More

    ಅರಣ್ಯ ಕೃಷಿಯಲ್ಲಿ ಯಶ ಕಂಡ ರಾಕ್

    ಖಂಡೇನಹಳ್ಳಿ ಬಸವರಾಜ್ ಹಿರಿಯೂರು: ಅಡಿಕೆ, ದಾಳಿಂಬೆ, ಪಪ್ಪಾಯಿ, ಬಾಳೆ ಬೆಳೆ ಜತೆ ಅರಣ್ಯ ಕೃಷಿಯಲ್ಲಿ ಯಶ ಕಾಣಲು ತಾಲೂಕಿನ ರೈತರೊಬ್ಬರು ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

    ತಾಲೂಕಿನ ಶೇಷಪ್ಪನಹಳ್ಳಿ ಗ್ರಾಮದ ರೈತ ರಾಕ್ ಮಂಜುನಾಥ್ 35 ಎಕರೆ ಭೂಮಿಯಲ್ಲಿ ನೈಸರ್ಗಿಕ ಕೃಷಿ ಕೈಗೊಂಡು ಇತರ ರೈತರಿಗೂ ಸ್ಫೂರ್ತಿಯಾಗಿದೆ.

    ಸುಂದರ ಬೆಟ್ಟಗುಡ್ಡ ಪರಿಸರದಲ್ಲಿರುವ ಜಮೀನಿನಲ್ಲಿ ವಿವಿಧ ಜಾತಿಯ 30 ಸಾವಿರ ಗಿಡ ಮರ ಬೆಳೆಸಿ ಇತರ ರೈತರಿಗೂ ಪ್ರೇರಣೆಯಾಗಿದ್ದಾರೆ.

    35 ಎಕರೆ ಜಮೀನಿನಲ್ಲಿ 6 ಸಾವಿರ ಅಡಿಕೆ, 3 ಸಾವಿರ ಶ್ರೀಗಂಧ, 2 ಸಾವಿರ ಸಿಲ್ವರ್ ಓಕ್, 3 ಸಾವಿರ ತೇಗ, 6 ಸಾವಿರ ದಾಳಿಂಬೆ, 2 ಸಾವಿರ ಹೆಬ್ಬೇವು, 9 ಸಾವಿರ ಬಾಳೆ, 54 ಸಾವಿರ ಕಲ್ಲಂಗಡಿ ನಾಟಿ ಮಾಡಿ, ಎಲ್ಲ ಭೂಮಿಯನ್ನು ಅರಣ್ಯ ಕೃಷಿಗೆ ಮೀಸಲಿರಿಸಿಕೊಂಡು ಲಾಭ ಪಡೆಯುತ್ತಿದ್ದಾರೆ.

    ಎಂಎಸ್ಸಿ ಜಿಯೋಲಾಜಿಸ್ಟ್ ಪದವಿ ಓದಿರುವ ರಾಕ್ ಮಂಜುನಾಥ್ ಕೃಷಿಕನಾಗಿ ರಾಜಕೀಯ-ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ವಯಸ್ಸು 50 ದಾಟುತ್ತಿದ್ದರೂ ಕೃಷಿ ಮಾಡುವಲ್ಲಿ ಉತ್ಸಾಹ ಕಳೆದುಕೊಂಡಿಲ್ಲ. 35 ಎಕರೆ ಕೃಷಿ ಭೂಮಿಯಲ್ಲಿ ತೋಟಗಾರಿಕೆ ಮತ್ತು ಅರಣ್ಯ ಕೃಷಿ ಮಾಡುವ ಮೂಲಕ ತಾಲೂಕಿನ ರೈತರಿಗೆ ಭೂಮಿ ಪಾಳು ಬಿಡಬೇಡಿ, ಗಿಡ ಮರ ನಾಶ ಮಾಡಿದರೆ ಪ್ರಕೃತಿ ನಮಗೆ ತಕ್ಕ ಪಾಠ ಕಲಿಸುತ್ತದೆ, ನೈಸರ್ಗಿಕ ಕೃಷಿಯಿಂದ ಭೂಮಿ ಫಲವತ್ತತೆ ಕಾಪಾಡುವುದರ ಜತೆಗೆ ಗುಣಮಟ್ಟದ ಕೃಷಿ ಉತ್ಪನ್ನ ಮಾಡಬಹುದು ಎನ್ನುವ ಸಂದೇಶ ನೀಡಿದ್ದಾರೆ.

    ಜಲ ಸಂರಕ್ಷಣೆಗೆ ಆದ್ಯತೆ: ಜಮೀನಿನ ಮೂಲೆ ಮೂಲೆಯಲ್ಲಿ ಕೃಷಿ ಹೊಂಡ, ಚೆಕ್ ಡ್ಯಾಂ ನಿರ್ಮಿಸಿ ಮಳೆ ನೀರು ಸಂರಕ್ಷಣೆಗೆ ವಿಶೇಷ ಆದ್ಯತೆ ನೀಡಿರುವ ಪರಿಣಾಮ ಬೇಸಿಗೆಯಲ್ಲಿ ಕೃಷಿ ಚಟುವಟಿಕೆಗೆ ನೀರಿನ ಸಮಸ್ಯೆಯಾವುವುದಿಲ್ಲ. ಪ್ರಾಣಿ-ಪಕ್ಷಿಗಳಿಗೂ ಜೀವ ಜಲ ಸಿಗಲಿದೆ. ಇವರ ಜಮೀನಿನಲ್ಲಿರುವ ಕೊಳವೆ ಬಾವಿಯಲ್ಲಿ 50-60 ಅಡಿಯಲ್ಲಿ ನೀರು ಲಭ್ಯವಿದೆ.

    ಮಿಶ್ರ ಬೇಸಾಯ: ತೋಟಗಾರಿಕೆ-ಅರಣ್ಯ ಕೃಷಿ ಜತೆಗೆ ಮೀನುಗಾರಿಕೆ, ಜೇನು ಕೃಷಿ, ಕುರಿ-ಮೇಕೆ, ಕೋಳಿ, ಹಸು ಸಾಕಣೆ ಲಾಭದಾಯಕವಾಗಿದ್ದು, ಬೇಸಾಯದ ಖರ್ಚು ವೆಚ್ಚಗಳಿಗೆ ಅನುಕೂಲವಾಗಲಿದೆ. ಕಸ-ಕಡ್ಡಿ ಕೃಷಿ ತ್ಯಾಜ್ಯವನ್ನು ಗೊಬ್ಬರವಾಗಿ ಬಳಸುವುದರಿಂದ ಉತ್ತಮ ಇಳುವರಿ ಪಡೆಯಬಹುದಾಗಿದೆ ಎನ್ನುತ್ತಾರೆ ರೈತ ಮಂಜುನಾಥ್.

    ಪ್ರಗತಿಪರ ರೈತ ರಾಕ್ ಮಂಜುನಾಥ್ ಹೇಳಿಕೆ: ಯಾರು ಪ್ರಕೃತಿ ಮಾತೆಯನ್ನು ಆರಾಧಿಸಿ, ಸಂರಕ್ಷಿಸುತ್ತಾರೋ ಅವರನ್ನು ಭೂ ತಾಯಿ ಕೈ ಬಿಡುವುದಿಲ್ಲ, ತೋಟಗಾರಿಕೆ ಜತೆ ಅರಣ್ಯ ಕೃಷಿ ಮಾಡುವುದರಿಂದ ಭೂಮಿಯ ಫಲವತ್ತತೆ ಕಾಪಾಡಿ ಕೃಷಿಯಲ್ಲಿ ನೆಮ್ಮದಿ ಬದುಕು ಕಟ್ಟಿಕೊಳ್ಳಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts