More

    ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ

    ಚಿಕ್ಕೋಡಿ: ಭೂ ಸುಧಾರಣಾ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆ ರದ್ದು ಪಡಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಶುಕ್ರವಾರ ಬಸವ ವೃತ್ತದಲ್ಲಿ ರಾಜ್ಯ ಹೆದ್ದಾರಿ ಸಂಚಾರ ತಡೆದು ಪ್ರತಿಭಟಿಸಲಾಯಿತು.

    ರೈತರಿಗೆ ಮಾರಕವಾಗಿರುವ ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ಜಾರಿಗೆ ತರುವ ಮೂಲಕ ರಾಜ್ಯ ಸರ್ಕಾರ ರೈತರ ಮೇಲೆ ಗದಪ್ರಹಾರ ಮಾಡುತ್ತಿದೆ. ಕಾಯ್ದೆ ಜಾರಿಗೊಳಿಸುವುದರಿಂದ ಉದ್ದಿಮೆದಾರರಿಗೆ, ಬಂಡವಾಳ ಶಾಹಿಗಳಿಗೆ ಅನುಕೂಲವಾಗಲಿದೆ. ಇದರಿಂದಾಗಿ ರೈತರು ಬೀದಿ ಪಾಲಾಗುತ್ತಾರೆ. ಕೂಡಲೇ ಸರ್ಕಾರ ಈ ಕಾಯ್ದೆ ಹಿಂಪಡೆಯಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

    ಕಾವೇರಿಗೆ ಕೊಟ್ಟ ಪ್ರಾಧ್ಯಾನತೆ ಕೃಷ್ಣಾ ನದಿಗೆ ನೀಡುತ್ತಿಲ್ಲ. ರಾಜ್ಯ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರೈತರ ಬಗ್ಗೆ ಮಾತನಾಡಲು ಕೃಷಿ ಸಚಿವ ಬಿ.ಸಿ. ಪಾಟೀಲ ಅವರಿಗೆ ನೈತಿಕ ಹಕ್ಕಿಲ್ಲ. ಅನೈತಿಕ ಮಾರ್ಗದಿಂದ ಸಚಿವರಾಗಿರುವ ಅವರಿಗೆ, ಅನ್ನದಾತನ ಕಷ್ಟ ಅರಿವಾಗುತ್ತಿಲ್ಲ. ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

    ಕರಗಾಂವ ಹಾಗೂ ಮಹಾಲಕ್ಷ್ಮೀ ಸೇರಿ ಜಿಲ್ಲೆಯಲ್ಲಿ ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಕೂಡಲೇ ಜಾರಿಗೆ ತರಬೇಕು. ಚಿಕ್ಕೋಡಿ ಜಿಲ್ಲೆಯನ್ನು ರಚಿಸಬೇಕು ಎಂದು ಆಗ್ರಹಿಸಿದರು. ಬಳಿಕ ಪ್ರತಿಭಟನಾಕಾರರು ತಹಸೀಲ್ದಾರ್ ಸುಭಾಷ ಸಂಪಗಾಂವಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

    ರಾಜ್ಯ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದ್ದರಿಂದ ಒಂದು ಗಂಟೆ ಕಾಲ ವಾಹನ ಸವಾರರಿಗೆ ತೊಂದರೆಯಾಯಿತು. ತ್ಯಾಗರಾಜ ಕದಮ್, ಕೆಆರ್‌ಡಿಸಿಎಲ್ ಮಾಜಿ ಉಪಾಧ್ಯಕ್ಷ ಮಹಾವೀರ ಮೋಹಿತೆ, ದಲಿತ ಸಂಘರ್ಷ ಸಮಿತಿ ಮುಖಂಡ ಬಸವರಾಜ ಢಾಕೆ, ಮಾದೇವ ಮಡಿವಾಳರ, ಪರಗೌಡ ಪಾಟೀಲ, ಸುಜಾತ ಕಾಂಬಳೆ, ಸುದರ್ಶನ ತಮ್ಮನ್ನವರ, ರಂಗನಾಥ ಪಾಂಡ್ರಿ, ಸಂಜು ಬಡಿಗೇರ, ನಾಗೇಶ ಮಾಳಿ, ಚಂದ್ರಕಾಂತ ಹುಕ್ಕೇರಿ, ಅಪ್ಪಾಸಾಬ ಕುರಣಿ, ರಮೇಶ ಕರನೂರ, ಜೀತೆಂದ್ರ ಪಾಟೀಲ, ಅಮಿತ ಮಾಳಿ, ಮಧುಕರ ಮಜಲಟ್ಟಿ, ಗುಂಡುರಾಜ ಜ್ಯೋತಿ, ರೇಖಾ ಬಂಗಾರಿ, ಶಾಂತಾ ಹೆಳವಿ, ಗಣಪತಿ ಈಲಗೇರ, ಬಸವರಾಜ ಪಾಶ್ಚಾಪುರ, ಶಂಕರ ಪಡೇದ ಪ್ರತಿಭಟನೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts