More

    ಪವಿತ್ರ ಕುಟುಂಬ ದೇವಾಲಯ ಲೋಕಾರ್ಪಣೆ

    ಸುಂಟಿಕೊಪ್ಪ: ಸೋಮವಾರಪೇಟೆ ತಾಲೂಕಿನ ಮಾದಾಪುರ ವ್ಯಾಪ್ತಿಯ ಕುಂಬೂರಿನಲ್ಲಿ ನಿರ್ಮಿಸಲಾಗಿರುವ ಪವಿತ್ರ ಕುಟುಂಬ ದೇವಾಲಯವನ್ನು ಮಂಗಳವಾರ ಡಾ.ಬರ್ನಾಡ್ ಮೊರಾಸ್ ಲೋಕಾರ್ಪಣೆಗೊಳಿಸಿದರು.

    ಇದೇ ಸಂದರ್ಭ ದೇವಾಲಯದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೇರವೇರಿಸಿದರು. ಮೊದಲಿಗೆ ಶಿಲಾನ್ಯಾಸ ಅನಾವರಣಗೊಳಿಸಿದರು. ಪವಿತ್ರ ತೀರ್ಥವನ್ನು ದೇವಾಲಯ ಸುತ್ತ ಪ್ರೋಕ್ಷಣೆ ಮಾಡಿದರು. ಬಳಿಕ ಬಲಿ ಅರ್ಪಣೆ ಸಲ್ಲಿಸಿದರು. ಕುಂಬೂರು, ಮಾದಾಪುರ, ಹಟ್ಟಿಹೊಳೆ, ಸೋಮವಾರಪೇಟೆ, ಸುಂಟಿಕೊಪ್ಪ ಸೇರಿದಂತೆ ವಿವಿಧ ಭಾಗಗಳಿಂದ ನೂರಾರು ಕ್ರೈಸ್ತ ರು ಬಲಿ ಅರ್ಪಣೆಯಲ್ಲಿ ಭಾಗವಹಿಸಿದ್ದರು.

    ಮಡಿಕೇರಿ ವಲಯದ ಶ್ರದ್ಧಾ ಕೇಂದ್ರಗಳಲ್ಲಿ ಒಂದಾಗಿರುವ ಕುಂಬೂರಿನ ಪವಿತ್ರ ಕುಟುಂಬ ದೇವಾಲಯಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. 10 ಹಲವು ಧರ್ಮ ಗುರುಗಳು ಮತ್ತು ಭಕ್ತರ ತ್ಯಾಗ ಪರಿಶ್ರಮ ಇದರ ಹಿಂದಿದೆ ಎಂದು ಡಾ.ಬರ್ನಾಡ್ ಮೊರಾಸ್ ಶ್ಲಾಘಿಸಿದರು.

    ಇದೇ ವೇಳೆ ಹಲವು ಧರ್ಮಗುರುಗಳ ಸೇವೆಯನ್ನು ಸ್ಮರಿಸಿದ ಡಾ.ಬರ್ನಾಡ್ ಮೊರಾಸ್, ರೆ.ಫಾ.ರಾಜೇಶ್ ಮತ್ತು ಭಕ್ತರ ತ್ಯಾಗ ಪರಿಶ್ರಮದಿಂದ ದೇವಾಲಯವನ್ನು ಅಚ್ಚುಕಟ್ಟಾಗಿ ನಿರ್ಮಿಸಲಾಗಿದೆ. ಪ್ರತಿಯೊಬ್ಬರಿಗೂ ಈ ದೇವಾಲಯ ಶಾಂತಿ, ಸಮಾಧಾನ, ಸುಖ, ಸಮೃದ್ಧಿ ತರಲೆಂದು ಹಾರೈಸಿದರು.
    ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ ನಮ್ಮದು. ವಿವಿಧ ಧಾರ್ಮಿಕ ನಂಬಿಕೆಗಳು, ಆಚಾರ-ವಿಚಾರಗಳು ವೇಷಭೂಷಣ ಬೇರೆ ಬೇರೆಯಾಗಿದ್ದರೂ ಎಲ್ಲ ಧರ್ಮಗಳ ಸಾರ ಒಂದೇ ಎಂದರು. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭ ಧಾರ್ಮಿಕ ಕ್ಷೇತ್ರಗಳಿಗೆ 5 ಕೋಟಿ ರೂ. ಅನುದಾನ ನೀಡಿದೆ ಎಂದು ಉಲ್ಲೇಖಿಸಿದರು.

    ಪ್ರಾಸ್ತಾವಿಕವಾಗಿ ಮಾತನಾಡಿದ ಧರ್ಮಗುರು ರೆ.ಫಾ.ರಾಜೇಶ್, ಜೀರ್ಣೋದ್ಧಾರಕ್ಕೆ ವಂ.ಫಾ. ಸಂತೋಷ್ ಶಿಲಾನ್ಯಾಸ ಮಾಡಿದ್ದು ಅದನ್ನು ಮುಂದುವರಿಸುವ ಜವಾಬ್ದಾರಿ ನನಗೆ ಬಂತು. ಒಂದು ಹಂತದಲ್ಲಿ ಇತಿಹಾಸವನ್ನು ಓದಿದಾಗ ದೇವಾಲಯ ನಿರ್ಮಾಣ ಕಾರ್ಯ ಅಸಾಧ್ಯವೆಂದು ಅನ್ನಿಸಿತು. ಆದರೆ ಭಕ್ತರ ಒತ್ತಾಸೆ ಮತ್ತು ಸಹಕಾರದಿಂದ ದೇವಾಲಯ ನಿರ್ಮಾಣದ ಕನಸು ನನಸಾಯಿತು ಎಂದರು.

    2018ರ ಮಹಾಪ್ರವಾಹ, ಕರೊನಾ ನನ್ನನ್ನು ಹೆದರುವಂತೆ ಮಾಡಿತು. ಅದರೆ ನಂತರ ದಿನಗಳಲ್ಲಿ ಅಲ್ಪಾವಧಿಯಲ್ಲಿ ಮೈಸೂರು ಧರ್ಮಕ್ಷೇತ್ರ ಹಾಗೂ ಇತರ ಧಾರ್ಮಿಕ ಕೇಂದ್ರಗಳ ಭಕ್ತರ ಕೊಡುಗೆಯಿಂದ ದೇವಾಲಯ ನಿರ್ಮಾಣ ಕಾರ್ಯ ಸಂಪನ್ನಗೊಂಡಿದೆ ಎಂದರು.

    ಇದೇ ಸಂಧರ್ಭದಲ್ಲಿ ಅತಿಥಿ ಗಣ್ಯರು ಹಾಗೂ ದೇವಾಲಯ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡ ದಾನಿಗಳು ಹಾಗೂ ಸಂಘಟಕರನ್ನು ಸನ್ಮಾನಿಸಲಾಯಿತು. ಮೈಸೂರು ಧರ್ಮ ಕ್ಷೇತ್ರದ ರೆ.ಫಾ.ಜಾನ್ ಅಲ್ಬರ್ಟ್ ಮೆಂಡೋನ್ಸಾ, ಹಟ್ಟಿಹೊಳೆ ಧರ್ಮ ಕೇಂದ್ರದ ಧರ್ಮ ಗುರು ಗಿಲ್ಬರ್ಟ್ ಡಿಸಿಲ್ವ, ಲಕ್ಷ್ಮೀಜಾಲ ತೋಟದ ಮಾಲೀಕ ಕೊಂಗಡ ವಿನಯ್ ಸೋಮಯ್ಯ, ಮಾದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿದ್ದಪ್ಪ, ಉಪಾಧ್ಯಕ್ಷ ಸುರೇಶ್, ಸದಸ್ಯರಾದ ಅಂತೋಣಿ, ದಮಯಂತಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts