More

    ಕೆಲಸ ಮಾಡದಿದ್ರೆ ಗೇಟ್‌ಪಾಸ್

    ಹೊಳಲ್ಕೆರೆ: ಜನರಿಗೆ ಸೌಲಭ್ಯ ತಲುಪಿಸುವಲ್ಲಿ ನಿರ್ಲಕ್ಷೃ ತೋರಿದ ಅಧಿಕಾರಿಗಳಿಗೆ ಕ್ಷೇತ್ರದಿಂದ ಗೇಟ್‌ಪಾಸ್ ನೀಡಲಾಗುವುದು ಎಂದು ಶಾಸಕ ಎಂ.ಚಂದ್ರಪ್ಪ ಖಡಕ್ ಎಚ್ಚರಿಕೆ ನೀಡಿದರು.

    ತಾಪಂ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನ ಕಾಶೀಪುರದಲ್ಲಿ ಮೊದಲ ಬಾರಿಗೆ ಇಂಗ್ಲಿಷ್ ಪಬ್ಲಿಕ್ ಶಾಲೆ ಪ್ರಾರಂಭಿಸಿದ್ದು, ಮೌಲ್ಯಯುತ ಶಿಕ್ಷಣ ನೀಡುವಲ್ಲಿ ಶಿಕ್ಷಣ ಇಲಾಖೆ ಎಡವಿದೆ ಎಂಬ ದೂರು ಬಂದಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಗದೀಶ್ವರ ಅವರನ್ನು ತರಾಟೆ ತೆಗೆದುಕೊಂಡರು.

    ಎಲ್‌ಕೆಜಿ ವಿದ್ಯಾರ್ಥಿಗಳನ್ನು ಶಾಲೆಗೆ ಕರೆ ತರಲು ಸುಸಜ್ಜಿತ ಹೈಟೆಕ್ ಬಸ್ ಕಲ್ಪಿಸಲಾಗುವುದು. ಚಾಲಕರ ವೇತನ ಮತ್ತಿತರ ವೆಚ್ಚಗಳನ್ನು ಶಿಕ್ಷಣ ಇಲಾಖೆ ಭರಿಸಬೇಕು ಎಂದು ತಿಳಿಸಿದರು.

    ಒಂದೊಂದು ಹಳ್ಳಿಯಲ್ಲಿ ಎಷ್ಟು ಶಾಲೆಗಳಿವೆ, ಎಷ್ಟು ಶಿಕ್ಷಕರಿದ್ದಾರೆ ಎಂಬ ಮಾಹಿತಿ ನೀಡಬೇಕು. ಎಲ್ಲಿ ಶಾಲೆಗಳಿಗೆ ಕಟ್ಟಡಗಳಿಲ್ಲ ಎಂಬ ಮಾಹಿತಿಯನ್ನು ಕೂಡಲೆ ನೀಡಬೇಕು ಎಂದ ತಾಕೀತು ಮಾಡಿದರು.

    ಪಟ್ಟಣದಲ್ಲಿ ಏಳು ಎಸ್ಸಿ, ಎಸ್ಟಿ ಹಾಸ್ಟೆಲ್‌ಗಳಿದ್ದು, ಎರಡಕ್ಕೆ ಸ್ವಂತ ಕಟ್ಟಡವಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್ ಹೇಳಿದರು.

    ಕಟ್ಟಡ ನಿರ್ಮಾಣಕ್ಕೆ ಮೂರೂವರೆ ಕೋಟಿ ರೂ. ಅನುದಾನಕ್ಕೆ ಒಂದು ವರ್ಷದ ಹಿಂದೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಬಗ್ಗೆ ನಿಮಗೆ ಕಿಂಚಿತ್ತು ಗಮನವಿಲ್ಲ. ನಿವೇಶನಕ್ಕಾಗಿ ಪಪಂ ಗೆ ಅರ್ಜಿ ಹಾಕಿದ್ದೀರಾ ಎಂದು ಶಾಸಕರು ಪ್ರಶ್ನಿಸಿದರು. ಉತ್ತರ ನೀಡಲು ಅಧಿಕಾರಿ ಚಡಪಡಿಸಿದರು.

    ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಕೆಲ ವೈದ್ಯರು ಹೊರಗಡೆ ಔಷಧ ತರಲು ಚೀಟಿ ಬರೆದುಕೊಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಸಾಕಷ್ಟು ಔಷಧ ದಾಸ್ತಾನುವಿದ್ದರು ಈ ಅಭ್ಯಾಸ ಮುಂದುವರಿದಿದೆ ಎಂದು ವೈದಾಧಿಕಾರಿ ಡಾ.ಕೃಷ್ಣಮೂರ್ತಿ ಅವರನ್ನು ತರಾಟೆಗೆ ತೆಗೆದುಕೊಂಡರು.

    ಸಿಡಿಪಿಒ ಲೋಕೇಶ್ ಮಾತನಾಡಿ, ಪಟ್ಟಣದಲ್ಲಿ 12 ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿಲ್ಲ. ಐದು ಕೇಂದ್ರಗಳಿಗೆ ಪಪಂ ವತಿಯಿಂದ ನಿವೇಶನ ಮಂಜೂರಾಗಿದೆ ಎಂದು ತಿಳಿಸಿದರು.

    ಚಿಕ್ಕಜಾಜೂರು ಉಪ ಕೃಷಿ ಮಾರುಕಟ್ಟೆಯಲ್ಲಿ ಖರೀದಿ ಕೇಂದ್ರ ಪ್ರಾರಂಭ ಮಾಡಲಾಗಿದೆ. ಒಬ್ಬ ರೈತ ಕನಿಷ್ಠ 15ರಿಂದ 75 ಕ್ವಿಂಟಾಲ್ ವರೆಗೆ ಮಾರಾಟ ಮಾಡಲು ಅನುಮತಿ ನೀಡಲಾಗಿದೆ ಎಂದು ಕೃಷಿ ಅಧಿಕಾರಿ ಕುಮಾರ್ ನಾಯ್ಕ ತಿಳಿಸಿದರು.

    ಅಧ್ಯಕ್ಷೆ ಸುಜಾತಾ, ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್, ಜಿಪಂ ಸದಸ್ಯರಾದ ಸುಮಾ ಲಿಂಗರಾಜ್, ತಿಪ್ಪೇಸ್ವಾಮಿ, ಇಒ ತಾರಾನಾಥ್ ಚರ್ಚೆಯಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts