More

    ತೋಟಗಾರಿಕೆ ಬೆಳೆಗೆ ಅನುದಾನ ಕೊರತೆ

    ಖಂಡೇನಹಳ್ಳಿ ಬಸವರಾಜ್ ಹಿರಿಯೂರು: ಏನೆ ಸಮಸ್ಯೆಗಳು ಎದುರಾದರೂ ಮೊದಲಿಗೆ ಅದರ ಫಲ ಅನ್ನದಾತನಿಗೆ ತಟ್ಟುತ್ತದೆ. ಮಳೆ ಹೆಚ್ಚಾಗಲಿ, ಬರಗಾಲ ಅಪ್ಪಳಿಸಲಿ. ಇವುಗಳಿಗೆ ಕೃಷಿಕರು ಬದುಕು ಮೂರಾಬಟ್ಟೆ ಆಗಲಿದೆ.

    ಪ್ರಸ್ತುತ ಕರೊನಾ-ಲಾಕ್‌ಡೌನ್ ಎಫೆಕ್ಟ್ ಕೃಷಿಕರನ್ನು ತೀವ್ರ ಸಂಕಷ್ಟಕ್ಕೆ ದೂಡಿದೆ. ಈ ಮಧ್ಯೆ ಅನುದಾನದ ಕೊರತೆಯಿಂದ ಹನಿ ನೀರಾವರಿ ಸಹಾಯಧನ ಬಿಡುಗಡೆ ವಿಳಂಬ ಆಗುತ್ತಿದ್ದು, ತೋಟಗಾರಿಕೆ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಬಯಲುಸೀಮೆಗೆ ಹನಿ ನೀರಾವರಿ ಜೀವನಾಡಿಯಾಗಿದ್ದು, ಸರ್ಕಾರದಿಂದ ಶೇ.90ರಷ್ಟು ಸಹಾಯಧನ ಸಿಗಲಿದೆ ಎನ್ನುವ ಕಾರಣಕ್ಕೆ ರೈತರು ಸಾಲ ಮಾಡಿ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಸಿದ್ದಾರೆ. ಆದರೆ, ಅರ್ಜಿ ಸಲ್ಲಿಸಿದ ಜಿಲ್ಲೆಯ 6 ತಾಲೂಕಿನ 1500 ರೈತರಿಗೆ ಸಹಾಯಧನ ಬರಬೇಕಿದೆ.

    ಇಲಾಖೆ ನಿಯಮದಂತೆ ಪೈಪ್, ಫಿಲ್ಟರ್, ಲ್ಯಾಟರಲ್, ಮೈಕ್ರೊ ಟ್ಯೂಬ್ ಅಳವಡಿಸಿ ಅಗತ್ಯ ದಾಖಲೆ ಸಲ್ಲಿಸಿದ್ದರೂ ಸಹಾಯಧನ ನೀಡುತ್ತಿಲ್ಲ. ಆನ್‌ಲೈನ್ ಸಮಸ್ಯೆ ಅರ್ಜಿ ಅಪ್‌ಲೋಡ್ ಆಗುತ್ತಿಲ್ಲ. ತೋಟಗಾರಿಕೆ ಇಲಾಖೆಗೆ ಅನುದಾನದ ಕೊರತೆಯಿಂದ ಸಹಾಯಧನ ಬಂದಿಲ್ಲ ಎಂಬುದು ರೈತರಿಗೆ ಅಧಿಕಾರಿಗಳ ಸಿದ್ಧ ಉತ್ತರ ಸಾಮಾನ್ಯವಾಗಿದೆ.

    ಬೆಳೆ ಕಟಾವಾದರು ಸಹಾಯಧನ ಇಲ್ಲ: ರೈತರು ಪಪ್ಪಾಯಿ, ಈರುಳ್ಳಿ, ಬಾಳೆ, ದಾಳಿಂಬೆ ಸೇರಿ ವಿವಿಧ ಬೆಳೆಗಳಿಗೆ ಹನಿ ನೀರಾವರಿ ಅಳವಡಿಸಿಕೊಂಡಿದ್ದು, ಹನಿ ನೀರಾವರಿ ಅಳವಡಿಸಿ ಫಸಲಿಗೆ ಬಂದ ಬೆಳೆ ಕಟಾವಾದರು ಸಹಾಯಧನ ಮರಿಚಿಕೆಯಾಗಿದೆ.

    ಕರೊನಾ-ಲಾಕ್‌ಡೌನ್‌ನಿಂದ ಫಸಲಿಗೆ ಬಂದ ಹಣ್ಣು-ತರಕಾರಿ ಮಾರಾಟ ಮಾಡಲು ಸಾಧ್ಯವಾಗದೆ ಹೊಲದಲ್ಲಿಯೇ ಕೊಳೆತಿದೆ. ಮತ್ತೊಂದೆಡೆ ಸರ್ಕಾರ ಘೋಷಿಸಿರುವ ವಿಶೇಷ ಪ್ಯಾಕೇಜ್ ರೈತರ ಕೈ ಸೇರಿಲ್ಲ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಪಪ್ಪಾಯಿ-ಬಾಳೆಗಿಲ್ಲ ಅವಕಾಶ: ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಹೊಸದಾಗಿ ಬಾಳೆ, ಪಪ್ಪಾಯಿ ನಾಟಿ ಮಾಡುವ ರೈತರಿಗೆ ಪ್ರಸಕ್ತ ವರ್ಷದಿಂದ ಅವಕಾಶ ಇಲ್ಲ. ಸರ್ಕಾರ ಈ ಎರಡು ಬೆಳೆಗಳನ್ನು ಖಾತ್ರಿ ಯೋಜನೆಯಿಂದ ಕೈ ಬಿಟ್ಟು ಗಾಯದ ಮೇಲೆ ಬರೆ ಎಳೆದಿದೆ.

    ಬಯಲುಸೀಮೆಯಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಪಪ್ಪಾಯಿ-ಬಾಳೆ ಬೆಳೆಯುತ್ತಿದ್ದು, ಉದ್ಯೋಗ ಖಾತ್ರಿ ಯೋಜನೆಯಡಿ ನಾಟಿ ಮಾಡುವುದರಿಂದ ರೈತರಿಗೆ ಅನುಕೂಲವಾಗುತ್ತಿತ್ತು.

    60 ಲಕ್ಷ ರೂ. ಮೊತ್ತದ ಕ್ರಿಯಾ ಯೋಜನೆಯನ್ನು ಜಿಲ್ಲಾ ಪಂಚಾಯಿತಿಗೆ ಸಲ್ಲಿಸಲಾಗಿದ್ದು, ಈ ತಿಂಗಳು ಹನಿ ನೀರಾವರಿ ಸಹಾಯಧನ ಬಿಡುಗಡೆಯಾಗುವ ನಿರೀಕ್ಷೆ ಇದೆ.
    ಜಿ.ಸವಿತಾ, ಉಪ ನಿರ್ದೇಶಕಿ
    ತೋಟಗಾರಿಕೆ ಇಲಾಖೆ, ಹಿರಿಯೂರು

    ಎರಡು ವರ್ಷದ ಹಿಂದೆ ಹನಿ ನೀರಾವರಿ ಅಳವಡಿಸಿ ಪಪ್ಪಾಯಿ ನಾಟಿ ಮಾಡಲಾಗಿತ್ತು, ಬೆಳೆ ಕಟಾವಾಗಿ ಒಂದು ವರ್ಷ ಕಳೆದರು ಸಹಾಯಧನ ಬಂದಿಲ್ಲ.
    ಚಂದ್ರಣ್ಣ ರೈತ

    ಅಧಿಕಾರಿಗಳು ಕಮೀಷನ್ ಆಸೆಗೆ ಏಜೆನ್ಸಿ ಮುಖಾಂತರ ಹನಿ ನೀರಾವರಿ ಅಳವಡಿಸಿಕೊಂಡಿರುವ ಫಲಾನುಭವಿಗಳಿಗೆ ಮೊದಲು ಸಹಾಯಧನ ಪಾವತಿಸುತ್ತಿದ್ದಾರೆ, ಎರಡು ವರ್ಷದಿಂದ ಅರ್ಹ ಫಲಾನುಭವಿಗಳಿಗೆ ಸಹಾಯಧನ ಮರಿಚಿಕೆಯಾಗಿದೆ.
    ಕೆ.ಟಿ.ತಿಪ್ಪೇಸ್ವಾಮಿ
    ರೈತ ಸಂಘದ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts