More

    ಪ್ರದರ್ಶನ ಕಲೆಗಳು ಆತ್ಮ ಸಾಕ್ಷಾತ್ಕಾರಕ್ಕೆ ಪೂರಕ ; ಪಂಡಿತ್ ಮುದ್ದುಮೋಹನ್ ಅಭಿಮತ

    ಬೆಂಗಳೂರು: ಯಾವುದೇ ಪ್ರದರ್ಶನಗಳು ಪ್ರೇಕ್ಷಕರಿಗೆ ಆನಂದವನ್ನು ಕೊಡುವುದರ ಜೊತೆಗೆ ಕಲಾವಿದನ ಆತ್ಮ ಸಾಕ್ಷಾತ್ಕಾರಕ್ಕೂ ಪೂರಕವಾಗಿರುತ್ತವೆ ಎಂದು ಹಿಂದೂಸ್ತಾನಿ ಗಾಯಕ ಪಂಡಿತ್ ಮುದ್ದುಮೋಹನ್ ಅಭಿಪ್ರಾಯಿಸಿದ್ದಾರೆ. ಜಯನಗರದ ಜೆಎಸ್‌ಎಸ್ ಸಭಾಂಗಣದಲ್ಲಿ ಶ್ರೀಗುರು ಸಮರ್ಥ ಸಂಗೀತ ವಿದ್ಯಾಲಯವು ಹಮ್ಮಿಕೊಂಡಿದ್ದ ಹಿಂದೂಸ್ತಾನಿ ಸಂಗೀತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಕಲಾ ಪ್ರಕಾರಗಳಲ್ಲಿಯೇ ಸಂಗೀತ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಸಂಗೀತವು ಹೇಳುವ, ಕೇಳುವ, ನೋಡುವ ಎಲ್ಲರಿಗೂ ಏಕಕಾಲದಲ್ಲಿ ಆನಂದವನ್ನು ನೀಡುತ್ತದೆ. ಪ್ರೇಕ್ಷಕರಿಗೆ ಆನಂದ ನೀಡಿದರೆ; ಕಲಾವಿದನಿಗೆ ಆತ್ಮಸಾಕ್ಷಾತ್ಕಾರ ಮೂಡಿಸುತ್ತದೆ. ಸಂಗೀತಕ್ಕೆ ಬೇರೆಲ್ಲ ಕಲೆಗಳಿಗಿಂತ ಬೇಗ ಇತರರನ್ನು ಸೆಳೆಯುವ ಶಕ್ತಿ ಇದೆ. ಇಂತಹ ಸಂಗೀತದ ಸೇವೆ ಮಾಡುತ್ತಿರುವ ಶ್ರೀಗುರು ಸಮರ್ಥ ಸಂಗೀತ ವಿದ್ಯಾಲಯದ ಸೇವೆ ಅನನ್ಯವಾಗಿದೆ ಎಂದರು.

    ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಂತರಾಷ್ಟ್ರೀಯ ತಬಲಾ ವಾದಕ ಸತೀಶ್ ಹಂಪಿಹೊಳಿಯವರು ಹಿರಿಯ ಕವಿ ಚನ್ನವೀರ ಕಣವಿ ಮತ್ತು ಡಾ.ಲಕ್ಷ್ಮೀನಾರಾಯಣ ಭಟ್ಟರ ಕವನದ ಸಾಲುಗಳನ್ನು ಹೇಳಿ ಗಮನ ಸೆಳೆದರು.

    ಸಮಾರಂಭದಲ್ಲಿ ಹಿರಿಯ ಕಲಾವಿದ ರವಿ ಕೋಣನತಂಬಿಗೆಯವರನ್ನು ಸನ್ಮಾನಿಸಲಾಯಿತು. ನಾಗೇಂದ್ರ ರಾಣಾಪುರ, ಉಮಾ ಕುಲಕರ್ಣಿ, ಅನನ್ಯ ಅಯೋಧ್ಯ, ವೆಂಕಟ ನಿತಿನ್ ರವರುಗಳು ಹಿಂದೂಸ್ತಾನಿ ಸಂಗೀತ ಗಾಯನವನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಗಿರಿಧರ ಭಂಡಿವಾಡ್, ಹರೀಶ್ಚಂದ್ರ ಕುಳೂರ್, ಟಿವಿ ನಿರೂಪಕ ಹರೀಶ್ ನಾಗರಾಜ, ಸಂಸ್ಥೆಯ ಅಧ್ಯಕ್ಷರಾದ ಅಮೃತೇಶ್ ಕುಲಕರ್ಣಿ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts