More

    ಹೋಳಿ ಹಬ್ಬಕ್ಕೆ ಧಾರ್ಮಿಕ ನಂಟು

    ಕೊಕ್ಕರ್ಣೆ: ನಾವೆಲ್ಲರೂ ಒಂದೇ ಎಂದು ಸಾರುವ ಬಣ್ಣ ಬಣ್ಣದ ಹಬ್ಬ ಹೋಳಿ ಆಚರಣೆಗೆ ನಾಡು ಸಿದ್ಧವಾಗುತ್ತಿದೆ. ಉಡುಪಿ ಜಿಲ್ಲೆಯ ಹಲವೆಡೆ ಕುಡುಬಿ, ಮರಾಠಿ ಜನಾಂಗದವರು ಈ ಹೋಳಿ ಹಬ್ಬವನ್ನು ಸಂಭ್ರದಿಂದ ಆಚರಿಸುತ್ತಾರೆ. ಮಾರ್ಚ್ 4ರಂದು ಹೋಳಿ ಹಬ್ಬ ಆರಂಭಗೊಳ್ಳಲಿದ್ದು, ಮಾರ್ಚ್ 9ರಂದು ಹುಣ್ಣಿಮೆ ದಿನ ಸಮಾಪನಗೊಳ್ಳಲಿದೆ. ಬೇರೆ ಕಡೆ ಬಣ್ಣದ ಓಕುಳಿ ಎರಚಿಕೊಂಡು ಆಚರಿಸಿದರೆ, ಕರಾವಳಿಯಲ್ಲಿ ಕುಡುಬಿ, ಮರಾಠಿಗರು ವಿಶಿಷ್ಟವಾಗಿ ಧಾರ್ಮಿಕ ಸಂಪ್ರದಾಯದೊಂದಿಗೆ ಆಚರಿಸುತ್ತಾರೆ. ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ವಲಸೆ ಬಂದ ಕುಡುಬಿ, ಮರಾಠಿಗರು ಗ್ರಾಮೀಣ ಭಾಗಗಳಾದ ಅಲ್ತಾರು, ಶಿರಿಯಾರ, ವಂಡಾರು, ಹಾಲಾಡಿ, ಗೋಳಿಯಂಗಡಿ, ಆವರ್ಸೆ, ನಂಚಾರು, ಕೆಂಜೂರು, ಕೊಕ್ಕರ್ಣೆ, ಮಂದಾರ್ತಿ, ನಡೂರು, ಬಾರ್ಕೂರು, ಸಂತೆಕಟ್ಟೆ, ಶಿರೂರು ಮುಂತಾದ ಕಡೆಗಳಲ್ಲಿ ಹೆಚ್ಚಾಗಿ ವಾಸ್ತವ್ಯ ಹೂಡಿ ಕುಲದೇವರಾದ ಅಂಬಾಭವಾನಿ, ತುಳಜಾಭವಾನಿ ಎಂಬ ದೇವಿಯರನ್ನು ಪೂಜಿಸುತ್ತಾರೆ. ಕುಟುಂಬದ ಕುಲ ದೇವತೆಯಾಗಿ ಮಕ್ಕಳನ್ನು ಸಲಹುತ್ತಾಳೆ ಎಂಬ ನಂಬಿಕೆ ಮೇಲೆ ತಮ್ಮ ಭಕ್ತಿಯನ್ನು ಸಾರುತ್ತಾರೆ.

    ಪೂರ್ವ ಸಿದ್ಧತಾ ವಿಧಾನ:
    ಸುಮಾರು ಹೋಳಿ ಹುಣ್ಣಿಮೆಗೆ ಒಂದು ತಿಂಗಳು ಇರುವಾಗಲೇ ಸಿದ್ಧತೆ ಪ್ರಾರಂಭಗೊಳ್ಳುತ್ತದೆ. ಗುಮ್ಮಟೆಗೆ ಬಣ್ಣ, ಚರ್ಮದ ಹೊದಿಕೆ, ಕೋಲಾಟದ ಕೋಲುಗಳ ಸಂಗ್ರಹಣೆ, ರುಮಾಲಿಗೆ ಬೇಕಾದ ಮುದ್ದ ಎಂಬ ಹಕ್ಕಿಯ ಗರಿಯನ್ನು ಸಂಗ್ರಹಿಸುತ್ತಾರೆ. ತಾವು ನರ್ತನ ಅಭ್ಯಾಸ ಮಾಡುವುದರೊಂದಿಗೆ ತಮ್ಮ ಮಕ್ಕಳಿಗೂ ಕೂಡ ಕಲಿಸುತ್ತಾರೆ. ಮುಂದಿನ ಜನಾಂಗಕ್ಕೆ ಧಾರ್ಮಿಕ ಆಚರಣೆಯ ಮಹತ್ವ ತಿಳಿಸುತ್ತಾರೆ. ಹಬ್ಬದ ದಿನ ನಿಗದಿಯಾದಂದಿನಿಂದ ವ್ರತ ಆಚರಿಸುತ್ತಾರೆ.

    ಹಬ್ಬದ ದಿನ ಆಚರಣೆ
    ಕುಲದೇವಿಯನ್ನು ದೊಡ್ಡದಾದ ತುಳಸಿಕಟ್ಟೆಯಲ್ಲಿ ಪ್ರತಿಷ್ಠಾಪಿಸಿ, ಮೇಲೆ ಒಂದು ತುಳಸಿ ಸಸಿ ನೆಟ್ಟು ದಿನಂಪ್ರತಿ ಶುಚಿರ್ಭೂತರಾಗಿ ದೇವಿಯನ್ನು ಪ್ರಾರ್ಥಿಸುತ್ತಾರೆ. ವರ್ಷದ ಹಬ್ಬವಾದ ಹೋಳಿಯನ್ನು ಆಚರಿಸಲು ತಮ್ಮ ವಿಶಿಷ್ಟ ಸಂಪ್ರದಾಯವನ್ನು ನೆನಪಿಸುತ್ತಾ ಒಂದು ತಿಂಗಳ ಹಿಂದಿನಿಂದಲೂ ವ್ರತ ಆಚರಿಸುವ ಬಗ್ಗೆ ತಯಾರಿ ನಡೆಸುತ್ತಾರೆ. ಕುಲದೇವಿಯನ್ನು ಪೂಜಿಸುವ ವಿಧಿ ವಿಧಾನಗಳ ಕುರಿತು ಚರ್ಚಿಸುತ್ತಾ, ತಮ್ಮ ಮುಂದಿನ ಪೀಳಿಗೆಯವರಿಗೆ ಸಂಪ್ರದಾಯ ಹೇಳಿಕೊಡುತ್ತಾರೆ. ಕುಟುಂಬದ ಪ್ರತಿಯೊಬ್ಬರೂ ಸೇರಿ ತೆಂಗಿನಕಾಯಿಯನ್ನು ದೇವಿಯ ಎದುರಿಗೆ ಇಟ್ಟು ತಮ್ಮ ಹಬ್ಬವನ್ನು ಚೆನ್ನಾಗಿ ನಡೆಸಿಕೊಡು ಎಂದು ಪ್ರಾರ್ಥಿಸಿ ಹೋಳಿ ಹಬ್ಬಕ್ಕೆ ಚಾಲನೆ ನೀಡುತ್ತಾರೆ.

    ವೇಷ ಭೂಷಣ, ಪರಿಕರಗಳು:
    ಬಣ್ಣದ ಬಟ್ಟೆ, ತಲೆಗೆ ಮುಂಡಾಸು ತೊಟ್ಟು ಅದರ ಮೇಲೆ ಹಕ್ಕಿಯ ಗರಿ ಮತ್ತು ಅಬ್ಬಲಿಗೆ, ಸುರಗಿ ಹೂಗಳಿಂದ ಅಲಂಕರಿಸಿಕೊಳ್ಳುತ್ತಾರೆ. ಸಂಗೀತ ಪರಿಕರಗಳಾದ ಗುಮ್ಮಟೆ, ತಾಳ, ಜಾಗಟೆಗಳನ್ನು ಬಳಸಿ ಕಟ್ಟುಕಟ್ಟಲೆ ಮನೆ, ದೇವಸ್ಥಾನಗಳಿಗೆ ತೆರಳಿ ಸೇವೆಯನ್ನು ಮಾಡುತ್ತಾರೆ. ಪಾದರಕ್ಷೆ ಧರಿಸದೆ ದೇವರನ್ನು ಸ್ಮರಿಸುತ್ತಾ ಹಾಡುತ್ತಾ ನರ್ತಿಸುತ್ತಾರೆ. ಇವರು ಪಂಗಡಗಳಾಗಿ ತೆರಳುತ್ತಾರೆ. ಪ್ರತಿಯೊಂದು ಪಂಗಡಕ್ಕೂ ಓರ್ವ ಮುಖಂಡ. ಮನೆಮನೆಗಳಲ್ಲಿ ನೀಡಿದ ಅಕ್ಕಿ, ಕಾಯಿ, ದಕ್ಷಿಣೆಗಳನ್ನು ಹಬ್ಬ ಮುಗಿದ ನಂತರ ಹಂಚಿಕೊಳ್ಳುತ್ತಾರೆ. ಹಬ್ಬದ ಕೊನೆಯಲ್ಲಿ ಎಲ್ಲರೂ ಸೇರಿ ಮಾರಿ ಪೂಜೆ ನಡೆಸಿ, ಹಬ್ಬಕ್ಕೆ ಪೂರ್ಣವಿರಾಮ ನೀಡುತ್ತಾರೆ. ಈ ಜಾತ್ರೆಯಲ್ಲಿ ಎಲ್ಲಾ ಧರ್ಮದವರು ಬಂದು ಪೂಜೆ ನೀಡಿ ಹರಕೆಗಳನ್ನು ಅರ್ಪಿಸುತ್ತಾರೆ.

    ಬುಧವಾರ ಪ್ರಾರಂಭಗೊಳ್ಳುವ ಹಬ್ಬ ಹುಣ್ಣಿಮೆ ದಿನದಂದು ಸಮಾಪನೆಗೊಳುತ್ತದೆ. ಹಿಂದಿನವರು ಆಚರಿಸಿಕೊಂಡು ಬಂದ ಕಟ್ಟು ಕಟ್ಟಳೆ ಹೋಳಿ ಹಬ್ಬವನ್ನು ಮುಂದಿನ ಪೀಳಿಗೆಯವರೊಂದಿಗೆ ಸೇರಿ ಆಚರಿಸುವುದರಿಂದ ಸಂಪ್ರದಾಯವನ್ನು ಉಳಿಸಿದಂತೆ ಆಗುತ್ತದೆ.ದೇವಿಯನ್ನು ಸಾಮೂಹಿಕವಾಗಿ ಆರಾಧಿಸುವುದರಿಂದ ಊರಿಗೂ, ಜನರಿಗೂ, ಲೋಕಕ್ಕೂ ಒಳ್ಳಯದಾಗುತ್ತದೆ. ಕಾಲಕಾಲಕ್ಕೆ ಮಳೆ ಬೆಳೆ ಆಗಿ ಸಮೃದ್ಧಿಯನ್ನು ಕಾಣಬಹುದು.
    ನಾರಾಯಣ ನಾಯ್ಕ, ಅಧ್ಯಕ್ಷರು ಶ್ರೀ ಬ್ರಾಹ್ಮರಿ ದುರ್ಗಾಪರಮೇಶ್ವರಿ ದೇವಸ್ಥಾನ ಅಂಕ್ರಾಲು-ಕಲ್ಮನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts