More

    ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆಯಲ್ಲಿ ಸಕಲ ಸೌಲಭ್ಯವಿದೆ

    ಹೊಳೆನರಸೀಪುರ: ನಾನು ಸಚಿವನಾಗಿದ್ದಾಗ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ 5 ಡಯಾಲಿಸಿಸ್ ಯಂತ್ರಗಳನ್ನು ಕೊಡಿಸಿದ್ದೆ. ಇದರ ಉಪಯೋಗ ಹೆಚ್ಚಾಗಿದ್ದರಿಂದ 5 ಡಯಾಲಿಸಿಸ್ ಯಂತ್ರವನ್ನು ಹೆಚ್ಚುವರಿಯಾಗಿ ಕೊಡಿಸಿದ್ದೇನೆ ಎಂದು ಶಾಸಕ ಎಚ್.ಡಿ.ರೇವಣ್ಣ ತಿಳಿಸಿದರು.

    ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಹೊಸ ಡಯಾಲಿಸಿಸ್ ಯಂತ್ರಗಳನ್ನು ಗುರುವಾರ ಕೊಡುಗೆಯಾಗಿ ನೀಡಿ ಮಾತನಾಡಿದ ಅವರು, ಆಸ್ಪತ್ರೆಗೆ ಅಕ್ಕಪಕ್ಕದ ತಾಲ್ಲೂಕಿನವರಲ್ಲದೆ ಕೊಡಗು, ಮಂಡ್ಯ ಮೈಸೂರು ಜಿಲ್ಲೆಯಿಂದಲೂ ರೋಗಿಗಳು ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ತಿಂಗಳಿಗೆ ಕನಿಷ್ಠ 250 ಹೆರಿಗೆ ಆಗುತ್ತಿದೆ. 150ಕ್ಕೂ ಹೆಚ್ಚು ವಿವಿಧ ಬಗೆಯ ಶಸ್ತ್ರಚಿಕಿತ್ಸೆಗಳನ್ನು ಇಲ್ಲಿ ಮಾಡಲಾಗುತ್ತಿದೆ. ಸಿ.ಟಿ. ಸ್ಕ್ಯಾನ್, ಐಸಿಯೂ, ಆಕ್ಸಿಜೆನ್ ಬೆಡ್ ಸೌಲಭ್ಯ ಎಲ್ಲವೂ ಇದೆ. ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ದಕ್ಷರಾಗಿದ್ದು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡು ಆಸ್ಪತ್ರೆಯನ್ನು ಜನಸ್ನೇಹಿ ಆಗಿಸಿದ್ದಾರೆ. ಒಂದು ಎಂ.ಆರ್.ಐ. ಸ್ಕ್ಯಾನಿಂಗ್, ಹೃದಯ ರೋಗ ತಪಾಸಣೆಗೆ ಆಧುನಿಕ ಯಂತ್ರ ಬೇಕಾಗಿದೆ ಎಂದು ಬೇಡಿಕೆ ಸಲ್ಲಿಸಿದ್ದು ಅವುಗಳನ್ನು ಕೊಡಿಸಲಾಗುವುದು. ತಾಲೂಕಿನ ದೊಡ್ಡಕುಂಚೇವು ಸಮುದಾಯ ಆರೋಗ್ಯ ಕೇಂದ್ರಕ್ಕೆ ಬುಧವಾರ ಭೂಮಿಪೂಜೆ ನಡೆಸಿದ್ದೇನೆ. 9.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಈ ಆರೋಗ್ಯ ಕೇಂದ್ರದಲ್ಲಿ ಐವರು ವೈದ್ಯರು ಹಾಗೂ 25 ಸಿಬ್ಬಂದಿ ಇರಲಿದ್ದಾರೆ ಎಂದರು.

    ಆಯುಷ್ಮಾನ್ ಭಾರತ್ ಕಾರ್ಡ್ ವಿತರಣೆ: ಇಲ್ಲಿನ ಗಣಪತಿ ಪೆಂಡಾಲ್ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ರೇವಣ್ಣ ಆಯುಷ್ಮಾನ್ ಭಾರತ್ ಕಾರ್ಡ್ ವಿತರಣೆ ಮಾಡಿ ಈ ಕಾರ್ಡ್‌ಗಳನ್ನು ಎಲ್ಲರೂ ತಪ್ಪದೆ ಮಾಡಿಸಿಕೊಳ್ಳಿ. ಈ ಸವಲತ್ತು ಪಡೆದುಕೊಂಡವರು ಯಾವುದೇ ಕಾಯಿಲೆಗೆ ಚಿಕಿತ್ಸೆ ಪಡೆದುಕೊಂಡರೆ 5 ಲಕ್ಷ ರೂ.ವರೆಗೆ ವಿಮಾ ಸೌಲಭ್ಯ ಇರುತ್ತದೆ. ಆದ್ದರಿಂದ ತಪ್ಪದೇ ಆಯುಷ್ಮಾನ್ ಭಾರತ್ ಕಾರ್ಡ್‌ಅನ್ನು ಮಾಡಿಸಿ ಎಂದು ಎಲ್ಲ ಅಧಿಕಾರಿಗಳಿಗೆ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ರಾಜೇಶ್, ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ಇದ್ದರು.

    ಸಮುದಾಯ ಭವನ ಉದ್ಘಾಟನೆ: ಪಟ್ಟಣದ ಹಳೇ ಕರ್ನಾಟಕ ಬ್ಯಾಂಕ್ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಬಣಜಿಗರ ಸಮುದಾಯ ಭವನವನ್ನು ಶಾಸಕ ಎಚ್.ಡಿ.ರೇವಣ್ಣ ಉದ್ಘಾಟಿಸಿ ಮಾತನಾಡಿ, ನಾನು ಸಚಿವ ಆಗಿದ್ದಾಗಿನಿಂದ ತಾಲೂಕಿನ ಎಲ್ಲ ಜಾತಿಯ ಜನರಿಗೆ ಸಮುದಾಯ ಭವನ ನಿರ್ಮಿಸಿಕೊಟ್ಟಿದ್ದೇನೆ. ಎಲ್ಲ ಸಮುದಾಯದವರೂ ದೇವೇಗೌಡರ ಕುಟುಂಬಕ್ಕೆ ಒಂದಲ್ಲ ಒಂದು ಚುನಾವಣೆಯಲ್ಲಿ ಸಹಾಯ ಮಾಡಿದ್ದಾರೆ. ಬಣಜಿಗರ ಸಮೂದಾಯ ಭವನಕ್ಕೆ 46 ಲಕ್ಷ ರೂ. ಕೊಡಿಸಿದ್ದೇನೆ. ಈ ಜನಾಂಗದ ಅನೇಕರು ಅಂದಿನಿಂದ ಇಂದಿನ ವರೆಗೂ ಗೌಡರ ಜೊತೆಯಲ್ಲೇ ಇದ್ದಾರೆ. ಎಲ್ಲರೂ ಒಟ್ಟಾಗಿ ಸಮುದಾಯ ಭವನ ನಿರ್ಮಿಸಿದ್ದಾರೆ. ಬೆಂಗಳೂರಿನ ಜನರಿಗೆ ಈ ಜನಾಂಗದ ಹಿರಿಯರಾದ ಎಂ.ಎಸ್.ರಾಮಯ್ಯ ಅವರು ಅತಿ ಹೆಚ್ಚಿನ ಸಹಕಾರ ನೀಡಿದ್ದಾರೆ ಎಂದು ಸ್ಮರಿಸಿದರು.

    ಜನಾಂಗದ ಅಧ್ಯಕ್ಷ ವೆಂಕಟಪ್ಪ, ಧನ್ಯಕುಮಾರ್, ಮುಖಂಡರಾದ ಟಿ.ಶಿವಕುಮಾರ್, ಜಿಲ್ಲಾ ಮುಖಂಡರಾದ ಶಾಂತಶೆಟ್ಟಿ, ಆದರ್ಶ, ಚಂದ್ರಣ್ಣ, ನರಸಿಂಹ, ಕೃಷ್ಣ, ಶಂಕರ್, ಶಿವಕುಮಾರ್, ಕಾವ್ಯಶ್ರೀ, ಕೃಷ್ಣ, ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts