More

    ರಾಜ್ಯ ಸರ್ಕಾರದಿಂದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ

    ಹಿರೇಕೆರೂರು: ಕಡುಬಡವರಿಗೆ ಹಾಗೂ ಹಿಂದುಳಿದ ಮಕ್ಕಳಿಗೆ ಸಕಲ ಸವಲತ್ತು ನೀಡುವಲ್ಲಿ ರಾಜ್ಯ ಸರ್ಕಾರ ಮುಂಚೂಣಿಯಲ್ಲಿದ್ದು, ದೇಶದಲ್ಲಿಯೇ ಮಾದರಿಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.
    ಪಟ್ಟಣದಲ್ಲಿ 6.50 ಕೋಟಿ ರೂ. ವೆಚ್ಚದಲ್ಲಿ 100 ವಿದ್ಯಾರ್ಥಿಗಳ ಸಾಮರ್ಥ್ಯದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ ಕಟ್ಟಡದ ನಿರ್ಮಾಣ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.
    ವಿದ್ಯಾರ್ಥಿನಿಯರಿಗೆ ಪ್ರಾಥಮಿಕ ಹಂತದಿಂದ ಕಾಲೇಜಿನವರೆಗೆ ಎಲ್ಲ ಹಂತದ ಶಿಕ್ಷಣ ನೀಡಲಾಗುತ್ತಿದೆ. ಸಮವಸ್ತ್ರ, ಪಠ್ಯಪುಸ್ತಕ, ಬಿಸಿಯೂಟ, ಸೈಕಲ್, ಬಸ್ ಪಾಸ್, ಶಾಲಾ ಕೊಠಡಿಗಳು ಸೇರಿ ಅನೇಕ ಸೌಲಭ್ಯಗಳನ್ನು ನೀಡಲಾಗಿದೆ. ಶೇ. 100 ಮಕ್ಕಳಲ್ಲಿ 60ರಷ್ಟು ಮಕ್ಕಳಿಗೆ ರಾಜ್ಯ ಸರ್ಕಾರ ವಸತಿ ನಿಲಯದ ಸೌಲಭ್ಯ ನೀಡಿದೆ. ಈ ಹಿಂದೆ ಮಠಾಧೀಶರು ಅನ್ನದಾಸೋಹದ ಜತೆಗೆ ಅಕ್ಷಯ ದಾಸೋಹ ನೀಡಿದ್ದರು. ಜಾತ್ಯತೀತವಾಗಿ ಊಟ ಒದಗಿಸುತ್ತಿದ್ದರು. ಆ ಪರಂಪರೆಯನ್ನು ರಾಜ್ಯ ಸರ್ಕಾರ ಮುಂದುವರಿಸಿದೆ. ಕೆಲವೇ ದಿನಗಳಲ್ಲಿ ಹಾವೇರಿ ಸರ್ಕಾರಿ ವೈದ್ಯಕೀಯ ಕಾಲೇಜು ಲೋಕಾರ್ಪಣೆ ಮಾಡಲಾಗುವುದು. ಇದರಿಂದ ಈ ಜಿಲ್ಲೆಯ ಮಕ್ಕಳು ಎಂಬಿಬಿಎಸ್ ಕಲಿಯಲು ಅನುಕೂಲವಾಗಲಿದೆ ಎಂದರು.
    ಶಾಸಕ ಯು.ಬಿ. ಬಣಕಾರ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳು ವಿದ್ಯೆಯಿಂದ ವಂಚಿತರಾಗಬಾರದು ಎಂಬುದು ನಮ್ಮ ಉದ್ದೇಶವಾಗಿದೆ. ವಸತಿ ನಿಲಯಗಳ ಸೌಲಭ್ಯ ದೊರೆಯದೇ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ವಸತಿ ನಿಲಯಗಳ ಪರಂಪರೆ ಆರಂಭಿಸಲಾಗಿದೆ. ಕಳೆದ ಅಧಿವೇಶನದಲ್ಲಿ ರಟ್ಟಿಹಳ್ಳಿ ಹಾಗೂ ಹಿರೇಕೆರೂರು ತಾಲೂಕಿಗೆ ಹೆಚ್ಚುವರಿ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ಬೇಡಿಕೆ ಸಲ್ಲಿಸಲಾಗಿತ್ತು. ವಿದ್ಯಾರ್ಥಿ ನಿಲಯ ನಿರ್ಮಾಣ ಮಾಡಲಾಗುತ್ತಿದ್ದು, ಇದರಿಂದ ಹೆಚ್ಚಿನ ಮಕ್ಕಳಿಗೆ ಅವಕಾಶ ದೊರೆಯಲಿದೆ. ಮುಖ್ಯಮಂತ್ರಿಗಳ ನಿರ್ದೇಶನದಂತೆ ಈಗಾಗಲೇ ಹೆಚ್ಚುವರಿ ಮಕ್ಕಳಿಗೆ ಬಾಡಿಗೆ ಕಟ್ಟಡದಲ್ಲಿ ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದರು.
    ಪಪಂ ಸದಸ್ಯ ವಿಜಯಶ್ರೀ ಬಂಗೇರ, ಸುಧಾ ಚಿಂದಿ, ರಜಿಯಾ ಅಸದಿ, ಕವಿತಾ ಹಾರ‌್ನಳ್ಳಿ, ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ, ಜಿಪಂ ಸಿಇಒ ಅಕ್ಷಯ ಶ್ರೀಧರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ. ಗೋಪಾಲ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮಾ ಕೌಸರ್, ತಹಸೀಲ್ದಾರ್ ಪ್ರಭಾಕರಗೌಡ ಎಚ್., ಮಂಜುನಾಥ ತಂಬಾಕದ, ದುರ್ಗಪ್ಪ ನೀರಲಗಿ, ಪಿ.ಡಿ. ಬಸನಗೌಡ್ರ, ಶಿವರಾಜ ಹರಿಜನ, ದತ್ತಾತ್ರೇಯ ರಾಯ್ಕರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts