More

    ಹೊಯಿಗೆ ಸಂಚಾರ ಬಲುಕಷ್ಟ

    ಶ್ರವಣ್‌ಕುಮಾರ್ ನಾಳ ಮಂಗಳೂರು

    ಜಪ್ಪಿನಮೊಗರು ನೇತ್ರಾವತಿ ಸೇತುವೆ ಸಮೀಪದಿಂದ ಉಳ್ಳಾಲ ಜಪ್ಪಿನಮೊಗರುವಿನ ಹೊಯಿಗೆ ಪ್ರದೇಶಕ್ಕೆ ತೆರಳಲು ಸುಲಭವಾಗಿದ್ದ ನದಿ ಬದಿಯ ಪಾದಚಾರಿ ಸೇತುವೆ ಸಂಪೂರ್ಣ ಹಾನಿಯಾಗಿದ್ದು, ಈ ಭಾಗದಲ್ಲಿ ವಾಸ್ತವ್ಯ ಮಾಡುತ್ತಿರುವ 300ಕ್ಕೂ ಹೆಚ್ಚು ಕುಟುಂಬಗಳಿಗೆ ಸಂಚಾರ ಸಂಕಷ್ಟ ಎದುರಾಗಿದೆ.

    ಸೇತುವೆ ಹಾಳಾಗಿದ್ದರಿಂದ ಇಲ್ಲಿನ ಜನರಿಗೆ ದಿನವೂ ಸುತ್ತಿ ಬಳಸಿ ಸಂಚರಿಸುವಂತಾಗಿದೆ. ದಿನವೂ ಆಗುತ್ತಿರುವ ಸಮಸ್ಯೆಯನ್ನು ಸ್ಥಳೀಯ ಕಾರ್ಪೊರೇಟರ್‌ಗೂ ತಿಳಿಸಿದ್ದಾರೆ. ಆದರೆ, ಇನ್ನೂ ಸಮಸ್ಯೆ ನಿವಾರಣೆ ಆಗಿಲ್ಲ ಎಂಬುದು ಇಲ್ಲಿನ ಜನರ ಅಳಲು.

    ಸುತ್ತುಬಳಸಿ ಪ್ರಯಾಣ

    ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಭಾಗದಿಂದ ಮಂಗಳೂರು ಕಡೆಗೆ ಬರುವಾಗ ನೇತ್ರಾವತಿ ಸೇತುವೆ ಆರಂಭದ ಎಡಭಾಗದಲ್ಲಿರುವ ಹಾದಿಯಲ್ಲಿ ಸುಮಾರು 700 ಮೀಟರ್ ದೂರದಲ್ಲಿ ಹೊಯಿಗೆ ಪ್ರದೇಶವಿದೆ.ಜಪ್ಪಿನಮೊಗರಿನ ಹೊಯಿಗೆ ಪ್ರದೇಶವು ಪಾಲಿಕೆ ವ್ಯಾಪ್ತಿಗೆ ಒಳಪಟ್ಟಿದ್ದು, ಇಲ್ಲಿನ ನೂರಾರು ಜನರು ನಿತ್ಯ ಇದೇ ದಾರಿಯಲ್ಲಿ ನಡೆದು ಹೋಗುತ್ತಾರೆ. ಇಲ್ಲಿನವರು ವಾಹನದಲ್ಲಿ ಹೋಗಬೇಕೆಂದರೆ ಹೊಯಿಗೆ ಪ್ರದೇಶದಿಂದ ತೊಕ್ಕೊಟ್ಟು ಒಳಪೇಟೆಯಾಗಿ 6 ಕಿ.ಮೀ. ಸಂಚರಿಸಬೇಕು. ಹೆದ್ದಾರಿಗೆ ಬಂದರೆ ಹಲವು ಬಸ್‌ಗಳು ಸಿಗುತ್ತವೆ. ಆದರೆ, ಪಾದಚಾರಿ ಸೇತುವೆ ಮುರಿದು ಬಿದ್ದುದರಿಂದ ಅವರು ತೊಕ್ಕೊಟ್ಟಿಗೆ ತೆರಳಿ ಸುತ್ತುಬಳಸಿ ಸಂಚರಿಸುವಂತಾಗಿದೆ.

    ನಡೆದಿತ್ತು ಗುದ್ದಲಿ ಪೂಜೆ

    ನೇತ್ರಾವತಿ ಸೇತುವೆ ನದಿಯ ಬದಿಯಿಂದ ಹೊಯಿಗೆಗೆ ಸಂಪರ್ಕದ ಸಂಚಾರಿ ರಸ್ತೆ ನಿರ್ಮಿಸಲು ಶಾಸಕ ವೇದವ್ಯಾಸ್ ಕಾಮತ್ ಮುತುವರ್ಜಿ ವಹಿಸಿದ್ದರು. 2ಕೋಟಿ ರೂ. ವಿಶೇಷ ಅನುದಾನ ಕಾಯ್ದಿರಿಸಿ ಯೋಜನೆ ರೂಪಿಸಿ ರಸ್ತೆ ನಿರ್ಮಿಸಲು ಗುದ್ದಲಿ ಪೂಜೆಯೂ ನಡೆದಿತ್ತು. ರಾ.ಹೆ 66ರ ಭಾಗದಿಂದ ರಸ್ತೆ ನಿರ್ಮಾಣಕ್ಕೆ ಮಣ್ಣು ಹಾಕಲಾಗುತ್ತಿತ್ತು. ಆದರೆ, ಆ ಜಾಗ ಸಿಆರ್‌ಜಡ್ ವ್ಯಾಪ್ತಿಗೆ ಸೇರಿದ್ದರಿಂದ ಕಾನೂನು ತೊಡಕಿನಿಂದಾಗಿ ಕಾಮಗಾರಿಗೆ ತಡೆ ಬಂದಿದೆ.

    ಹಿನ್ನೀರಿನ ರಭಸಕ್ಕೆ ಕುಸಿದ ಪಿಲ್ಲರ್

    ಹೊಯಿಗೆ ಪ್ರದೇಶಕ್ಕೆ ತೆರಳಲು ಸುಲಭವಾಗಲೆಂದು ಹಲವು ವರ್ಷದ ಹಿಂದೆ ಇಲ್ಲಿ ಪಾದಚಾರಿ ಸೇತುವೆ ನಿರ್ಮಿಸಲಾಗಿತ್ತು. ಇತ್ತೀಚಿನವರೆಗೂ ಸುಸ್ಥಿತಿಯಲ್ಲಿದ್ದ ಈ ಸೇತುವೆಯು ನದಿಯ ಹಿನ್ನೀರಿನ ರಭಸಕ್ಕೆ ಹಾನಿಗೊಂಡಿತ್ತು. ನಂತರ ತಾತ್ಕಾಲಿಕವಾಗಿ ದುರಸ್ತಿ ಮಾಡಿದ್ದರೂ ಮತ್ತೆ ಪಾದಚಾರಿ ಸೇತುವೆಯ ಪಿಲ್ಲರ್ ಕುಸಿದುಬಿದ್ದಿತ್ತು. ಪಿಲ್ಲರ್ ಸರಿಮಾಡಲು ಬೇಕಾದ ವಸ್ತುಗಳನ್ನು ತರಲು ರಸ್ತೆಯೂ ಇಲ್ಲದ್ದರಿಂದ ಸಮಸ್ಯೆ ಹಾಗೆಯೇ ಉಳಿದಿತ್ತು. ಆದರೂ ಸ್ಥಳೀಯರೆಲ್ಲ ಸೇರಿ ವೆಲ್ಡಿಂಗ್ ಕೆಲಸ ಮಾಡುವವರನ್ನು ಕರೆಸಿ ಸೇತುವೆ ಸರಿ ಮಾಡುವ ಪ್ರಯತ್ನ ಮಾಡಿದರೂ ಅದು ಲ ನೀಡಿಲ್ಲ. ಮೀನುಗಾರರೇ ಹೆಚ್ಚಿರುವ ಹೊಯಿಗೆ ಪ್ರದೇಶಕ್ಕೆ ಬೋಟ್‌ನಲ್ಲಿ ಸಾಮಗ್ರಿಗಳನ್ನು ಕೊಂಡೊಯ್ಯಲೂ ಆಗುತ್ತಿಲ್ಲ. ಹೀಗಾಗಿ ಪ್ರಮುಖ ಪಿಲ್ಲರ್ ದುರಸ್ತಿ ಮಾಡಲೂ ಆಗದೆ ಸಮಸ್ಯೆ ಇನ್ನಷ್ಟು ಕಗ್ಗಂಟಾಗಿದೆ.

    ಹೊಯಿಗೆ ಪ್ರದೇಶಕ್ಕೆ ನೇತ್ರಾವತಿ ಸೇತುವೆ ಭಾಗದಿಂದ ರಸ್ತೆ ನಿರ್ಮಿಸಿ, ಬಳಿಕ ಪಾದಚಾರಿ ಸೇತುವೆ ಇರುವ ಜಾಗದಲ್ಲಿ ವಾಹನ ಓಡಾಡುವ ಶಾಶ್ವತ ಸೇತುವೆ ನಿರ್ಮಿಸುವ ಯೋಜನೆಗೆ 2ಕೋಟಿ ರೂ. ವಿಶೇಷ ಅನುದಾನ ಕಾಯ್ದಿರಿಸಲಾಗಿದೆ. ರಸ್ತೆ ಕಾಮಗಾರಿಗೆ ಯೋಜಿತ ಸ್ಥಳವು ಸಿಆರ್‌ಜಡ್ ವ್ಯಾಪ್ತಿಗೆ ಸೇರಿದ್ದರಿಂದ ಕಾಮಗಾರಿಗೆ ತಡೆ ಬಂದಿದೆ. ಎದುರಾದ ಕಾನೂನು ತೊಡಕು ನಿವಾರಿಸುವ ಕಾಪ್ರಗತಿಯಲ್ಲಿದೆ. ತಡೆ ತೆರವಾದ ಬಳಿಕ ಕಾಮಗಾರಿ ಆರಂಭಗೊಳ್ಳಲಿದೆ.
    – ವೇದವ್ಯಾಸ ಕಾಮತ್, ಶಾಸಕ

    ಹೊಯಿಗೆ ಪ್ರದೇಶಕ್ಕಿರುವ ರಸ್ತೆ, ಸೇತುವೆ ಹಾಳಾಗಿ ಆ ಭಾಗದ 300ಕ್ಕೂ ಹೆಚ್ಚು ಕುಟುಂಬ ಸಂಕಷ್ಟಕೀಡಾಗಿರುವ ಮಾಹಿತಿ ಪಾಲಿಕೆಗೆ ಇದೆ. ಈಬಗ್ಗೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಶಾಸಕರ ನಿರ್ದೇಶನದ ಮೇರೆಗೆ ಶಾಶ್ವತ ರಸ್ತೆ, ಸೇತುವೆ ಕಾಮಗಾರಿಗೆ ಯೋಜನೆ ರೂಪಿಸಲಾಗಿದೆ.
    – ಜಯಾನಂದ ಅಂಚನ್ ಮೇಯರ್, ಮಹಾನಗರ ಪಾಲಿಕೆ, ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts