More

    ಮಲೆನಾಡಿನಾದ್ಯಂತ ಭೂಮಿ ಹುಣ್ಣಿಮೆ ಸಂಭ್ರಮ

    ಶಿವಮೊಗ್ಗ: ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಬೆಳೆಗಳ ನಡುವೆ ಭೂಮಿ ತಾಯಿಗೆ ಭಾನುವಾರ ಜಿಲ್ಲಾದ್ಯಂತ ವಿಶೇಷ ಪೂಜೆ ಪುನಸ್ಕಾರಗಳು ನೆರವೇರಿದವು. ರೈತಾಪಿ ವರ್ಗದವರು ಬೆಳೆದು ನಿಂತ ಪೈರುಗಳಿಗೆ ಉಡಿ ತುಂಬುವ ಮೂಲಕ ಭೂಮಿ ಹುಣ್ಣಿಮೆಯನ್ನು ಸಡಗರ ಸಂಭ್ರಮದಿಂದ ಆಚರಿಸಿದರು.
    ಮುಂಗಾರಿನಲ್ಲಿ ಬಿತ್ತನೆ ಮಾಡಿದ ಬೆಳೆಗಳು ಹಾಲು ತುಂಬುವ ಭೂಮಿ ಹುಣ್ಣಿಮೆಯ ಸಮಯದಲ್ಲಿ ತುಂಬು ಗರ್ಭಿಣಿಯಂತೆ ಕಂಗೊಳಿಸುವ ಭೂಮಿ ತಾಯಿಗೆ ಮಡಿಲು ತುಂಬುವುದು ಭೂಮಿ ಹುಣ್ಣಿಮೆಯ ವಿಶೇಷವಾಗಿದ್ದು ಹಬ್ಬದ ಮುನ್ನ ದಿನ ರಾತ್ರಿ ಇಡೀ ಮಾಡಿದ ವಿವಿಧ ಸಿಹಿ ಅಡುಗೆಯನ್ನು ನೈವೇದ್ಯವಾಗಿ ಮಾಡಿ ಪೂಜೆ ಸಲ್ಲಿಸಿ ಸವಿದರು.
    ಮುಂಗಾರಿನಲ್ಲಿ ಬಿತ್ತನೆ ಮಾಡಿದ ಬೆಳೆಗಳು ಈ ವೇಳೆಗಾಗಲೇ ತೆನೆ ತುಂಬುವ ಹಂತ ತಲುಪುವ ಹಿನ್ನೆಲೆಯಲ್ಲಿ ಗರ್ಭಿಣಿರನ್ನು ಸೀಮಂತಕ್ಕೆ ಸಿಂಗರಿಸಿದಂತೆ ಪೈರನ್ನು ಒಡವೆ ಮತ್ತು ಹೊಸ ಸೀರೆಗಳಿಂದ ಸಿಂಗರಿಸಿ ಪೂಜೆ ಸಲ್ಲಿಸಿದರು. ಈ ಮೂಲಕ ಬೆಳೆದು ನಿಂತ ಪೈರಿಗೆ ಉಡಿ ತುಂಬಿದರು.
    ಕುಂಬಳಕಾಯಿ, ಚಿನ್ನಿಕಾಯಿ, ಸೌತೆಕಾಯಿ, ಅಮಟೆಕಾಯಿ ಸೇರಿದಂತೆ ಎಲ್ಲ ರೀತಿಯ ತರಕಾರಿಗಳನ್ನು ಸಂಗ್ರಹಿಸಿ ಬೇಯಿಸಿ ಚರಗ ತಯಾರಿಸಲಾಗುತ್ತದೆ. ಇದನ್ನು ಹಬ್ಬದ ದಿನ ರೈತರು ಜಮೀನುಗಳ ಸುತ್ತ ಚೆಲ್ಲಿದರು. ಇದರೊಂದಿಗೆ ಹಾಲುಗ್ಗಿ ತಯಾರಿಸಿ ಇದನ್ನು ಭೂಮಿಗೆ ನೇವೇದ್ಯ ಮಾಡಿದರು. ಇದಾದ ಬಳಿಕ ಇಡೀ ಕುಟುಂಬದವರೂ ಗದ್ದೆ, ತೋಟಗಳಲ್ಲಿ ಒಟ್ಟಿಗೆ ಕುಳಿತು ಹಬ್ಬದೂಟ ಮಾಡಿ ಮನೆಗಳಿಗೆ ಮರಳಿದರು.
    ಭತ್ತ, ಅಡಕೆ ಮರಗಳಿಗೆ ಪೂಜೆ: ಭತ್ತದ ಗದ್ದೆ ಹೊಂದಿರುವವರು ಸಸಿಯನ್ನು ಮುತ್ತೈದೆಯಂತೆ ಸಿಂಗರಿಸಿ ನೈವೇದ್ಯ ನೀಡಿದರೆ, ಕೆಲವರು ಅಡಕೆ ಮರಗಳಿಗೆ ವಿಶೇಷ ಪೂಜೆ ಸಲ್ಲಿಸಿ ನೈವೇದ್ಯ ಮಾಡಿದರು. ಹಸೆ ಚಿತ್ತಾರದಿಂದ ಅಲಂಕೃತಗೊಂಡಿರುವ ಎರಡು ಬುಟ್ಟಿಯಲ್ಲಿ ವಿವಿಧ ಬಗೆಯ ಅಡುಗೆ ಪದಾರ್ಥಗಳನ್ನು ತಮ್ಮ ಹೊಲಕ್ಕೆ ಒಯ್ದು, ಭೂಮಿಗೆ ನೈವೇದ್ಯ ಮಾಡಿ, ನಂತರ ಅಲ್ಲಿಯೇ ಊಟ ಮಾಡಲಾಗುತ್ತದೆ. ಬಳಿಕ ಚರಗವನ್ನು ಭೂಮಿತಾಯಿಗೆ ಹಾಕಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts