More

    ಕರಾವಳಿಯಲ್ಲಿ ಭಾರಿ ಮಳೆಗೆ ಮೂವರು ಬಲಿ

    ಮಂಗಳೂರು: ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ಬುಧವಾರ ಭಾರಿ ಮಳೆಯಾಗಿದ್ದು, ಮೂವರು ಮೃತಪಟ್ಟಿದ್ದಾರೆ.

    ಕುಳಾಯಿಯಲ್ಲಿ ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ, ಮೂಲತಃ ಕುಷ್ಟಗಿ ನಿವಾಸಿ ಕುಳಾಯಿಯಲ್ಲಿ ವಾಸವಾಗಿದ್ದ ಸಂತೋಷ್(31) ಮೃತಪಟ್ಟಿದ್ದಾರೆ. ಕುಂದಾಪುರದಲ್ಲಿ ಸ್ಕೂಟರ್ ಸಮೇತ ಕೆರೆಗೆ ಬಿದ್ದು ತೆಕ್ಕಟ್ಟೆ ಸಮೀಪದ ಮಲ್ಯಾಡಿ ನಿವಾಸಿ ದಿವಾಕರ ಶೆಟ್ಟಿ(65) ಮೃತಪಟ್ಟಿದ್ದಾರೆ. ಸಿದ್ದಾಪುರದಲ್ಲಿ ಕಾಲುಸಂಕ ದಾಟುತ್ತಿದ್ದಾಗ ಆಯತಪ್ಪಿ ಕುಬ್ಜಾ ನದಿಗೆ ಬಿದ್ದು ಯಡಮೊಗೆ ಗ್ರಾಮ ನಿವಾಸಿ ಶೇಷಾದ್ರಿ ಐತಾಳ್(73) ಎಂಬುವವರು ಅಸುನೀಗಿದ್ದಾರೆ.

    ಕೆಲವು ಕಡೆ ತಗ್ಗು ಪ್ರದೇಶಗಳು ಜಲಾವೃತಗೊಂಡು, ಮನೆಗಳಿಗೂ ನೀರು ನುಗ್ಗಿದೆ. ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ಜಾಹೀರಾತು ಫಲಕ ಬಿದ್ದು 15 ವಾಹನಗಳು ಜಖಂಗೊಂಡಿವೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಮರ ಬಿದ್ದು, ಪಾರ್ಕ್ ಮಾಡಲಾಗಿದ್ದ ಕಾರುಗಳು ಜಖಂಗೊಂಡಿವೆ. ಉಳ್ಳಾಲದಲ್ಲಿ ಕೃತಕ ನೆರೆ ನಡುವೆಯೂ ಸಾಗಿದ ಮೆಸ್ಕಾಂ ಪವರ್‌ಮನ್‌ಗಳು 40 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ. ಸೋಮೇಶ್ವರದಲ್ಲಿ ಮರ ಬಿದ್ದು ನಾಲ್ಕು ಮನೆಗಳಿಗೆ ಹಾನಿಯಾಗಿದ್ದು, ಉಳ್ಳಾಲ ಬೀಚ್‌ನಲ್ಲಿದ್ದ ಚರುಮುರಿ ಅಂಗಡಿಗಳು ಸಮುದ್ರ ಪಾಲಾಗಿವೆ. ಹರೇಕಳ ಅಡ್ಯಾರ್ ಸೇತುವೆ ಕೆಳಭಾಗ ಮೀನುಗಾರಿಕೆ ನಡೆಸುತ್ತಿದ್ದ ಯುವಕನೊಬ್ಬನನ್ನು ಸ್ಥಳೀಯರು ರಕ್ಷಿಸಿದ್ದಾರೆ. ದೋಣಿ ನೀರುಪಾಲಾಗಿದೆ. ಉಡುಪಿ ಜಿಲ್ಲೆಯಲ್ಲಿ ನಿರಂತರ ಪರಿಣಾಮ ನದಿಗಳಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ. ಮಂಚಿಕೋಡಿ ಎಂಬಲ್ಲಿ 8 ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಕಟಪಾಡಿ ಉದ್ಯಾವರ ಸಂಪಿಗೆ ನಗರದಲ್ಲಿ ಮನೆಗೆ ನುಗ್ಗಿದ ನೆರೆ ನೀರು ನುಗ್ಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts