More

    ಹಬ್ಬಕ್ಕೆ ಹೂವು ದುಬಾರಿ, ತರಕಾರಿ, ಹಣ್ಣು ಧಾರಣೆ ಸ್ಥಿರ

    ಮಂಗಳೂರು: ಹಬ್ಬಗಳ ಋತು ಆರಂಭವಾಗುತ್ತಿದ್ದು ಹಣ್ಣ, ತರಕಾರಿ, ಹೂವಿನ ಬೆಲೆಗಳಲ್ಲಿ ಏರಿಕೆ ಆರಂಭವಾಗಿದೆ.
    ಪ್ರಸ್ತುತ ನವರಾತ್ರಿ ಹಿನ್ನೆಲೆಯಲ್ಲಿ ಬಹುತೇಕ ಮಂದಿ ಸಸ್ಯಾಹಾರಕ್ಕೆ ಮೊರೆ ಹೋಗಿದ್ದು, ಮಾರುಕಟ್ಟೆಯಲ್ಲಿ ಹಣ್ಣು, ತರಕಾರಿಗೆ ಬೇಡಿಕೆ ಹೆಚ್ಚಾಗಿದೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಪೂರೈಕೆ ಆಗುತ್ತಿರುವುದರಿಂದ ದರದಲ್ಲಿ ಏರಿಕೆ ಕಂಡುಬಂದಿಲ್ಲ. ಆದರೆ ಹೂವು ನವರಾತ್ರಿ ಆರಂಭವಾಗುತ್ತಲೇ ಸ್ವಲ್ಪ ದುಬಾರಿಯಾಗಿದೆ.

    ತರಕಾರಿಗಳ ಪೈಕಿ ವಾರದ ಹಿಂದೆ ಕೆ.ಜಿಗೆ 8-10 ರೂ.ನಲ್ಲಿ ಮಾರಾಟವಾಗುತ್ತಿದ್ದ ಕ್ಯಾಬೇಜ್ ದರ 50 ರೂ.ಆಗಿದೆ. 40 ರೂ.ಇದ್ದ ಕ್ಯಾರೆಟ್ ದರ 80 ರೂ.ಗೆ ಏರಿದ್ದು ಹೊರತುಪಡಿಸಿದರೆ ಮಾರುಕಟ್ಟೆಯಲ್ಲಿ ತರಕಾರಿ ದರ ಯಥಾಸ್ಥಿತಿಯಲ್ಲಿದೆ. ಉತ್ತರ ಕರ್ನಾಟಕದಲ್ಲಿ ಮಳೆ ಸುರಿಯುತ್ತಿದ್ದರೂ, ಈಗಾಗಲೇ ಎಪಿಎಂಸಿಗಳಿಗೆ ಒಂದು ಹಂತದ ತರಕಾರಿಗಳು ಬಂದಿರುವುದು ದರ ಹೆಚ್ಚದಿರಲು ಕಾರಣ.

    ಆದರೆ ಮುಂದಿನ ದಿನಗಳಲ್ಲಿ ಏರಿಕೆ ಸಾಧ್ಯತೆಯಿದೆ ಎನ್ನುತ್ತಾರೆ ತರಕಾರಿ ವರ್ತಕ ಅಶ್ಫಕ್. ಹಣ್ಣುಗಳ ದರದಲ್ಲಿಯೂ ಹೆಚ್ಚಿನ ಏರಿಕೆ ಕಂಡು ಬಂದಿಲ್ಲ. ಹಿಂದಿನ ದರದಲ್ಲಿಯೇ ಮಾರಾಟ ಮಾಡುತ್ತಿದ್ದೇವೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಬೇಡಿಕೆ ಕಡಿಮೆ ಎನ್ನುವುದು ಹಣ್ಣು ವ್ಯಾಪಾರಿ ಸಲಾಂ ಮರ್ಚಿರೆಂಟ್ ಅವರ ಮಾತು.

    ಬೆರಳೆಣಿಕೆಯಷ್ಟೇ ಹೂವು ವ್ಯಾಪಾರಿಗಳು!
    ಒಂದು ಮಾರು ಸೇವಂತಿಗೆ 70 ರೂ. ಕಾಕಡ 100 ರೂ., ಜೀನ್ಯ 80 ರೂ. ಗೊಂಡೆ ಹೂವು 80, ಕುಚ್ಚಿಗೆ 150ರಿಂದ 500 ರೂ. ವರೆಗೆ ದರವಿದೆ. ನಗರಕ್ಕೆ ಹಾವೇರಿ, ಮೈಸೂರು, ಕುಣಿಗಲ್, ಹಾಸನ ಭಾಗದಿಂದ ಹೂವುಗಳು ಬರುತ್ತವೆ. ಬಯಲು ಸೀಮೆ ಭಾಗದಲ್ಲಿ ಮಳೆ, ಪ್ರವಾಹದಿಂದಾಗಿ ಹೂವಿನ ಬೆಳೆ ಹಾನಿ ಪ್ರಮಾಣ ಹೆಚ್ಚಾಗಿದ್ದು, ಬರುವ ಹೂವುಗಳು ಮಾರಾಟ ಯೋಗ್ಯವಾಗಿರುವುದಿಲ್ಲ. ಪ್ರಸ್ತುತ ನವರಾತ್ರಿ ಆರಂಭದಲ್ಲೇ ಬೆಲೆ ಹೆಚ್ಚಾಗಿದ್ದು, ಆಯುಧಪೂಜೆ, ವಿಜಯದಶಮಿ ವೇಳೆಗೆ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗಬಹುದು. ಹೊರಜಿಲ್ಲೆಗಳಿಂದ ಬೆರಳೆಣಿಕೆಯ ಹೂವಿನ ವ್ಯಾಪಾರಿಗಳು ನಗರಕ್ಕೆ ಬಂದಿದ್ದು, ಇನ್ನೆರಡು ದಿನದಲ್ಲಿ ಸಂಖ್ಯೆ ಹೆಚ್ಚಳವಾಗಬಹುದು.

    ತರಕಾರಿ-ಹಣ್ಣು ಬೆಲೆ ಹೀಗಿದೆ: ಮಂಗಳೂರು ಮಾರುಕಟ್ಟೆಯಲ್ಲಿ ಸೌತೆಕಾಯಿ ಕೆ.ಜಿಗೆ 20 ರೂ, ಬೆಂಡೆಕಾಯಿ 40 ರೂ, ಹೀರೆಕಾಯಿ 50 ರೂ, ತೊಂಡೆ ಕಾಯಿ (ಘಟ್ಟ) 36 ರೂ, ಬೀಟ್‌ರೂಟ್ 44 ರೂ, ಹಾಗಲಕಾಯಿ 45 ರೂ, ಕ್ಯಾಪ್ಸಿಕಮ್ 60 ರೂ, ಬೀನ್ಸ್ 50 ರೂ. ಉಳಿದಂತೆ ಶುಂಠಿ, ಕಾಯಿಮೆಣಸು, ಕೊತ್ತಂಬರಿ ಸೊಪ್ಪು 40 ರೂ. ಹಣ್ಣುಗಳ ಪೈಕಿ ಆ್ಯಪಲ್ ಕೆ.ಜಿಗೆ 120 ರೂ, ಕಿತ್ತಳೆ 70 ರೂ, ಚಿಕ್ಕು 80 ರೂ, ಪೇರಳೆ 120 ರೂ, ದ್ರಾಕ್ಷಿ(ಹಸಿರು) 90 ರೂ, ದ್ರಾಕ್ಷಿ (ಕಪ್ಪು) 80 ರೂ, ಲಕ್ಷ್ಮಣ ಫಲ 250 ರೂ, ಗೋಲ್ಡನ್ ಸೀತಾಫಲ 250 ರೂ, ದಾಳಿಂಬೆ 100 ರೂ.ವರೆಗೆ ಇದೆ.

    ಉಡುಪಿಯಲ್ಲಿ ತರಕಾರಿ ರೇಟ್ ಹೆಚ್ಚಳ
    ಉಡುಪಿ: ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದ ವಿವಿಧೆಡೆ ಮಳೆಯಾಗುತ್ತಿರುವ ಕಾರಣ ಉಡುಪಿ ಜಿಲ್ಲೆಗೆ ಟೊಮೆಟೊ, ಈರುಳ್ಳಿ ಹಾಗೂ ಬಟಾಟೆ ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ಹೀಗಾಗಿ ಈ ಮೂರು ತರಕಾರಿಗಳ ದರ ಗಗನಕ್ಕೇರಿದೆ. ನವರಾತ್ರಿ ಆರಂಭದಲ್ಲಿ ಕೆ.ಜಿ.ಗೆ 28 ರೂ ಇದ್ದ ಟೊಮೆಟೊ ದರ ನಲವತ್ತಕ್ಕೆ ಏರಿಕೆದೆ. ಈರುಳ್ಳಿ 60ರಿಂದ 95ಕ್ಕೆ ಮಾರಾಟವಾಗುತ್ತಿದೆ. ಬಟಾಟೆ 40ರಿಂದ 50 ರೂ.ಗೆ ಏರಿದೆ ಎನ್ನುತ್ತಾರೆ ಕಾಪು ತರಕಾರಿ ವ್ಯಾಪಾರಸ್ಥ ಕೆ.ಬ್ರಹ್ಮಾನಂದ ಭಟ್. ಬೆಂಡೆ 60, ಅಲಸಂಡೆ 70, ಕ್ಯಾರೆಟ್ 90, ಬೀನ್ಸ್ 80, ಸೌತೆ 60, ಬದನೆ 40 ಸುವರ್ಣಗೆಡ್ಡೆ 40 ರೂ.ಇದೆ. ಸೇಬು 110ರಿಂದ 120, ಕಿತ್ತಳೆ 40ರಿಂದ 50. ಮೂಸಂಬಿ 50ರಿಂದ 60, ದ್ರಾಕ್ಷಿ 70ರಿಂದ 80, ಚಿಕ್ಕು 45ರಿಂದ 60, ದಾಳಿಂಬೆ 100ರಿಂದ 120 ಹಾಗೂ ಬಾಳೆಹಣ್ಣು 65ರಿಂದ 70 ರೂ.ದರವಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts