More

    ಹಿರೇಬಾಸೂರು ಕೆರೆ ಹೂಳು ತೆರವು ಕಾರ್ಯ ಅವೈಜ್ಞಾನಿಕ

    ಸಾಸ್ವೆಹಳ್ಳಿ: ಹೋಬಳಿಯ ಹಿರೇಬಾಸೂರು ಗ್ರಾಮದ ಕೆರೆಯಲ್ಲಿ ಅವೈಜ್ಞಾನಿಕವಾಗಿ ಹೂಳು ತೆರವು ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ನಾಲ್ಕೈದು ವರ್ಷಗಳ ಹಿಂದೆ ಗ್ರಾಮಸ್ಥರು ಆರು ಎಕರೆಗಿಂತ ಹೆಚ್ಚು ವಿಸ್ತೀರ್ಣವುಳ್ಳ ಕೆರೆ ಏರಿಗೆ ಕಲ್ಲುಗಳಿಂದ ಒಡ್ಡು ನಿರ್ಮಿಸಿ ಅಭಿವೃದ್ಧಿ ಮಾಡಿದ್ದರು. ಆದರೆ, ಗ್ರಾಮ ಪಂಚಾಯಿತಿಯವರು ಮಂಗಳವಾರ, ಬುಧವಾರ ಏಕಾಏಕಿ ನರೇಗಾ ಯೋಜನೆಯಡಿ ಕೆರೆಯ ಮಣ್ಣು ತೆಗೆದು ಅದನ್ನು ಕಲ್ಲಿನ ರಿವಿಟ್‌ಮೆಂಟ್ ಮೇಲೆ ಹಾಕಿಸುತ್ತಿದ್ದಾರೆ ಎಂದು ಗ್ರಾಮದ ಮುಖಂಡ ಜನಾರ್ದನ ಪಟೇಲ್ ದೂರಿದ್ದಾರೆ.

    ಗ್ರಾಮ ಪಂಚಾಯಿತಿಯ ಸದಸ್ಯರ ಗಮನಕ್ಕೆ ತರದೆ ಕಾಮಗಾರಿ ಕೈಗೊಳ್ಳಲಾಗಿದೆ. ಸರ್ಕಾರದ ಹಣ ಲೂಟಿ ಮಾಡುವ ಉದ್ದೇಶವಾಗಿದೆ. ಕೆರೆಯಲ್ಲಿ ಎತ್ತುವ ಮಣ್ಣನ್ನು ದೂರ ಸಾಗಿಸಬೇಕು. ಆದರೆ, ಏರಿ ಮೇಲೆ ಹಾಕಲಾಗುತ್ತಿದೆ. ಇದರ ಬದಲು ಕೆರೆಯ ಏರಿ ಸ್ವಚ್ಛತೆ, ಕೆರೆಯ ಪಕ್ಕದ ಸ್ಮಾಶಾನದ ಅಭಿವೃದ್ಧಿ, ಬಹುಮುಖ್ಯವಾಗಿ ನಮ್ಮೂರಿನ ಕೆರೆ ತುಂಬಿಸಲು ಈ ಹಣ ಬಳಸಬಹುದಿತ್ತು. ಅಧಿಕಾರಿಗಳು ಸ್ವಾರ್ಥದಿಂದ ಕಾಮಗಾರಿ ಕೈಗೆತ್ತಿಕೊಂಡಿರುವಂತೆ ಕಾಣುತ್ತಿದೆ ಎಂದು ಗ್ರಾಮದ ಮುಖಂಡ ನರಸಿಂಹಪ್ಪ ಆಕ್ಷೇಪಿಸಿದ್ದಾರೆ.

    ಹಿರೇಬಾಸೂರು ಗ್ರಾಮದ ತಾರಕೇಶ್ವರ, ಸಂಪತ್‌ಕುಮಾರ್, ಲಿಂಗರಾಜಯ್ಯ, ಎಚ್.ಎಂ. ಹನುಮಂತಪ್ಪ, ಎಂ.ಜಿ. ಹನುಮಂತಪ್ಪ, ಬಿ.ಜಿ. ಲಿಂಗರಾಜ್, ಎಂ.ಎಚ್. ಹನುಮಂತಪ್ಪ, ಗೋಪಾಲ್ ಇತರರಿದ್ದರು.

    ಕೆರೆಯ ಅಭಿವೃದ್ಧಿಗೆ ನರೇಗಾ ಯೋಜನೆಯಡಿ 19 ಲಕ್ಷ ರೂ. ಮಂಜೂರಾಗಿದೆ. 16 ಜನರುಳ್ಳ ತಂಡದಿಂದ ಹೂಳು ತೆಗೆಸಲಾಗುತ್ತಿದೆ. ಕ್ರಿಯಾ ಯೋಜನೆ ಪ್ರಕಾರ ಈ ಮಣ್ಣನ್ನು ಸರ್ಕಾರಿ ಜಾಗ, ಜಮೀನು, ಕೆರೆಯ ಏರಿ ಮೇಲೆ ಅಥವಾ ಕೆರೆಯಿಂದ 15 ಅಡಿ ದೂರದಲ್ಲಿ ಹಾಕಿಸಬೇಕು. ಮಳೆ ಬಂದ ಪರಿಣಾಮ ಕೆರೆಗೆ ವಾಹನಗಳು ಇಳಿಯದ ಕಾರಣ ಮಣ್ಣನ್ನು ಏರಿಗೆ ಹಾಕಿಸಲಾಗುತ್ತಿದೆ. ಗ್ರಾಮಸ್ಥರು ಮುಂದಿನ ದಿನಗಳಲ್ಲಿ ಬೇಡ ಎಂದರೆ ಹೊರ ಸಾಗಿಸಲಾಗುವುದು.
    l ಮಂಜುಳಾ, ಪಿಡಿಒ, ಬೀರಗೊಂಡನಹಳ್ಳಿ ಗ್ರಾಪಂ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts