More

    ಹೆದ್ದಾರಿ ಯೋಜನೆಗೆ ಮರುಜೀವ

    ವೇಣುವಿನೋದ್ ಕೆ.ಎಸ್. ಮಂಗಳೂರು
    ಹಲವು ಕಾರಣಗಳಿಗೆ ನನೆಗುದಿಗೆ ಬಿದ್ದಿರುವ ಬಿ.ಸಿ.ರೋಡ್-ಅಡ್ಡಹೊಳೆ ನಡುವಿನ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಂಕ್ರೀಟ್ ಕಾಮಗಾರಿಯನ್ನು ಎರಡು ಪ್ರತ್ಯೇಕ ಪ್ಯಾಕೇಜ್ ಆಗಿ ವಿಭಜಿಸಿ ನಿರ್ವಹಿಸುವುದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ.
    ಈ ಹಿಂದೆ 821 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲು ಕೆಲಸ ಪ್ರಾರಂಭಿಸಲಾಗಿತ್ತು, ಹಲವು ಕಾರಣದಿಂದ ಆಗಿನ ಗುತ್ತಿಗೆದಾರರು ಕೆಲಸ ಬಿಟ್ಟು ತೆರಳಿದ್ದು, ಈಗ ಒಂದು ಪ್ಯಾಕೇಜ್‌ಗೇ 1600 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ.

    ಆದರೆ ಅರಣ್ಯ ಭಾಗದ 16 ಕಿ.ಮೀ. ಭಾಗ(ಅಡ್ಡಹೊಳೆ -ಪೆರಿಯಶಾಂತಿ ಮಧ್ಯೆ)ದ ಹೆದ್ದಾರಿ ಕಾಮಗಾರಿಯ ವಿಸ್ತೃತ ಯೋಜನಾ ವರದಿ (ಡಿಪಿಆರ್) ಇನ್ನಷ್ಟೇ ಆಗಬೇಕಿದ್ದು, ವಿಳಂಬಗೊಳ್ಳುವ ಸಾಧ್ಯತೆ ಹೆಚ್ಚು. ಅದರ ವೆಚ್ಚವೂ ಡಿಪಿಆರ್ ಪೂರ್ಣಗೊಂಡಾಗ ಗೊತ್ತಾಗಲಿದೆ.
    45 ಕಿ.ಮೀ ಭಾಗದ ಕಾಂಕ್ರಿಟೀಕರಣ ಹಾಗೂ ಕಲ್ಲಡ್ಕ ಫ್ಲೈಓವರ್‌ಗಳನ್ನು ಪ್ರತ್ಯೇಕವಾಗಿ ಮಾಡಲು ಈ ಹಿಂದೆ ತೀರ್ಮಾನಿಸಲಾಗಿತ್ತು. ಈಗ ಅದೆರಡನ್ನೂ ವಿಲೀನಗೊಳಿಸಲು ತೀರ್ಮಾನಿಸಲಾಗಿದ್ದು, ಈ ಕುರಿತ ಬಿಡ್ ದಾಖಲೆಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಂಗಳೂರು ವಿಭಾಗದವರು ತಮ್ಮ ಪ್ರಧಾನ ಕಚೇರಿಗೆ ಅನುಮೋದನೆಗೆ ಕಳುಹಿಸಿದ್ದಾರೆ.
    ಮುಂದಿನ ಹಂತ ಬಿಡ್ ಆಗಿದ್ದು, ಅದನ್ನು ಪ್ರಧಾನ ಕಚೇರಿಯವರು ಕೈಗೊಳ್ಳಬೇಕಾಗಿದೆ, ನಾವು ಪ್ರಕ್ರಿಯೆಗೆ ಸಜ್ಜಾಗಿದ್ದೇವೆ ಎಂದು ಯೋಜನಾ ನಿರ್ದೇಶಕ ಶಿಶು ಮೋಹನ್ ‘ವಿಜಯವಾಣಿ’ಗೆ ತಿಳಿಸಿದರು.

    45 ಕಿ.ಮೀ ಉದ್ದದ ಕಾಂಕ್ರೀಟ್ ರೋಡ್ ನಿರ್ಮಾಣಕ್ಕೆ 1600 ಕೋಟಿ ರೂ. ಅಂದಾಜು ವೆಚ್ಚ. ಇದನ್ನು ಇಪಿಸಿ ಮಾದರಿ ಎಂದರೆ ಎನ್‌ಎಚ್‌ಎಐ ವತಿಯಿಂದಲೇ ಕಾಮಗಾರಿ ನಿರ್ವಹಿಸುವುದೇ ಅಥವಾ ಬಿಲ್ಡ್ ಆಪರೇಟ್ ಟ್ರಾನ್ಸ್‌ಫರ್ ಮಾದರಿಯಲ್ಲಿ ಮಾಡಬೇಕೇ ಎನ್ನುವುದು ಇನ್ನೂ ತೀರ್ಮಾನವಾಗಿಲ್ಲ. ಹಿಂದೆ ಎಲ್‌ಆ್ಯಂಡ್‌ಟಿ ಕಂಪನಿಗೆ ಇಪಿಸಿ ಮಾದರಿಯಲ್ಲಿ ಗುತ್ತಿಗೆ ನೀಡಲಾಗಿತ್ತು.
    ಒಂದೇ ಕಂಪನಿಗೆ ಈ ಕಾಮಗಾರಿ ನಡೆಸಲು ಕಷ್ಟ ಹಾಗೂ ಅರಣ್ಯ ಇಲಾಖೆ ಸಂಬಂಧಿತ ವಿವಿಧ ಇಲಾಖೆಗಳ ಒಪ್ಪಿಗೆ ಪಡೆಯಲು ಸಮಸ್ಯೆಗಳಿವೆ ಎಂಬ ಕಾರಣಕ್ಕಾಗಿ ಏಕ ಪ್ಯಾಕೇಜ್ ಕೈ ಬಿಟ್ಟು ಎರಡು ಪ್ಯಾಕೇಜ್‌ಗಳ ಮೂಲಕ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಯಿತು.

    ಕೈ ಬಿಟ್ಟಿದ್ದ ಎಲ್‌ಆ್ಯಂಡ್‌ಟಿ: ಅಡ್ಡಹೊಳೆಯಿಂದ ಬಿ.ಸಿ.ರೋಡ್ ಮಧ್ಯೆ 821 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸುವ ಹೊಣೆಯನ್ನು ಎಲ್‌ಆ್ಯಂಡ್‌ಟಿಗೆ ನೀಡಲಾಗಿತ್ತು. ಆದರೆ, ಭೂಸ್ವಾಧೀನದಲ್ಲಿ ವಿಳಂಬವಾಗಿದ್ದಲ್ಲದೆ ಪರಿಸರ ಸಚಿವಾಲಯದಿಂದ ಬೇಕಾದ ಕ್ಲಿಯರೆನ್ಸ್ ಸಕಾಲದಲ್ಲಿ ಸಿಕ್ಕಿರಲಿಲ್ಲ. ಅರಣ್ಯ ಇಲಾಖೆಯ ತಗಾದೆ ಇರುವ 14 ಕಿ.ಮೀ. ಭಾಗವನ್ನು ಟೆಂಡರ್‌ನಿಂದ ಕೈ ಬಿಡಲು ಪ್ರಾಧಿಕಾರ ಮುಂದಾಗಿದ್ದರಿಂದ ತಮಗೆ ಸಿಗುವ ಆದಾಯಕ್ಕೆ ಖೋತಾ ಆಗುತ್ತದೆ ಎಂದು ಆಕ್ಷೇಪಿಸಿ ಎಲ್‌ಆ್ಯಂಡ್‌ಟಿ ಕೆಲಸ ಸ್ಥಗಿತಗೊಳಿಸಿ ಹೊರಟು ಹೋಗಿತ್ತು. ಆ ಬಳಿಕ ಸುಮಾರು ನಾಲ್ಕು ತಿಂಗಳಲ್ಲಿ ಮತ್ತೆ ಟೆಂಡರ್‌ಗೆ ಸಿದ್ಧತೆ ನಡೆದಿದೆ.

    ಏನಿದು ಯೋಜನೆ?: ಬೆಂಗಳೂರಿನ ನೆಲಮಂಗಲದಿಂದ ಹಾಸನದವರೆಗೆ ಇರುವ ಚತುಷ್ಪಥ ರಸ್ತೆಯನ್ನು ಮಂಗಳೂರುವರೆಗೂ ವಿಸ್ತರಿಸುವ ಯೋಜನೆಯ ಭಾಗವಿದು. ಶಿರಾಡಿ ಘಾಟ್‌ನಲ್ಲಿ ಎರಡು ಹಂತದಲ್ಲಿ ಕಾಂಕ್ರೀಟ್ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಉಳಿದಂತೆ, ಹಾಸನದಿಂದ ಶಿರಾಡಿಯ ಮಾರನಹಳ್ಳಿಯವರೆಗೆ ಒಟ್ಟು 45 ಕಿ.ಮೀ ಹಾಗೂ ಶಿರಾಡಿಯ ಅಡ್ಡಹೊಳೆಯಿಂದ ಬಂಟ್ವಾಳದವರೆಗೆ ಒಟ್ಟು 63 ಕಿ.ಮೀ ರಸ್ತೆಯು ಚತುಷ್ಪಥಗೊಳ್ಳಲಿದೆ.

    ಮಳೆಗಾಲದಲ್ಲಿ ಸಂಚಾರ ಸಂಕಷ್ಟ
    ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವಾಗಲೇ ಇನ್ನೆರಡು ತಿಂಗಳು ಬೇಕಾಗಬಹುದು. ಇದರಿಂದಾಗಿ ಈ ಮಳೆಗಾಲ ಪೂರ್ತಿ ಬಿ.ಸಿ.ರೋಡ್-ಅಡ್ಡಹೊಳೆ ಮಧ್ಯೆ ಸಂಚರಿಸುವವರ ಸ್ಥಿತಿ ಶೋಚನೀಯವಾಗಲಿದೆ. ಅರ್ಧಂಬರ್ಧ ಕೆಲಸ ನಡೆದಿರುವುದರಿಂದ ಸದ್ಯ ಸಪೂರ ರಸ್ತೆಯಲ್ಲಿ ಸಂಚರಿಸುವ ದುಃಸ್ಥಿತಿ ಪ್ರಯಾಣಿಕರದ್ದಾಗಲಿದೆ.

    ಭೂಸ್ವಾಧೀನ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ, ಬಿಡ್ ದಾಖಲೆಗಳನ್ನು ನಮ್ಮ ಪ್ರಧಾನ ಕಚೇರಿಗೆ ಸಲ್ಲಿಸಿದ್ದೇವೆ, ಅವರು ಯಾವಾಗ ಹೇಳುತ್ತಾರೋ ಆಗ ಕಾಮಗಾರಿ ಕೈಗೊಳ್ಳುವುದಕ್ಕೆ ನಾವು ಸಿದ್ಧರಾಗಿದ್ದೇವೆ. ಅಲ್ಲಿಂದ ನಿರ್ದೇಶನ ಬರಬೇಕಿದೆ.
    -ಶಿಶುಮೋಹನ್, ಎನ್‌ಎಚ್‌ಎಐ ಯೋಜನಾ ನಿರ್ದೇಶಕ, ಮಂಗಳೂರು

    ಸರ್ಕಾರದ ವಿಳಂಬ ನೀತಿಯಿಂದ ಪ್ರಯಾಣಿಕರಿಗೆ ಪರದಾಟವಾಗಿದೆ. ಮಳೆಗಾಲ, ಬೆಳಗ್ಗೆ ಮಂಜು ಮುಸುಕಿದ ಈ ದಾರಿಯಲ್ಲಿ ಪ್ರಯಾಣ ಬಲು ದುಸ್ತರ, ಇನ್ನಾದರೂ ಸರ್ಕಾರ ಈ ಪ್ರಕ್ರಿಯೆ ತ್ವರಿತಗೊಳಿಸುವಲ್ಲಿ ಆಸಕ್ತಿ ತೋರಲಿ.
    -ಶ್ಯಾಮ ಸೂರ್ಯ ಮುಳಿಗದ್ದೆ, ಪುತ್ತೂರು, ಪ್ರಯಾಣಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts