ಹಿರಿಯೂರು: ತಾಲೂಕಿನಲ್ಲಿ ಇಂಜಿನಿಯರಿಂಗ್ ಕಾಲೇಜ್-ಹೈಟೆಕ್ ಆಸ್ಪತ್ರೆ ಸ್ಥಾಪಿಸಲು ಶೀಘ್ರದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹೇಳಿದರು.
ನಗರದ ಅಂಬೇಡ್ಕರ್ ವೃತ್ತದ ಸಮೀಪ ವಿವಿ ಸಾಗರ ಜಲಾಶಯದ ಎಡ ದಂಡೆ ನಾಲೆ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಕಳೆದ ಎರಡು ವರ್ಷ ದ್ವೇಷ ರಾಜಕಾರಣ ಮಾಡದೆ ಸರ್ವರಿಗೂ ಸಾಮಾಜಿಕ ನ್ಯಾಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದು, ಬಡ ಜನತೆಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಹಾಗೂ ವಿದ್ಯಾರ್ಥಿಗಳು ಉಜ್ವಲ ಭವಿಷ್ಯಕ್ಕೆ ನೆರವಾಗಲು ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಲು ಸರ್ಕಾರದ ಮಟ್ಟದಲ್ಲಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಕಡಲೆಗೆ ಬೆಂಬಲ ಬೆಲೆ: ಬಿಎಸ್‌ವೈ ನೇತೃತ್ವದ ರಾಜ್ಯ ಸರ್ಕಾರ ರೈತರ ಹಿತ ಕಾಯಲು ಬದ್ಧವಾಗಿದ್ದು, ತಾಲೂಕಿನ ರೈತರ ಅನುಕೂಲಕ್ಕೆ ಶೀಘ್ರದಲ್ಲಿ ಕಡಲೆ ಖರೀದಿ ಕೇಂದ್ರ ತೆರೆದು ಬೆಂಬಲ ಬೆಲೆ ಘೋಷಣೆಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಜಿಪಂ ಸದಸ್ಯೆ ರಾಜೇಶ್ವರಿ, ನಗರಸಭೆ ಮಾಜಿ ಅಧ್ಯಕ್ಷ ಟಿ.ಚಂದ್ರಶೇಖರ್, ರೈತ ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ, ಮುಖಂಡರಾದ ಕೆ.ಸಿ.ಹೊರಕೇರಪ್ಪ, ಆಲೂರು ಶಿವಕುಮಾರ್, ಎಚ್.ಆರ್.ತಿಮ್ಮಯ್ಯ, ಕಬಡ್ಡಿ ಶ್ರೀನಿವಾಸ್, ಶಾಸಕರ ಆಪ್ತ ಸಹಾಯಕ ನಿರಂಜನ್ ಇತರರಿದ್ದರು.
ಭದ್ರೆ ಕಾಮಗಾರಿಗೆ ವೇಗ ನೀಡಲು ಆಗ್ರಹ: ರೈತರ ಮನವಿ: ಆಮೆ ಗತಿಯಲ್ಲಿ ಸಾಗುತ್ತಿರುವ ಭದ್ರಾ ಕಾಮಗಾರಿಗೆ ವೇಗ ನೀಡುವುದು, ವಿವಿ ಸಾಗರಕ್ಕೆ 5 ಟಿಎಂಸಿ ಅಡಿ ನೀರು ಮೀಸಲಿಡುವುದು, ಸಿಎಂ ಆದೇಶದಂತೆ ಮಾರ್ಚ್ ವರೆಗೆ ವಿವಿ ಸಾಗರಕ್ಕೆ ಭದ್ರಾ ನೀರು ಹರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರೈತ ಮುಖಂಡರು ಶಾಸಕರಿಗೆ ಮನವಿ ಸಲ್ಲಿಸಿದರು.
ನಾಲೆಗಳಲ್ಲಿ ನೀರು ಹರಿಸಲು ಮನವಿ: ರಾಜ್ಯ ಸರ್ಕಾರದ ಇಚ್ಛಾಶಕ್ತಿ ಫಲವಾಗಿ ವಿವಿ ಸಾಗರ ಜಲಾಶಯಕ್ಕೆ ಭದ್ರೆ ನೀರು ಹರಿದಿದ್ದು, ಕಳೆದ ನಾಲ್ಕೈದು ವರ್ಷ ನಾಲೆಗಳಿಗೆ ನೀರಿಲ್ಲದೆ ನದಿ ಪಾತ್ರದಲ್ಲಿನ ಸಾವಿರಾರು ಅಡಿಕೆ, ತೆಂಗು ನಾಶವಾಗಿದೆ. ಎಡ-ಬಲ ದಂಡೆ ನಾಲೆಗಳ ಹೂಳು-ಗಿಡಗಂಟೆ ತೆಗೆದು ಮಾರ್ಚ್-ಏಪ್ರಿಲ್ ತಿಂಗಳಲ್ಲಿ ನಾಲೆಗಳಿಗೆ ನೀರು ಹರಿಸಲು ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗುವುದು ಎಂದು ಪೂರ್ಣಿಮಾ ತಿಳಿಸಿದರು.