More

    ಮುದ್ರಣ ಮಾಧ್ಯಮಕ್ಕೆ ಜಿಎಸ್‌ಟಿ ಕಡಿತಗೊಳಿಸಲಿ; ಸರ್ಕಾರಕ್ಕೆ ಹಿರಿಯ ಪತ್ರಕರ್ತರಾದ ರುದ್ರಣ್ಣ ಹರ್ತಿಕೋಟೆ, ಶಿವಾನಂದ ತಗಡೂರು ಒತ್ತಾಯ

    ಹಿರಿಯೂರು: ಮುದ್ರಣ ಮಾಧ್ಯಮದಲ್ಲಿ ಬಳಸುವ ಕಾಗದ, ಇಂಕು ಮತ್ತಿತರ ವಸ್ತುಗಳ ಮೇಲೆ ಕೇಂದ್ರ ಸರ್ಕಾರ ಜಿಎಸ್‌ಟಿ ಹಾಕುತ್ತಿದ್ದು, ಇದನ್ನು ಕಡಿತಗೊಳಿಸಬೇಕು ಎಂದು ವಿಜಯವಾಣಿ ಸಹಾಯಕ ಸಂಪಾದಕ ರುದ್ರಣ್ಣ ಹರ್ತಿಕೋಟೆ ಮತ್ತು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಒತ್ತಾಯಿಸಿದರು.

    ನಗರದ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.

    ಜಿಎಸ್‌ಟಿ ಮಂಡಳಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಸದಸ್ಯರಾಗಿದ್ದಾರೆ. ಮುದ್ರಣ ಮಾಧ್ಯಮಕ್ಕೆ ಅನ್ವಯಿಸುವ ಜೆಎಸ್‌ಟಿ ಕಡಿತಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಶಾಸಕರಲ್ಲಿ ಈ ಹಿರಿಯ ಪತ್ರಕರ್ತರು ಮನವಿ ಮಾಡಿದರು.

    ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿಗೆ 2 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿದ್ದು, ಅದರ ಸದ್ಬಳಕೆಯಾಗಿಲ್ಲ. ಶಾಸಕರು ಸರ್ಕಾರದ ಮೇಲೆ ಒತ್ತಡ ಹಾಕಿ ಪತ್ರಿಕಾ ವಿತರಕರ ಹಿತ ಕಾಯಬೇಕು ಎಂದು ಗಮನ ಸೆಳೆದರು.

    ಭದ್ರಾ ಮೇಲ್ದಂಡೆ ಯೋಜನೆ ಸಾಕಾರಕ್ಕೆ ಚಿತ್ರದುರ್ಗ ಜಿಲ್ಲೆ ಪತ್ರಕರ್ತರ ಕೊಡುಗೆ ಶ್ಲಾಘನೀಯ ಎಂದ ರುದ್ರಣ್ಣ ಹರ್ತಿಕೋಟೆ, ಪತ್ರಕರ್ತರಲ್ಲಿ ಇಂದು ಅಧ್ಯಯನಶೀಲತೆ ಕಡಿಮೆಯಾಗುತ್ತಿದೆ. ಅಭಿವೃದ್ಧಿ ಪತ್ರಿಕೋದ್ಯಮದ ಕಡೆ ಗಮನ ಹರಿಸಬೇಕಿದೆ. ದೃಶ್ಯ ಮತ್ತು ಪತ್ರಿಕಾ ಮಾಧ್ಯಮ ಜನರ ವಿಶ್ವಾಸಾರ್ಹತೆ ಗಳಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು.

    ಸ್ವಾತಂತ್ರ್ಯ ಪೂರ್ವ, ನಂತರದ ಕಾಲಘಟ್ಟದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ತಂತ್ರಜ್ಞಾನ ಬೆಳವಣಿಗೆಯಿಂದ ಮಾಧ್ಯಮ ಇಂದು ವೇಗವಾಗಿ ಓದುಗರನ್ನು ತಲುಪುತ್ತಿದೆ ಎಂದು ಶಿವಾನಂದ ತಗಡೂರು ಹೇಳಿದರು.

    ಸತ್ಯ ಮತ್ತು ವಾಸ್ತವ ವರದಿ ಮಾಡುವ ಹೊಣೆಗಾರಿಕೆ ಪತ್ರಕರ್ತರ ಮೇಲಿದೆ. ಮಹಾತ್ಮ ಗಾಂಧೀಜಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಪತ್ರಿಕೆಗಳ ಮೂಲಕ ಸ್ವಾತಂತ್ರ್ಯ ಹೋರಾಟ, ಚಳವಳಿ, ಸಮಾಜದಲ್ಲಿ ಅಂಕು-ಡೊಂಕು ತಿದ್ದುವ ಕೆಲಸ ಮಾಡಿದ್ದರು. ಪತ್ರಕರ್ತರು ಸಂವಿಧಾನದ ಶ್ರೇಷ್ಠತೆ ಎತ್ತಿ ಹಿಡಿದು ಸಮಾಜಮುಖಿಯಾಗಿ ಕೆಲಸ ಮಾಡಬೇಕು ಎಂದರು.

    ಮೊಬೈಲ್ ಬಳಕೆಯಲ್ಲಿ ಪ್ರಜ್ಞೆ ಇರಲಿ:
    ಪ್ರಸ್ತುತ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣವನ್ನು ಹೆಚ್ಚು ಬಳಸುತ್ತಿದ್ದು, ಒಂದು ಕಾಲದಲ್ಲಿ ಮಕ್ಕಳ ಕೈಗೆ ಮೊಬೈಲ್ ಕೊಡಲು ಪಾಲಕರು ಹಿಂದೇಟು ಹಾಕುತ್ತಿದ್ದರು. ಕೋವಿಡ್ ಬಂದಾಗಿನಿಂದ ಮಕ್ಕಳಿಗೆ ಮೊಬೈಲ್ ಕೊಡುವಂತಾಗಿದೆ. ವಿದ್ಯಾರ್ಥಿಗಳು ಪ್ರಜ್ಞಾವಂತಿಕೆಯಿಂದ ಮೊಬೈಲ್ ಬಳಕೆ ಮಾಡಿ ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

    ಪತ್ರಕರ್ತರ ಬೇಡಿಕೆ ಧ್ವನಿ ಎತ್ತುವೆ:
    ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಪತ್ರಕರ್ತರ ಬೇಡಿಕೆಗಳ ಕುರಿತು ಧ್ವನಿ ಎತ್ತುತ್ತೇನೆ. ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವ ಪತ್ರಕರ್ತರ ಸಂಕಷ್ಟದ ಬಗ್ಗೆ ಅರಿವಿದ್ದು, ನಿವೇಶನ, ಸಂಘದ ಚಟುವಟಿಕೆಗೆ ಪತ್ರಿಕಾ ಭವನ, ಬಸ್ ಪಾಸ್, ಜೀವನಕ್ಕೆ ಭದ್ರತೆ ಕಲ್ಪಿಸುವಂತೆ ಶೀಘ್ರದಲ್ಲೇ ಸಿಎಂಗೆ ಮನವಿ ಮಾಡಲಾಗುವುದು ಎಂದು ಶಾಸಕಿ ಕೆ.ಪೂರ್ಣಿಮಾ ತಿಳಿಸಿದರು.

    ಇದೇ ವೇಳೆ ಕರ್ನಾಟಕ ಮಾಧ್ಯಮ ಮಾನ್ಯತಾ ಸಮಿತಿ ನೂತನ ಸದಸ್ಯರಾಗಿ ಆಯ್ಕೆಯಾದ ಹಿರಿಯ ಪತ್ರಕರ್ತ ರುದ್ರಣ್ಣ ಹರ್ತಿಕೋಟೆ ಅವರನ್ನು ತಾಲೂಕು-ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಗೌರವಿಸಲಾಯಿತು. ಪತ್ರಿಕಾ ವಿತರಕರಾದ ನಟರಾಜ್, ನಾಗಣ್ಣ, ಶಿವಶಂಕರ ಮಠದ್, ಕೃಷ್ಣಮೂರ್ತಿ, ಉಮೇಶ್, ರವಿ ಇತರರನ್ನು ಗೌರವಿಸಲಾಯಿತು. ಪ್ರಬಂಧ ಸ್ಪರ್ಧೆ ವಿಜೇತರಾದ ಸಹನಾ, ಕಲ್ಪನಾ ಹಾಗೂ ಲೋಕೇಶ್ ಅವರಿಗೆ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಯಿತು.

    ಪ್ರಾಚಾರ್ಯ ಡಾ.ಡಿ.ಧರಣೀಂದ್ರಯ್ಯ, ಕೆಪಿಸಿಸಿ ಸದಸ್ಯ ಕಂದಿಕೆರೆ ಸುರೇಶ್ ಬಾಬು, ಜೆ.ಸಿ.ಲೋಕೇಶ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ಯಶೋಧರ್, ತಾಲೂಕು ಅಧ್ಯಕ್ಷ ಹನುಮಂತರಾಯ, ನಗರಸಭೆ ಸದಸ್ಯ ಕೇಶವಮೂರ್ತಿ, ರೈತ ಮುಖಂಡರಾದ ಕಸವನಹಳ್ಳಿ ರಮೇಶ್, ಕೆ.ಸಿ.ಹೊರಕೇರಪ್ಪ, ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್.ತಿಮ್ಮಯ್ಯ, ತಾಕಸಾಪ ಅಧ್ಯಕ್ಷ ನಾಗೇಶ್, ನಿಕಟಪೂರ್ವ ಅಧ್ಯಕ್ಷ ಹರ್ತಿಕೋಟೆ ಮಹಾಸ್ವಾಮಿ, ವಕೀಲ ಬಬ್ಬೂರು ಸುರೇಶ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್, ಪ್ರಕಾಶ್, ಎಂ.ಎಲ್.ಗಿರಿಧರ್, ಪ್ರಸನ್ನ, ಮಲ್ಲಿಕಾರ್ಜುನ್ ಇತರರಿದ್ದರು.

    ಮಾಧ್ಯಮ ತೆರೆದ ಪುಸ್ತಕದಂತೆ ಕಾರ್ಯ ನಿರ್ವಹಿಸಬೇಕು, ಸತ್ಯಕ್ಕೆ ಹತ್ತಿರವಾದ ಸುದ್ದಿ ಪ್ರಕಟಿಸಿದಾಗ ಮಾತ್ರ ಜನರ ವಿಶ್ವಾಸಗಳಿಸಲು ಸಾಧ್ಯ. ದೃಶ್ಯ ಮಾಧ್ಯಮಗಳು ಇಂದು ಒಂದೇ ವಿಷಯವನ್ನು ಹತ್ತಾರು ಬಾರಿ ಬಿತ್ತರಿಸಿ ಜನರ ವಿಶ್ವಾಸ ಕಳೆದುಕೊಳ್ಳುತ್ತಿವೆ.
    ಡಿ.ಸುಧಾಕರ್, ಮಾಜಿ ಸಚಿವ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts