More

    ಪಕ್ಷ ನಿಷ್ಠರಿಗೆ ಬಿಜೆಪಿಯಲ್ಲಿ ಮನ್ನಣೆ

    ಹಿರಿಯೂರು: ಬಿಜೆಪಿ ತತ್ವ ಸಿದ್ಧಾಂತದ ಆಧಾರದ ಮೇಲೆ ಸ್ಥಾಪಿತವಾದ ಪಕ್ಷ, ಇಲ್ಲಿ ವ್ಯಕ್ತಿಗಿಂತ ಪಕ್ಷ ದೊಡ್ಡದು, ವ್ಯಕ್ತಿ ಪೂಜೆಗೆ ಅವಕಾಶವಿಲ್ಲ ಎಂದು ಸಂಸದ ಎ.ನಾರಾಯಣಸ್ವಾಮಿ ಹೇಳಿದರು.

    ನಗರದ ರೋಟರಿ ಸಭಾಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಂಡಲ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಜನರ ಪ್ರೀತಿ, ವಿಶ್ವಾಸ ಗಳಿಸಿ 2ನೇ ಬಾರಿಗೆ ದೇಶದ ಆಡಳಿತ ಚುಕ್ಕಾಣಿ ಹಿಡಿದಿದೆ. ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನಿಗೂ ಉನ್ನತ-ಸ್ಥಾನಮಾನ ಲಭಿಸಿದೆ. ರಾಷ್ಟ್ರೀಯತೆ ಸಿದ್ಧಾಂತ ಮೈಗೂಡಿಸಿಕೊಂಡಿರುವ ಬಿಜೆಪಿ ಇಂದು ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾಗಿದೆ ಎಂದು ತಿಳಿಸಿದರು.

    ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ಮಾತನಾಡಿ, ಸ್ಥಳೀಯ ಸಂಸ್ಥೆ ಚುನಾವಣೆಗಳು ಹತ್ತಿರವಾಗುತ್ತಿದ್ದು, ಕಾರ್ಯಕರ್ತರು ತಳಮಟ್ಟದಿಂದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

    ಸಿಎಂ ಬಿಎಸ್‌ವೈ ಅವರ ಇಚ್ಛಾಶಕ್ತಿ ಫಲವಾಗಿ ವಿವಿ ಸಾಗರ ಜಲಾಶಯಕ್ಕೆ ಭದ್ರೆ ಹರಿದಿದ್ದು, ತ್ವರಿತವಾಗಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಗೊಳಿಸಿ ವಿವಿ ಸಾಗರಕ್ಕೆ 5 ಟಿಎಂಸಿ ಅಡಿ ನೀರು ತುಂಬಿಸಲು ಸರ್ಕಾರದ ಮಟ್ಟದಲ್ಲಿ ಹೋರಾಟ ನಡೆಸಲಾಗುವುದು. ಹಿರಿಯೂರು-ಚಳ್ಳಕೆರೆ, ಚಿತ್ರದುರ್ಗದಲ್ಲಿ ಕೈಗಾರಿಕಾ ಕಾರಿಡರ್ ಸ್ಥಾಪನೆಗೆ ರಾಜ್ಯ ಸರ್ಕಾರ ಭರವಸೆ ನೀಡಿದ್ದು, ಇದರಿಂದ ಜಿಲ್ಲೆಯ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ ಎಂದು ತಿಳಿಸಿದರು.

    ಮುಖಂಡ ಎನ್.ಆರ್.ಲಕ್ಷ್ಮೀಕಾಂತ್ ಮಾತನಾಡಿ, ನೂತನ ಅಧ್ಯಕ್ಷರು ಪಕ್ಷದ ಎಲ್ಲ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆ ಕೆಲಸ ಾಡಬೇಕು. ಸಕ್ಕರೆ ಕಾರ್ಖಾನೆ ಪುನಶ್ಚೇತನ, ಭದ್ರಾ ಮೇಲ್ದಂಡೆ ಯೋಜನೆ ತ್ವರಿತ ಪೂರ್ಣಕ್ಕೆ ಶಾಸಕರು, ಸಂಸದರು ಬದ್ಧತೆ ಪ್ರದರ್ಶಿಸಬೇಕು ಎಂದು ಒತ್ತಾಸೆ ವ್ಯಕ್ತಪಡಿಸಿದರು.

    ನಗರಸಭೆ ಮಾಜಿ ಸದಸ್ಯ ಜಿ.ಪ್ರೇಮ್‌ಕುಮಾರ್ ಮಾತನಾಡಿ, ಬಿಜೆಪಿಗೆ ಕಾರ್ಯಕರ್ತರೇ ದೊಡ್ಡ ಶಕ್ತಿ, ನೂತನ ಅಧ್ಯಕ್ಷರಿಗೆ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಶಕ್ತಿ ಇದೆ ಎಂದರು.

    ಮಾಜಿ ಜಿಲ್ಲಾಧ್ಯಕ್ಷ ನರೇಂದ್ರನಾಥ್ ಮಾತನಾಡಿ, ಸಕಾರಾತ್ಮಕ ರಾಷ್ಟ್ರೀಯ ದೃಷ್ಟಿಕೋನ, ಸದೃಢ ರಾಷ್ಟ್ರ ನಿರ್ಮಾಣ ಪಕ್ಷದ ಮೂಲ ಸಿದ್ಧಾಂತವಾಗಿದ್ದು, ಬಿಜೆಪಿ ದೇಶಕ್ಕೆ ಬಲಿಷ್ಠ ನಾಯಕತ್ವದ ಕೊಡುಗೆ ನೀಡಿದೆ ಎಂದು ತಿಳಿಸಿದರು.

    ನಿಕಟಪೂರ್ವ ಅಧ್ಯಕ್ಷ ದ್ಯಾಮಣ್ಣ ಅವರು ನೂತನ ಅಧ್ಯಕ್ಷ ವಿ.ವಿಶ್ವನಾಥ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

    ಜಿಲ್ಲಾಧ್ಯಕ್ಷ ಎ.ಮುರುಳಿ, ಜಿಪಂ ಮಾಜಿ ಅಧ್ಯಕ್ಷ ಮೀಸೆ ಸಿ.ಮಹಾಲಿಂಗಪ್ಪ, ಸದಸ್ಯೆ ರಾಜೇಶ್ವರಿ, ತಾಪಂ ಸದಸ್ಯರಾದ ಯಶವಂತ್, ಜಯರಾಮಯ್ಯ, ಡಿಷ್ ಮಂಜುನಾಥ್, ಕೇಶವಮೂರ್ತಿ, ಹರ್ಷ, ರಂಗಸ್ವಾಮಿ, ನಗರಸಭೆ ಸದಸ್ಯರಾದ ಶಿವರಂಜನಿ, ಅಂಬಿಕಾ, ಮುಖಂಡರಾದ ಪ್ರಭು ಯಾದವ್, ನಾಗರಾಜ್ ರಾವ್, ಆರಾಧ್ಯ, ಚಿತ್ತಪ್ಪ, ವೆಂಕಟೇಶ್, ನರೇಂದ್ರಬಾಬು ಇತರರಿದ್ದರು.

    ಶಾಸಕಿ ಪೂರ್ಣಿಮಾ ಹಾಗೂ ಬೆಂಬಲಿಗರ ಗೈರು: ಪದಗ್ರಹಣ ಕಾರ್ಯಕ್ರಮಕ್ಕೆ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್, ಒಬಿಸಿ ಮೋರ್ಚಾ ಉಪಾಧ್ಯಕ್ಷ ಡಿ.ಟಿ.ಶ್ರೀನಿವಾಸ್ ಹಾಗೂ ನೂರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿದ್ದ ಶಾಸಕರ ಬೆಂಬಲಿಗರು ಕಾರ್ಯಕ್ರಮಕ್ಕೆ ಗೈರಾಗಿದ್ದು ಚರ್ಚೆಗೆ ಗ್ರಾಸವಾಗಿತ್ತು.

    ಒಬ್ಬ ವ್ಯಕ್ತಿಯಿಂದ ಪಕ್ಷ ಬಲಿಷ್ಠವಾಗಿಲ್ಲ: ಹಿರಿಯೂರು ತಾಲೂಕಿನಲ್ಲಿ ಕಾರ್ಯಕರ್ತರ ಶ್ರಮದಿಂದ ಪಕ್ಷ ಬಲಿಷ್ಠವಾಗಿದೆ ಎಂಬುದನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು ಎಂದು ಮುಖಂಡ ಸಿದ್ದೇಶ್ ಯಾದವ್ ಹೇಳಿದರು. ಯಾವುದೇ ಒಬ್ಬ ವ್ಯಕ್ತಿಯಿಂದ ಪಕ್ಷ ಕಟ್ಟಲು ಸಾಧ್ಯವಿಲ್ಲ, ಅಹಂ ಬಿಟ್ಟು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ನಾಯಕತ್ವ ಅಗತ್ಯವಾಗಿದೆ, ಪಕ್ಷಕ್ಕಿಂತ ಯಾರು ದೊಡ್ಡವರಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts