More

    ಪೊಳಲಿ ದ್ವಾರದ ಬಳಿ ಗುಡ್ಡ ಕುಸಿತ

    ಗುರುಪುರ: ಸತತ ಸುರಿಯುತ್ತಿರುವ ಧಾರಾಕಾರ ಮಳೆಗೆ ಗುರುಪುರ, ಕಂದಾವರ, ಗಂಜಿಮಠ, ಎಡಪದವು ಮತ್ತು ಕುಪ್ಪೆಪದವು ಪಂಚಾಯಿತಿ ವ್ಯಾಪ್ತಿಯ ಹಲವೆಡೆ ಮರಗಳು ರಸ್ತೆ ಹಾಗೂ ವಿದ್ಯುತ್ ಕಂಬಗಳ ಮೇಲೆ ಬಿದ್ದಿದ್ದರೆ, ಗುಡ್ಡ ಕುಸಿತ, ಹೆದ್ದಾರಿಯಲ್ಲಿ ಕೃತಕ ನೆರೆಯಿಂದ ಸಾರ್ವಜನಿಕರು ಮತ್ತು ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.

    ಗುರುಪುರ ಪೊಳಲಿ ದ್ವಾರದ ಬಳಿ ಬಿ.ಸಿ.ರೋಡ್ ರಾಜ್ಯ ಹೆದ್ದಾರಿಯ ಒಂದು ಬದಿ ಗುಡ್ಡ ಕುಸಿದು, ವಾಹನ ಸಂಚಾರಕ್ಕೆ ಅಡಚಣೆಯಾಯಿತು. ರಾಷ್ಟ್ರೀಯ ಹೆದ್ದಾರಿ(169) ವಿಸ್ತರಣಾ ಕಾಮಗಾರಿ ಗುತ್ತಿಗೆಯ ‘ಡಿಬಿಎಲ್’ ಕಂಪನಿ ಕಾರ್ಮಿಕರು ಇಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಜೆಸಿಬಿ ಮೂಲಕ ತೋಡು ನಿರ್ಮಿಸಿದ್ದಾರೆ. ವಿಪರೀತ ಮಳೆಯಾದರೆ ರಸ್ತೆ ಸಂಪರ್ಕವೇ ಕಡಿಯುವ ಸಾಧ್ಯತೆ ಇದೆ. ಹೆದ್ದಾರಿ ವಿಸ್ತರಣೆ ಕಾಮಗಾರಿ ವೇಳೆ ಕೈಕಂಬ- ಪೊಳಲಿ ದ್ವಾರದವರೆಗೆ ಸರಾಗವಾಗಿ ಮಳೆ ನೀರು ಹರಿಯುತ್ತಿದ್ದ ತೋಡು ಬಂದ್ ಮಾಡಿದ್ದರಿಂದ ಕೈಕಂಬದ ವಿಕಾಸನಗರದಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ ಮತ್ತು ಪೊಳಲಿ ದ್ವಾರದ ಬಳಿ ಕಾಜಿಲ ರಸ್ತೆ ಕುಸಿದಿದೆ.

    ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಗಳು ಮತ್ತು ಹೆದ್ದಾರಿ ವಿಸ್ತರಣೆ ನಡೆಯುತ್ತಿರುವ ಬಹುತೇಕ ಎಲ್ಲ ಕಡೆ ರಸ್ತೆ ಮೇಲೆಯೇ ಗುಡ್ಡದ ಕೆಸರು ನೀರು ಹರಿಯಲಾರಂಭಿಸಿದೆ. ರಸ್ತೆ ತೋಡಿನಂತಾಗಿ ವಾಹನ ಸವಾರರು ಪರದಾಡುವಂತಾಗಿದೆ. ರಸ್ತೆಯ ಮೇಲೆ ಬಿದ್ದಿರುವ ಮರಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ.

    ಹೆದ್ದಾರಿ ಬಿರುಕು

    ಕಳೆದ ವರ್ಷ ಮಳೆಗಾಲಕ್ಕೆ ಗುರುಪುರಕ್ಕೆ ಹತ್ತಿರ ಅಣೆಬಳಿಯಲ್ಲಿ ಹೆದ್ದಾರಿ(169) ಬಿರುಕು ಬಿಟ್ಟಿದ್ದ ಜಾಗದಲ್ಲೇ ಮತ್ತೆ ಬಿರುಕು ಕಾಣಿಸಿಕೊಂಡಿದೆ. ಈ ಭಾಗದಲ್ಲಿ ಹೆದ್ದಾರಿ ಕುಸಿತ ಸಾಧ್ಯತೆ ಹೆಚ್ಚಿದೆ. ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಾಗುವಂತಾಗಿದೆ. ಹೆದ್ದಾರಿಯ ಒಂದು ಮಗ್ಗುಲಲ್ಲಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಎಚ್ಚರಿಕೆ ಕ್ರಮವಾಗಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಗುರುಪುರ ಕೈಕಂಬದಲ್ಲಿ ಮರದ ಗೆಲ್ಲೊಂದು ವಿದ್ಯುತ್ ಕಂಬದ ಮೇಲೆ ಬಿದ್ದು, ಒಂದೆರಡು ವಿದ್ಯುತ್ ಕಂಬಗಳು ಮುರಿದಿದ್ದರೆ, ಕುಪ್ಪೆಪದವು ಮತ್ತು ಕಂದಾವರ ಪಂಚಾಯಿತಿ ವ್ಯಾಪ್ತಿಯ ಕೌಡೂರು ಬಳಿ ಮರ ಬಿದ್ದು ವಿದ್ಯುತ್ ಕಂಬಗಳು ತುಂಡಾಗಿವೆ.

    ವಸತಿ ಬಡಾವಣೆ ಜಲಾವೃತ

    ಗುರುವಾರ ಬೆಳಗ್ಗೆ ಸುರಿದ ಗಾಳಿ ಮಳೆಗೆ ವಿಕಾಸನಗರ ವಸತಿ ಬಡಾವಣೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಕೃತಕ ನೆರೆ ಆವರಿಸಿರುವ ಇಲ್ಲಿನ ಖಾಸಗಿ ನರ್ಸರಿಯೊಂದರ ಮೇಲೆ ಮರವೊಂದು ಬಿದ್ದು ನಷ್ಟ ಸಂಭವಿಸಿದೆ. ಗುರುಪುರದ ಪರಂಬೋಕು ಬಾದಲ್ ತೋಡು ಕುಸಿಯಲಾರಂಭಿದ್ದು, ತೋಡಿನ ಪಕ್ಕ ಮನೆಗಳಿಗೆ ಅಪಾಯ ಎದುರಾಗಿದೆ. ಗಂಜಿಮಠ, ಕುಪ್ಪೆಪದವು ಪಂಚಾಯಿತಿ ವ್ಯಾಪ್ತಿಯ ಒಂದೆರಡು ಕಡೆ ಗುಡ್ಡ ಕುಸಿದಿದೆ. ಪೊಳಲಿ ದ್ವಾರದ ಬಳಿ ರಸ್ತೆ ತೋಡಿನಂತಾಗಿ ಎಲ್ಲೆಡೆ ಜಲಾವೃತಗೊಂಡಿದೆ. ಗುರುಪುರ ಫಲ್ಗುಣಿ ನದಿಯಲ್ಲಿ ನೀರಿನ ಮಟ್ಟ ಮತ್ತಷ್ಟು ಹೆಚ್ಚಿದ್ದು, ತಗ್ಗುಪ್ರದೇಶಗಳಲ್ಲಿ ಪ್ರವಾಹ ಕಾಣಿಸಿಕೊಂಡಿದೆ. ಗುರುಪುರ ಮತ್ತು ಗಂಜಿಮಠ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಮಳೆಯಿಂದ ತೊಂದರೆಗೀಡಾದ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts