More

    ಕಾಂಗ್ರೆಸ್ ಆರಿಹೋಗುವ ದೀಪದಂತಾಡುತ್ತಿದೆ

    ಹೊಳೆನರಸೀಪುರ : ಆರಿಹೋಗುವ ಮುನ್ನ ದೀಪ ಪ್ರಜ್ವಲಿಸುವಂತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆರ್ಭಟಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕುಟುಕಿದರು.

    ಸೋಮವಾರ ಇಲ್ಲಿನ ಹೇಮಾವತಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಮೈತ್ರಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ದೇಶದ ಭದ್ರತೆ ಹಾಗೂ ಭವಿಷ್ಯದ ದೃಷ್ಟಿಯಲ್ಲಿ ಜನತೆ ವಿವೇಚನೆಯಿಂದ ಮತ ಚಲಾಯಿಸಬೇಕು. 70 ವರ್ಷ ದೇಶವನ್ನು ಆಳ್ವಿಕೆ ಮಾಡಿದ ಕಾಂಗ್ರೆಸ್ ನಾಯಕಿ ಇಂದಿರಾಗಾಂಧಿ ಗರೀಬಿ ಹಟಾವೋ ಯೋಜನೆ ಜಾರಿಗೆ ತರುವುದಾಗಿ ಹೇಳಿ ಚುನಾವಣೆ ಗೆದ್ದರು. ಆದರೆ, ಇದುವರೆಗೆ ಬಡವರಾರು ಶ್ರೀಮಂತರಾಗಲಿಲ್ಲ. ಕಾಂಗ್ರೆಸ್ ನಾಯಕರ ಗರೀಬಿ ಹೋಗಿ ಎಲ್ಲರೂ ಶ್ರೀಮಂತರಾದರು ಎಂದು ಟೀಕಿಸಿದರು.

    ಈಗ ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ನಾಟಕವಾಡುತ್ತಿದೆ. ಹೆಂಗಸರಿಗೆ 2 ಸಾವಿರ ರೂ. ನೀಡಿ, ಗಂಡಸರ ಹತ್ತಿರ ಎರಡು-ಮೂರು ಪಟ್ಟು ಹೆಚ್ಚು ಹಣ ವಸೂಲಿ ಮಾಡುತ್ತಿದೆ. ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರಾಜ್ಯ ಸರ್ಕಾರ ರೈತರಿಗೆ 4 ಸಾವಿರ ರೂ. ನೀಡುತ್ತಿತ್ತು, ಕಾಂಗ್ರೆಸ್ ಅದನ್ನು ನಿಲ್ಲಿಸಿದೆ. ರೈತರ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾನಿಧಿ ನಿಲ್ಲಿಸಿತು. ಭಾಗ್ಯಲಕ್ಷ್ಮೀ ಯೋಜನೆಯನ್ನು ಕೂಡ ರದ್ದು ಮಾಡಲಾಗಿದೆ. ವಿದ್ಯುತ್ ದರ ಶೇ.100 ರಷ್ಟು ಹೆಚ್ಚಾಗಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸತ್ಯವನ್ನು ಮತದಾರರು ಅರಿತಿರಬೇಕು ಎಂದು ಹೇಳಿದರು.

    ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಆಡಳಿತದಲ್ಲಿ ರೈತರ ಸಾಲ ಮನ್ನಾ ಮಾಡಲಾಗಿತ್ತು. ದೇವೇಗೌಡರು ಪ್ರಧಾನಿ ಮೋದಿ ಅವರ ಆಡಳಿತದಲ್ಲಿ ದೇಶ ಸುಭದ್ರವಾಗಿದೆ. ಇನ್ನೂ ಹೆಚ್ಚು ಬೆಳವಣಿಗೆ ಆಗುತ್ತದೆ ಎನ್ನುವುದನ್ನು ಮನಗಂಡು ತಮ್ಮ 92ನೇ ವಯಸ್ಸಿನಲ್ಲೂ ಮೋದಿಯನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

    ತೆನೆ ಹೊತ್ತ ಮಹಿಳೆಯೇ ಕಮಲ : ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮಾತನಾಡಿ, ನಾವು ನಮ್ಮ ಪಕ್ಷದ ತೆನೆಹೊತ್ತ ಮಹಿಳೆಗೆ ಕಮಲ ಎಂದು ಹೆಸರಿಟ್ಟಿದ್ದೇವೆ. ಸಿದ್ದರಾಮಯ್ಯ ಎಲ್ಲ ವಸ್ತುಗಳ ಬೆಲೆ ಏರಿಸಿ ಮಹಿಳೆಯರಿಗೆ 2 ಸಾವಿರ ರೂ. ನೀಡುವ ನಾಟಕವಾಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ ಮದ್ಯದ ದರವನ್ನು ಮೂರು ಬಾರಿ ಏರಿಸಲಾಗಿದೆ ಎಂದು ಹೇಳಿದರು.
    ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದಾಗ ಪಾಕಿಸ್ತಾನದ ಪರ ಘೋಷಣೆ ಕೂಗುತ್ತಾರೆ. ದೇಶದಲ್ಲಿ ಇಂತಹ ಪರಿಸ್ಥಿತಿ ನಿರ್ನಾಮವಾಗಬೇಕು ಎಂದರು.

    ಶಾಸಕ ಎಚ್.ಡಿ. ರೇವಣ್ಣ ಮಾತನಾಡಿ, ನಮ್ಮ ಆಡಳಿತದಲ್ಲಿ ರೈತರ ಸ್ಪ್ರಿಂಕ್ಲರ್ ಸೆಟ್‌ನ 4 ಪೈಪಿನ ದರ 1450 ರೂ. ಇತ್ತು, ಈಗ 4500 ರೂ. ಆಗಿದೆ. ವಿದ್ಯುತ್ ಟಿಸಿ ಅಳವಡಿಸಿಕೊಳ್ಳಲು 2 ಲಕ್ಷ ರೂ. ನೀಡಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಕುಮಾರಸ್ವಾಮಿ, ಯಡಿಯೂರಪ್ಪ ಆಡಳಿತದಲ್ಲಿ ಶಿಕ್ಷಣ,ಆರೋಗ್ಯ ಇಲಾಖೆಗೆ ಹೆಚ್ಚಿನ ಅನುದಾನ ಕೊಟ್ಟರು. ಬರ ಪರಿಹಾರ, ಸಾಲಮನ್ನಾ ಎಲ್ಲವನ್ನೂ ವ್ಯವಸ್ಥಿತವಾಗಿ ನೀಡಿದರು ಎಂದರು.

    ಅರಕಲಗೂಡು ಕ್ಷೇತ್ರದ ಶಾಸಕ ಎ.ಮಂಜು, ಸಕಲೇಶಪುರ ಶಾಸಕ ಸಿಮೆಂಟ್ ಮಂಜು, ಜಿಲ್ಲಾ ಬಿಜೆಪಿ ಮುಖಂಡ ಯೋಗಾ ರಮೇಶ್ ಮಾತನಾಡಿದರು. ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ, ಭವಾನಿ ರೇವಣ್ಣ, ಟಿ. ಶಿವಕುಮಾರ್, ಮುತ್ತಿಗೆ ರಾಜೇಗೌಡ, ಸಾಂಬಶಿವಪ್ಪ, ಮಳಲಿ ನಾರಾಯಣ, ಎಚ್‌ಎಂಟಿ. ಸುರೇಶ್, ವಕೀಲ ವಸಂತ್‌ಕುಮಾರ್, ಕೆ.ಆರ್. ಸುನೀಲ್‌ಕುಮಾರ್, ಎಚ್.ಎಸ್. ಪುಟ್ಟಸೋಮಪ್ಪ, ತಾಲೂಕು ಬಿಜೆಪಿ ಅಧ್ಯಕ್ಷ ಮಳಲಿ ನಾರಾಯಣ, ಜವರೇಗೌಡ ಇತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts