More

    ಮನೆ ಕಟ್ಟಿಕೊಳ್ಳಲು ಪರಿಹಾರ ನೀಡಿ

    ಬೆಳಗಾವಿ: ಮಲಪ್ರಭಾ ನದಿ ಪ್ರವಾಹ ಹಾಗೂ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಮನೆ ಕಳೆದುಕೊಂಡ ರಾಮದುರ್ಗ ತಾಲೂಕಿನ ಅವರಾದಿ, ಹಂಪಿಹೊಳಿ ಗ್ರಾಮದ ಸಂತ್ರಸ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿ, ಮನೆ ನಿರ್ಮಿಸಿಕೊಳ್ಳಲು ಪರಿಹಾರ ಹಣ ನೀಡುವಂತೆ ಒತ್ತಾಯಿಸಿ, ಶುಕ್ರವಾರ ಪ್ರತಿಭಟನೆ ನಡೆಸಿದರು.

    ಅವರಾದಿ ಗ್ರಾಮದ ಜನರು ಮಲಪ್ರಭಾ ನದಿ ಪ್ರವಾಹದಿಂದ ಸತತವಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಪ್ರವಾಹದಿಂದ ಮನೆ ಕಳೆದುಕೊಂಡು ಬೀದಿಗೆ ಬಿದ್ದಿದ್ದೇವೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸ್ವತಃ ಅವರಾದಿ ಗ್ರಾಮಕ್ಕೆ ಭೇಟಿ ನೀಡಿ, ಮನೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಸೂರು ಕಟ್ಟಿಕೊಳ್ಳಲು ಆರ್ಥಿಕ ಸಹಾಯ ನೀಡಿಲ್ಲ ಎಂದು ಸಂತ್ರಸ್ತರು ಅಳಲು ತೋಡಿಕೊಂಡರು.

    ಗ್ರಾಮದ ರೈತ ಶಿವಪ್ಪ ಮೇಟಿ ಮಾತನಾಡಿ, ಪ್ರವಾಹ ಸಂಭವಿಸಿ ಎರಡು ವರ್ಷ ಕಳೆದಿದೆ. ಸಂತ್ರಸ್ತರಿಗೆ ಸರ್ಕಾರ ಯಾವ ಪರಿಹಾರವನ್ನೂ ನೀಡಿಲ್ಲ. ಮನೆ, ಕೃಷಿ ಭೂಮಿ ಕಳೆದುಕೊಂಡು ಜೀವನ ನಿರ್ವಹಣೆಗೆ ಪರದಾಡುತ್ತಿದ್ದೇವೆ. ಈ ಭಾಗದ ಶಾಸಕರು ಒಮ್ಮೆ ಮಾತ್ರ ನಮ್ಮ ಊರಿಗೆ ಬಂದವರು ಮತ್ತೆ ಇತ್ತ ತಿರುಗಿ ನೋಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಯಲ್ಲಮ್ಮ ಮೋಟೆ ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಂತ್ರಸ್ತರಿಗೆ ಮನೆ ಕಟ್ಟಿಸಿಕೊಡುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ, ಅವರು ಕೊಟ್ಟ ಮಾತು ಮರೆತಿದ್ದಾರೆ.

    ಇನ್ನು ಜಿಲ್ಲೆಯ ಸಚಿವರಾದ ಲಕ್ಷ್ಮಣ ಸವದಿ, ರಮೇಶ ಜಾರಕಿಹೊಳಿ ಅವರು ಸಹ ನಮ್ಮ ಸಮಸ್ಯೆ ಬಗೆಹರಿಸಲು ಮುಂದಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನೆರೆಯಿಂದ ಮನೆ ಹಾಗೂ ಕೃಷಿ ಭೂಮಿ ಹಾಳಾಗಿ ಜೀವನ ನಿರ್ವಹಣೆ ಕಷ್ಟವಾಗಿದೆ. ಇನ್ನಾದರೂ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಶೀಘ್ರ ಕ್ರಮಕ್ಕೆ ಮುಂದಾಗಬೇಕು. ಇಲ್ಲವಾದರೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಶಿವಮೂರ್ತಿಸ್ವಾಮಿ ಫಲಾರೇಶ್ವರಮಠ, ಮಲ್ಲಿಕಾರ್ಜುನ ರಾಮದುರ್ಗ, ಎಸ್.ಎಸ್. ಮೇಟಿ, ಚನ್ನಬಸವ ಕುಲಕರ್ಣಿ, ರವಿ ಸಿದ್ಧಮ್ಮನವರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts