More

    ಆಡು, ಕುರಿ ಸಾಕಣೆ ಲಾಭದಾಯಕ

    ವಿಜಯಪುರ: ರೈತರು ತಮ್ಮ ಆದಾಯ ದ್ವಿಗುಣಗೊಳಿಸಿಕೊಳ್ಳಲು ಕೃಷಿ ಜತೆ ಜತೆಗೆ ಕೃಷಿಯೇತರ ಚಟುವಟಿಕೆಯಲ್ಲಿ ತೊಡಗುವುದು ಅತಿಮುಖ್ಯವಾಗಿದೆ ಎಂದು ಪಶು ವಿಜ್ಞಾನಿ ಡಾ.ಸಂಗೀತಾ ಜಾಧವ ಸಲಹೆ ನೀಡಿದರು.
    ನಗರ ಹೊರವಲಯದ ಹಿಟ್ನಳ್ಳಿ ಫಾರ್ಮ್‌ನಲ್ಲಿನ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವೈಜ್ಞಾನಿಕವಾಗಿ ಆಡು ಮತ್ತು ಕುರಿ ಸಾಕಣೆ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
    ರೈತರು ಬಹುಮುಖ್ಯವಾಗಿ ಜಾನುವಾರು ಸಾಕಣೆ ಮಾಡುವುದರಿಂದ ಆದಾಯ ಹೆಚ್ಚಿಸಿಕೊಳ್ಳಬಹುದು. ಗ್ರಾಮೀಣ ಪ್ರದೇಶ ರೈತರ ಆರ್ಥಿಕ ಅಭಿವೃದ್ಧಿಯಲ್ಲಿ ಜಾನುವಾರು ಸಾಕಣೆ (ಪಶುಸಂಗೋಪನೆ) ಅತ್ಯಂತ ಮಹತ್ವದ ಪಾತ್ರವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಕೃಷಿಯೇತರ ಚಟುವಟಿಕೆಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಲಿದೆ. ಆಡು, ಕುರಿ, ಕೋಳಿ, ಹೈನುಗಾರಿಕೆ ಮಾಡುವವರು ಹೆಚ್ಚಾಗಲಿದ್ದಾರೆ ಎಂದು ಹೇಳಿದರು.
    ಪ್ರಮುಖವಾಗಿ ಕುರಿ ಮತ್ತು ಆಡು ಸಾಕಣೆ ಲಾಭದಾಯಕವಾಗಿದ್ದು, ಕೆಲವೊಂದು ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಿದೆ. ದೊಡ್ಡ ಪ್ರಮಾಣದ ಸಾಕಣೆ ಆರಂಭಿಸುವ ಮೊದಲು ಚಿಕ್ಕದಾಗಿ ಆರಂಭಿಸಿದರೆ ಬಹಳ ಚೆನ್ನಾಗಿರುತ್ತದೆ. ಜತೆಗೆ ಆರ್ಥಿಕ ಹೊರೆಯು ಕಡಿಮೆಯಾಗಿರುತ್ತದೆ. ಅದನ್ನೇ ಎರಡ್ಮೂರು ವರ್ಷಗಳಲ್ಲಿ ದ್ವಿಗುಣಗೊಳಿಸಿಕೊಂಡು ದೊಡ್ಡ ಉದ್ಯಮವನ್ನಾಗಿ ಮಾಡಿಕೊಳ್ಳಬಹುದು. ಸ್ಥಳೀಯವಾಗಿ ಲಭ್ಯವಾಗುವ ತಳಿಗಳನ್ನೇ ಸಾಕಣೆ ಮಾಡಿದರೆ ಉತ್ತಮವಾಗಿರುತ್ತದೆ. ಇದರಿಂದ ನಷ್ಟಕ್ಕಿಂತ ಲಾಭವೇ ಹೆಚ್ಚಾಗಿರುತ್ತದೆ ಮತ್ತು ಆ ತಳಿಗಳ ಬಗ್ಗೆ ಸಾಮಾನ್ಯ ಜ್ಞಾನ ಕೂಡ ಇರುತ್ತದೆ. ಸಾಕಣೆ ವೆಚ್ಚವೂ ಕಡಿಮೆಯಾಗುತ್ತದೆ. ನಮ್ಮಲ್ಲೇ ದೊರೆಯುವಂತಹ ಆಹಾರವನ್ನೇ ನೀಡಿದರೂ ಯಾವುದೇ ರೀತಿಯ ತೊಂದರೆಗಳು ಇರುವುದಿಲ್ಲ. ಆರೋಗ್ಯದ ಸಮಸ್ಯೆಗಳು ಮತ್ತು ಮಾರುಕಟ್ಟೆ ಸಮಸ್ಯೆಗಳು ಕಾಡುವುದಿಲ್ಲ ಎಂದರು.
    ವಿಸ್ತರಣಾ ನಿರ್ದೇಶಕ ಡಾ.ಆರ್.ಬಿ.ಬೆಳ್ಳಿ, ಹಿರಿಯ ವಿಜ್ಞಾನಿ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಎಸ್.ಎ.ಬಿರಾದಾರ, ಗೃಹ ವಿಜ್ಞಾನಿ ಡಾ.ಪ್ರೇಮಾ ಪಾಟೀಲ ಮತ್ತಿತರರು ಇದ್ದರು.
    ಡಾ.ಸಂಗೀತಾ ಜಾಧವ ಅವರು ಕುರಿ ಮತ್ತು ಆಡು ತಳಿಗಳ ಬಗ್ಗೆ, ಕೊಟ್ಟಿಗೆ, ಆಹಾರ, ಆರೋಗ್ಯ ನಿರ್ವಹಣೆ, ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಕೊಳ್ಳುವ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಮೂರು ದಿನ ನಡೆಯುವ ತರಬೇತಿ ಶಿಬಿರದಲ್ಲಿ 40ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.


    ಆಡು, ಕುರಿ ಸಾಕಣೆ ಲಾಭದಾಯಕ
    ಆಡು, ಕುರಿ ಸಾಕಣೆ ಲಾಭದಾಯಕ
    ಆಡು, ಕುರಿ ಸಾಕಣೆ ಲಾಭದಾಯಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts