More

    ಆಗಸವೇ ಈ ಬಡ ಕುಟುಂಬಕ್ಕೆ ಛಾವಣಿ ; ಮಳೆ ಬಂದಾಗಲೆಲ್ಲ ಜಾಗರಣೆಯೇ ಗತಿ

    ಮಧುಗಿರಿ: ಪುರವರ ಹೋಬಳಿ ಗಂಕಾರ‌್ಲಹಳ್ಳಿಯ ದಲಿತ ಕುಟುಂಬಕ್ಕೆ 5 ವರ್ಷಗಳಿಂದ ಆಗಸವೇ ಛಾವಣಿಯಾಗಿದೆ, ಚಿಕ್ಕದಾದ ಮುರುಕು ಮನೆಯಲ್ಲೇ ಜೀವ ಹಿಡಿದು ದಿನದೂಡುತ್ತಿದೆ!.

    ಮಕ್ಕಳು, ಮೊಮ್ಮಕ್ಕಳು ಸೇರಿ 12 ಮಂದಿಯೊಂದಿಗೆ ನರಸಿಂಹಪ್ಪ ಮತ್ತು ನಾಗರತ್ನಮ್ಮ ದಂಪತಿ ತುತ್ತು ಅನ್ನಕ್ಕೆ, ಮಾನ ಮುಚ್ಚಿಕೊಳ್ಳಲು ಪರಡಾಡುವ ದುಸ್ಥಿತಿಯಲ್ಲಿದೆ. ಮಾಜಿ ಡಿಸಿಎಂ, ಹಾಲಿ ಶಾಸಕ ಡಾ.ಜಿ.ಪರಮೇಶ್ವರ ಪ್ರತಿನಿಧಿಸುವ ಕೊರಟಗೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗಂಕಾರ‌್ಲಹಳ್ಳಿಯ ಈ ಕುಟುಂಬಕ್ಕೆ ಇದುವರೆಗೂ ಸರ್ಕಾರದ ಅನ್ನಭಾಗ್ಯ ಬಿಟ್ಟರೆ ಬೇರೆ ಯಾವ ಸೌಲಭ್ಯಗಳೂ ದೊರೆತಿಲ್ಲ.

    ಮಳೆ ಬಂದರೆ ಚಪ್ಪರದ ಆಸರೆ!: ಸೂರಿಗಾಗಿ ಗ್ರಾಮ ಪಂಚಾಯಿತಿ ಕಚೇರಿಗೆ ಅಲೆದು ಪಾದ ಸವೆದದ್ದು ಬಿಟ್ಟರೆ ಸೂರಿನ ಆಸರೆ ಇದುವರೆಗೂ ಸಿಕ್ಕಿಲ್ಲ, ಯಾವ ಅಧಿಕಾರಿಗಳೂ ಸಮಸ್ಯೆ ಆಲಿಸಲಿಲ್ಲ, 5 ವರ್ಷಗಳ ಹಿಂದೆ ಮಧ್ಯರಾತ್ರಿ ಸುರಿದ ಜೋರು ಮಳೆಗೆ ಮನೆ ಛಾವಣಿ ಕುಸಿದು ಒಂದು ಕೋಣೆ ಸಂಪೂರ್ಣ ನೆಲಸಮವಾಗಿದ್ದು ಈಗಿರುವ ಒಂದು ಕೋಣೆಯೇ ಕುಟುಂಬಕ್ಕೆ ಆಸರೆಯಾಗಿದೆ. ಅದೂ ಸಹ ಮಳೆ ಬಂತೆಂದರೆ ಸೋರುತ್ತದೆ, ಜೋಪಡಿ ಬೀಳುವ ಭಯದಲ್ಲಿ ಮಕ್ಕಳು ಮರಿ ಕಟ್ಟಿಕೊಂಡು ಚಪ್ಪರದ ಆಸರೆ ಪಡೆಯುವ ಕುಟುಂಬಕ್ಕೆ ಜಾಗರಣೆಯೇನು ಹೊಸತಲ್ಲ.

    ಬಾಗಿಲಿಗೆ ಬಟ್ಟೆ ಕಟ್ಟಿಕೊಂಡು ಸ್ನಾನ ಮಾಡ್ಬೇಕು: ನರಸಿಂಹಪ್ಪ-ನಾಗರತ್ನಮ್ಮ ದಂಪತಿಗೆ ಮೂವರು ಹೆಣ್ಣುಮಕ್ಕಳಿದ್ದು, ಹಿರಿಯ ಮಗಳು ಶಾರದಮ್ಮಳ ಗಂಡ ಮೃತಪಟ್ಟಿದ್ದರೆ, ಎರಡನೇ ಮಗಳು ಸುಮಲತಾಳನ್ನು ಪತಿ ತೊರೆದಿದ್ದಾನೆ. ಮೂರನೇ ಮಗಳು ರಂಜಿತಾ ಪತಿ ಕೂಲಿ ಮಾಡುತ್ತಾರೆ. ಇವರಿಗೆ 6 ಮಕ್ಕಳಿದ್ದು, ಅದರಲ್ಲಿ ಬಾಲಕಿಯೊಬ್ಬಳು ಅಂಗವಿಕಲೆ. ಸ್ನಾನ ಮಾಡಲೂ ಜಾಗವಿಲ್ಲದೆ ಜೋಪಡಿಗೆ ತೆಂಗಿನ ಗರಿಗಳನ್ನು ಹೊದಿಸಿದ್ದು, ಬಾಗಿಲಿಗೆ ಅಡ್ಡಲಾಗಿ ಬಟ್ಟೆ ಕಟ್ಟಿಕೊಂಡು ಸ್ನಾನ ಮಾಡಬೇಕಾದ ದುಸ್ಥಿತಿ ಮಹಿಳೆಯರದ್ದು.

    ಬದುಕು ನಡೆಯಲ್ಲ ಸ್ವಾಮಿ: ನಮ್ಗೆ ಯಾವ್ ಇಡುಗಂಟು ಇಲ್ಲ ಸ್ವಾಮಿ, ಆವತ್ತು ದುಡಿದ್ರೆ ರಾತ್ರಿ ಒಲೆ ಉರಿಯುತ್ತೆ, ಕೂಲಿ ಬಿಟ್ಟು ಕಚೇರಿಗೆ ಅಲೆದ್ರೆ ಹೊಟ್ಟೆಗೆ ತಣ್ಣಿರೇ ಗತಿ!, ಹಿಂಗಾಗಿ ಕಚೇರಿಗೆ ಅಲೆಯೋದೇ ಬಿಟ್ಟೀನಿ, ನಮ್ ಹಣೆಬರ ಇದ್ದಹಂಗಾಗ್ಲಿ, ಈ ದೊಡ್ಡ ಮಳೆಗೆ ಈ ಜೋಪಡಿನೂ ಬಿದ್ರೆ ಅನ್ನೋ ಭಯ ಕಾಡ್ತಿದೆ, ಚಿಕ್ಕ ಮಕ್ಕಳನ್ನು ನೋಡಿದ್ರ ಕರುಳು ಕಿತ್ತುಬಂದಂಗ ಆಗತೈತ್ರಿ ಎಂದು ಕಣ್ಣೀರು ಹಾಕ್ತಾರೆ ನರಸಿಂಹಪ್ಪ-ನಾಗರತ್ನಾ.

    ಜೀವ ಉಳಿಸಿದ ಅನ್ನಭಾಗ್ಯ : ಲಾಕ್‌ಡೌನ್ ವೇಳೆ ಕೂಲಿ ಇಲ್ಲದೆ ಪಟ್ಟ ಕಷ್ಟ ಆ ದೇವರಿಗೇ ಗೊತ್ತು, ಸೊಸೈಟಿ ಅನ್ನ ನಮ್ನ ಉಳಿಸೇತಿ, 12 ಮಂದಿಗೆ ಬರೀ 20 ಕೆ.ಜಿ ಅಕ್ಕಿ ಕೊಡ್ತಾರ‌್ರಿ, ಹತ್ತೇ ದಿನಕ್ಕೆ ಖಾಲಿ ಆಕತ್ರೀ, ರೇಷನ್ ಕಾರ್ಡ್‌ನ್ಯಾಗ 4 ಮಂದಿ ಹೆಸರು ಐತಿ, ಎಲ್ಲರ ಹೆಸ್ರು ಸೇರಿಸಿದ್ರ ಕಾಳು, ಕಡಿ ತುಸು ಜಾಸ್ತಿ ಸಿಗ್ತಾವು ಎಂದು ಅಂಗಲಾಚಿದ್ರೂ ಯಾರು ಕೇಳಾಕ್ ತಯಾರಿಲ್ಲ ಅಂತಾರೆ ನರಸಿಂಹಪ್ಪ.

    ಮನೆ ಬಿದ್ದು 5 ವರ್ಷ ಕಳೆದರೂ ಕುಟುಂಬಕ್ಕೆ ಅನುಕೂಲಗಳು ದೊರೆತಿಲ್ಲ ಎಂದರೆ ಏನರ್ಥ. ಇಂತಹ ಬಡ ಕುಟುಂಬಗಳನ್ನು ಗುರುತಿಸಿ ಪಟ್ಟಿ ಮಾಡಬೇಕಾದ ಜವಾಬ್ದಾರಿ ಅಧಿಕಾರಿಗಳದ್ದು, ಕುಟುಂಬಕ್ಕೆ ಒಂದು ತಿಂಗಳ ರೇಷನ್ ನೀಡುವ ಜತೆಗೆ ಸದಸ್ಯರ ಹೆಸರು ಪಡಿತರ
    ಕಾರ್ಡ್‌ನಲ್ಲಿ ಸೇರಿಸಿ ಸಮರ್ಪಕವಾಗಿ ರೇಷನ್ ದೊರೆಯುವಂತೆ ಮಾಡಲಾಗುವುದು. ಪ್ರತೀ ಗ್ರಾಪಂ ವ್ಯಾಪ್ತಿಗೆ 20 ಮನೆಗಳು ಮಂಜೂರಾಗಿದ್ದು, ಕೊರಟಗೆರೆ ಶಾಸಕರ ಗಮನಕ್ಕೆ ತಂದು ಬಡ ಕುಟುಂಬಕ್ಕೆ ಸೂರು ಕಲ್ಪಿಸಲು ಆದ್ಯತೆ ನೀಡಲಾಗುವುದು
    ಡಾ.ವಿಶ್ವನಾಥ್ ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts