More

    ಸಾರ್ವಜನಿಕರಿಗೆ ಸ್ಪಂದಿಸದ ಪೊಲೀಸರಿಂದ ತೊಂದರೆ; ಅಧಿಕಾರಿಗಳ ವಿರುದ್ಧ ಗರಂ ಆದ ಸಚಿವರು

    ಬೆಂಗಳೂರು: ಪೊಲೀಸರೇ ಸಾರ್ವಜನಿಕರಿಗೆ ತೊಂದರೆ ಕೊಟ್ಟಿದ್ದಲ್ಲದೆ ಹಣ ವಸೂಲಿಯಂಥ ಅಕ್ರಮಗಳಲ್ಲಿ ತೊಡಗಿದ್ದ ಪ್ರಕರಣ ಇತ್ತೀಚೆಗೆ ಬಹಿರಂಗಗೊಂಡು ಜನರಿಂದ ತೀವ್ರ ಟೀಕೆಗೆ ಒಳಗಾದ ಬೆನ್ನಿಗೇ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಮಾತ್ರವಲ್ಲ, ಗೃಹ ಸಚಿವ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆದಿದ್ದು, ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ಪ್ರಸಂಗವೂ ನಡೆದಿದೆ.

    ಡಿಸಿಪಿ-ಎಸಿಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿರುವ ಗೃಹಸಚಿವರು, ಸಂಪಿಗೆಹಳ್ಳಿ ಪೊಲೀಸರು ಸಾವಿರ ರೂಪಾಯಿ ವಸೂಲಿ ಮಾಡಿದ್ದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪ್ರಕರಣ ಸಂಬಂಧ ಇಬ್ಬರು ಪೊಲೀಸರನ್ನ ಅಮಾನತು ಮಾಡಿದ್ದರೂ ಅವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

    ಪೊಲೀಸರು ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎನ್ನುವ ಬಗ್ಗೆ ನನಗೆ ದೂರುಗಳು ಬರುತ್ತಿವೆ ಎಂದು ಗರಂ ಆದ ಸಚಿವರು, ರೌಡಿಗಳ ಜೊತೆ ಶಾಮೀಲಾಗಿರುವ ಪೊಲೀಸ್ ಸಿಬ್ಬಂದಿಯನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ ಎಂದರು. ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗಬಾರದು ಎಂದು ಎಚ್ಚರಿಕೆ ನೀಡಿದ ಅವರು, ಎಸಿಪಿ-ಡಿಸಿಪಿಗಳು ಹೆಚ್ಚಾಗಿ ಪೊಲೀಸ್ ಠಾಣೆಗಳಿಗೆ ಭೇಟಿ ನೀಡುವಂತೆ ತಾಕೀತು ಮಾಡಿದರು.

    ಇಂದಿರಾನಗರ, ಹೆಣ್ಣೂರು, ಹಲಸೂರು ಸೇರಿದಂತೆ ಇನ್ನೂ ಕೆಲವು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಅತಿ ಹೆಚ್ಚು ದೂರುಗಳು ಕೇಳಿ ಬರುತ್ತಿವೆ ಎಂದಿದ್ದಲ್ಲದೆ, ಕೆ.ಆರ್.ಪುರ ಇನ್​ಸ್ಪೆಕ್ಟರ್​ ನಂದೀಶ್ ಸಾವಿನ ಪ್ರಕರಣದ ಬಗ್ಗೆ ಕೂಡ ಗರಂ ಆದರು.

    ಪೊಲೀಸರ ಜತೆ ಸಚಿವರು ಸಭೆ ನಡೆಸಿದ ಬೆನ್ನಿಗೇ ನಂತರ ಇನ್ನೊಂದು ಮಹತ್ವದ ಸಭೆ ನಡೆಯಿತು. ಬೆಂಗಳೂರಿನ ಪಬ್ ಮತ್ತು ಕ್ಲಬ್ ಮಾಲೀಕರ ಜೊತೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸಭೆ ನಡೆದಿದ್ದು, ಹೊಸವರ್ಷ ಆಚರಣೆಗೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚೆ ಮಾಡಲಾಯಿತು.

    ಪಬ್ ಮತ್ತು ಕ್ಲಬ್ ಮಾಲೀಕರಿಗೆ ಕೆಲವೊಂದು ನಿಯಮಗಳನ್ನ ಪಾಲಿಸುವಂತೆ ತಾಕೀತು ಮಾಡಿದ್ದಲ್ಲದೆ, ಕ್ಲಬ್ ಮತ್ತು ಪಬ್​ಗಳ ಒಳಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ. ಸಭೆಯಲ್ಲಿ ಪೊಲೀಸ್ ಆಯುಕ್ತರು, ಹೆಚ್ಚುವರಿ ಪೊಲೀಸ್ ಆಯುಕ್ತ, ಸಿಸಿಬಿ ಆಯುಕ್ತರು ಮತ್ತು ಎಲ್ಲ ಡಿಸಿಪಿಗಳು ಭಾಗಿಯಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts