಲ್ಲಿ ಅನುಸರಿಸಲು ಸಾಧ್ಯವಿರುವುದರಿಂದ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲು ಅರಣ್ಯ ಇಲಾಖೆ ಉದ್ದೇಶಿಸಿದೆ.

    ಜಿಲ್ಲೆಯ ಬೆಳ್ತಂಗಡಿ, ಸುಳ್ಯ, ಸುಬ್ರಹ್ಮಣ್ಯ, ಕಡಬ ಭಾಗದಲ್ಲಿ ಆನೆಗಳ ಓಡಾಟ ಹೆಚ್ಚಾಗಿದ್ದು, ಅರಣ್ಯ ಇಲಾಖೆ ಸೋಲಾರ್ ಬೇಲಿ, ನೇತಾಡುವ ಬೇಲಿ, ಆನೆ ಕಂದಕದ ಮೂಲಕ ತಡೆಯಲು ಪ್ರಯತ್ನಿಸುತ್ತಿದೆ. ಎನಿಡರ್ಸ್ (ಎಎನ್‌ಐಡಿಇಆರ್‌ಎಸ್) ಹೆಸರಿನ ಆಧುನಿಕ ಉಪಕರಣದ ಮೂಲಕ ಪ್ರಾಣಿಗಳು ನಾಡಿನತ್ತ ಬರುವುದನ್ನು ಸೆನ್ಸರ್ ಪತ್ತೆ ಹಚ್ಚಿ ಶಬ್ದದ ಮೂಲಕ ಹಿಮ್ಮೆಟ್ಟಿಸುವ ವ್ಯವಸ್ಥೆಯೊಂದನ್ನು ಸುಳ್ಯ ವಲಯದಲ್ಲಿ ಕಳೆದ ವರ್ಷ ಪ್ರಾಯೋಗಿಕವಾಗಿ ಅಳವಡಿಸಲಾಗಿದೆ. ಆದರೂ ಆನೆಗಳು ನಾಡಿಗೆ ಬರುವುದು ನಿಂತಿಲ್ಲ.

    ಏನಿದು ಯೋಜನೆ?: ರೈತರ ಜಮೀನಿನ ಹೊರಭಾಗದಲ್ಲಿ ಕೆಳಮಟ್ಟದಲ್ಲಿ ಒಣಗಿದ, ಒಳಭಾಗ ಟೊಳ್ಳಾಗಿರುವ ಮರದ ಕಾಂಡಭಾಗವನ್ನು ಮರಗಳಿಗೆ ನೇತು ಹಾಕಬೇಕು. ಕಾಡಂಚಿನ ರೈತರ ತಮ್ಮ ಜಮೀನಿನ ಸುತ್ತಲೂ ಅಲ್ಲಲ್ಲಿ ಇಡಬೇಕು. ಅದರೊಳಗೆ ಸಕ್ಕರೆ ಪಾಕ, ಅಡುಗೆಗೆ ಬಳಸುವ ಚೆಕ್ಕೆ, ಜೇನುಮೇಣ ಮೊದಲಾದವುಗಳನ್ನು ಇಡಬೇಕು. ಕಾಡಿನಲ್ಲಿ ಕುಟುಂಬದಿಂದ ಪಾಲಾಗಿ ಬರುವ ಜೇನುನೊಣಗಳು ಇದರಲ್ಲಿ ವಾಸವಾಗುತ್ತವೆ. ಹೀಗೆ ಜಮೀನಿನ ಸುತ್ತ ಅಳವಡಿಸುವುದರಿಂದ ಆನೆಗಳು ಸುಳಿಯದಂತೆ ತಡೆಬಹುದಾಗಿದೆ. ಕಾಡು ಹಂದಿ, ಮಂಗಗಳ ಹಾವಳಿಯನ್ನೂ ಇದರಿಂದ ತಡೆಯಬಹುದು.

    ರೈತರಿಗೂ ಅನುಕೂಲ: ಜೇನು ಬೇಲಿ ಅಳವಡಿಸುವುದರಿಂದ ರೈತರಿಗೂ ಅನುಕೂಲ. ಪರಾಗಸ್ಪರ್ಶದ ಕಾರಣದಿಂದ ಅಡಕೆ, ತೆಂಗು ಸೇರಿದಂತೆ ಉತ್ತಮ ಫಸಲು ನಿರೀಕ್ಷಿಸಬಹುದು. ಜತೆಗೆ ಜೇನು ಕೂಡ ಸಿಗುವುದರಿಂದ ಶ್ರಮವಿಲ್ಲದೆ ರೈತರ ಆದಾಯದಲ್ಲೂ ಹೆಚ್ಚಳವಾಗುತ್ತದೆ. ಪ್ರತೀ ಪೊಟರೆಯಲ್ಲೂ ಅಂದಾಜು ಮೂರು ಕೆ.ಜಿ.ಯಷ್ಟು ಜೇನು ದೊರೆಯುತ್ತದೆ ಎನ್ನುವುದು ಈಗಾಗಲೇ ಈ ಪ್ರಯೋಗ ಮಾಡಿರುವ ಉತ್ತರ ಕನ್ನಡ ಜಿಲ್ಲೆಯ ಕೃಷಿಕರ ಮಾತು.

    ಜೇನು ಬೇಲಿ ಅಳವಡಿಕೆ ಒಂದು ಹಳೇ ಪದ್ಧತಿಯಾಗಿದ್ದು, ಆನೆ ಸೇರಿದಂತೆ ಕಾಡು ಪ್ರಾಣಿಗಳು ಗ್ರಾಮೀಣ ಭಾಗಕ್ಕೆ ಬಾರದಂತೆ ತಡೆಯುವ ನಿಟ್ಟಿನಲ್ಲಿ ಈ ಕ್ರಮ ಅನುಸರಿಸಬಹುದಾಗಿದೆ. ಸರ್ಕಾರಕ್ಕೆ ಈ ಕುರಿತ ಪ್ರಸ್ತಾವನೆ ಕಳುಹಿಸಲು ಉದ್ದೇಶಿಸಲಾಗಿದ್ದು, ಮೊತ್ತ ಬಿಡುಗಡೆಯಾದರೆ ಎಲ್ಲ ಭಾಗದಲ್ಲೂ ದೊಡ್ಡ ಮಟ್ಟದಲ್ಲಿ ಮಾಡಬಹುದಾಗಿದೆ.
    – ಡಾ.ವಿ.ಕರಿಕಳನ್, ಉಪ ಅರಣ್ಯ ಸಂರಕ್ಷಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts