More

    ಹಿಜಾಬ್ ಧರಿಸಿದರೆ ತರಗತಿಗೆ ನೋ ಎಂಟ್ರಿ, ಶಾಸಕ ರಘುಪತಿ ಭಟ್ ಪುನರುಚ್ಚಾರ

    ಉಡುಪಿ: ಸರ್ಕಾರದ ಆದೇಶದಂತೆ ಉನ್ನತ ಮಟ್ಟದ ಸಮಿತಿ ವರದಿ ಬರುವವರೆಗೆ, ಉಡುಪಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿಯರು ಹಿಜಾಬ್ ಧರಿಸದೆ ತರಗತಿಗೆ ಹಾಜರಾಗಬೇಕು. ಹಿಜಾಬ್ ಧರಿಸಿ ಬಂದರೆ ತರಗತಿಗೆ ಪ್ರವೇಶವಿಲ್ಲ. ಇದನ್ನು ಧಿಕ್ಕರಿಸಿ ತರಗತಿಗೆ ಪ್ರವೇಶ ಮಾಡಿದ್ದರೆ ಅಶಿಸ್ತು ಎಂಬುದಾಗಿ ಪರಿಗಣಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಕೆ. ರಘುಪತಿ ಭಟ್ ಹೇಳಿದರು.

    ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆ, ಕಾಲೇಜುಗಳಲ್ಲಿ ಸಮವಸ್ತ್ರ ಸಂಹಿತೆ ಬಗ್ಗೆ ಸರ್ಕಾರ ಉನ್ನತ ಮಟ್ಟದ ಸಮಿತಿ ರಚಿಸಿ ಅಧ್ಯಯನ ನಡೆಸಿ ವರದಿ ನೀಡಲಿದೆ. ಅಲ್ಲಿಯವರೆಗೆ ಪ್ರಸ್ತುತ ಕಾಲೇಜು ಪ್ರವೇಶಾತಿ ಸಂದರ್ಭದಲ್ಲಿ ವಿಧಿಸಿರುವ ನಿಯಮದಂತೆ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ತರಗತಿಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಹಾಗೂ ಶೈಕ್ಷಣಿಕ ಸಂಸ್ಥೆಯಲ್ಲಿ ಸೌಹಾರ್ದತೆ ಮತ್ತು ಸಮನ್ವಯತೆ ಸಾಧಿಸಲು ಮಕ್ಕಳಿಗೆ ತಿಳಿಹೇಳುವಂತೆ ಪಾಲಕರಿಗೆ ತಿಳಿಸಲಾಗಿದೆ. ಅವರು ನಾಳೆ ಭಿಪ್ರಾಯ ತಿಳಿಸುವ ನಿರೀಕ್ಷೆ ಇದೆ ಎಂದರು.

    ಪ್ರತಿದಿನ ದೇಶ, ವಿದೇಶಗಳ ಮಾಧ್ಯಮಗಳು, ಸಂಘಟನೆ ಪದಾಧಿಕಾರಿಗಳು ಕಾಲೇಜಿನೊಳಗೆ ಆಗಮಿಸುತ್ತಿರುವುದರಿಂದ ಉಳಿದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ ಕಾಲೇಜು ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಿಬ್ಬಂದಿ ಹೊರತುಪಡಿಸಿ ಬೇರೆ ಯಾರೂ ಕಾಲೇಜು ಆವರಣ ಪ್ರವೇಶಿಸುವಂತಿಲ್ಲ. ಅದನ್ನು ಮೀರಿ ಯಾರಾದರು ಪ್ರವೇಶಿಸಿದರೆ ಕ್ರಮ ಕೈಗೊಳ್ಳುವಂತೆ ಪೊಲೀಸರು ಹಾಗೂ ಕಾಲೇಜಿನ ಪ್ರಾಂಶುಪಾಲರಿಗೆ ಸೂಚನೆ ನೀಡಲಾಗಿದೆ ಎಂದರು.

    ಕಾಲೇಜು ಅಭಿವೃದ್ಧಿ ಸಮಿತಿ ಸಭೆ
    ಉಡುಪಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ 6 ವಿದ್ಯಾರ್ಥಿನಿಯರು ಹಿಜಾಬ್ ಧರಿಸುವ ಬಗೆಗಿನ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿರುವ ಆದೇಶದ ಪ್ರಯುಕ್ತ ಸೋಮವಾರ ಕಾಲೇಜು ಅಭಿವೃದ್ಧಿ ಸಮಿತಿ ಮತ್ತು ಪೋಷಕರನ್ನು ಒಳಗೊಂಡ ಶಿಕ್ಷಣ ಸೇವಾ ಸಮಿತಿ ಸಭೆ ನಡೆಯಿತು. ಶಾಸಕ ಕೆ. ರಘುಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಯಶ್‌ಪಾಲ್ ಸುವರ್ಣ, ಕರ್ನಾಟಕ ಬ್ಯಾರಿ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ, ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ದಾವೂದ್ ಅಬೂಬಕ್ಕರ್, ರಾಜ್ಯ ಅಲ್ಪಸಂಖ್ಯಾತ ಮೋರ್ಚಾದ ಕಾರ್ಯದರ್ಶಿ ಸಲೀಂ ಅಂಬಾಗಿಲು ಹಾಗೂ ಕಾಲೇಜಿನ ಉಪನ್ಯಾಸಕರು, 6 ವಿದ್ಯಾರ್ಥಿಗಳ ಪೈಕಿ 4 ವಿದ್ಯಾರ್ಥಿಗಳು ಹಾಗೂ ಅವರ ಪಾಲಕರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts