More

    ಹೆದ್ದಾರಿ ಕಾಮಗಾರಿ ಅರ್ಧದಲ್ಲೇ ಬಾಕಿ

    ಕೆ.ಸಂಜೀವ ಆರ್ಡಿ
    ಬೈಂದೂರು-ವಿರಾಜಪೇಟೆ ರಾಜ್ಯ ಹೆದ್ದಾರಿ ಹಾಲಾಡಿಯಿಂದ ಹೈಕಾಡಿ, ಗೋಳಿಯಂಗಡಿ, ಬೆಳ್ವೆ, ಅಲ್ಬಾಡಿ ಸಂಪರ್ಕದ ರಸ್ತೆ ಕಾಮಗಾರಿ ಸ್ಥಗಿತ ಹಿನ್ನೆಲೆಯಲ್ಲಿ ವಾಹನ ಸವಾರರು, ಸ್ಥಳೀಯರು ಪ್ರತಿನಿತ್ಯ ಪರಿತಪಿಸುವಂತಾಗಿದೆ. ರಾಜ್ಯ ಹೆದ್ದಾರಿ ಮೂಲಕ ಕೊಲ್ಲೂರು, ಶೃಂಗೇರಿ, ಧರ್ಮಸ್ಥಳ, ಸುಬ್ರಹ್ಮಣ್ಯ, ಮುರ್ಡೇಶ್ವರ, ಮಂದಾರ್ತಿ, ಕಮಲಶಿಲೆ, ಆನೆಗುಡ್ಡೆ ಮೊದಲಾದ ಪುಣ್ಯಕ್ಷೇತ್ರಗಳಿಗೆ ಹಾಗೂ ಸುತ್ತಮುತ್ತ ಪೇಟೆಗಳಿಗೆ ತೆರಳುವ ಜನ, ವಾಹನ ಸವಾರರು ಈ ರಸ್ತೆ ದುಸ್ಥಿತಿಯಿಂದ ಬೇಸತ್ತಿದ್ದಾರೆ. ಬೆಳ್ವೆಯಲ್ಲಿ ಗುತ್ತಿಗೆದಾರರು ಒಂದು ತಿಂಗಳ ಹಿಂದೆಯೇ ಕೆಲಸ ಆರಂಭಿಸಿ ರಸ್ತೆ ಅಗೆದು ಹಾಕಿದ್ದರಿಂದ ಇಲ್ಲಿ ಜಲ್ಲಿ, ಮಣ್ಣು ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಇಲ್ಲಿ ವಾಹನ ಚಲಾಯಿಸುವಾಗ ದೂಳಿನಿಂದಾಗಿ ಜನರಿಗೆ ಸಮಸ್ಯೆಯಾಗುತ್ತಿದೆ. ದ್ವಿಚಕ್ರ ವಾಹನ ಸವಾರರು, ಸೈಕಲ್ ಸವಾರರು, ಪಾದಚಾರಿಗಳು ಎಡವಿ ಬಿದ್ದ ಘಟನೆಗಳೂ ನಡೆದಿವೆ.

    ಹಾಲಾಡಿಯಿಂದ ಅಲ್ಬಾಡಿವರೆಗೆ ಹೆದ್ದಾರಿಯ ಕೆಲವು ಭಾಗಗಳಲ್ಲಿ ರಸ್ತೆ ಕೆಲಸ ಪ್ರಾರಂಭಿಸಿದ್ದು, ಈ ವ್ಯಾಪ್ತಿಯಲ್ಲಿ ಅಪಾಯಕಾರಿ ಮರಗಳ ತೆರವು ಕಾರ್ಯ ವಿಳಂಬಗೊಂಡಿರುವುದು ಕೆಲಸ ಸ್ಥಗಿತಕ್ಕೆ ಕಾರಣ ಎನ್ನಲಾಗುತ್ತಿದೆ. ರಸ್ತೆ ಮಧ್ಯೆ ವಿದ್ಯುತ್ ಕಂಬಗಳು ಹಾಗೂ ಅಪಾಯಕಾರಿ ಮರಗಳು ರಾತ್ರಿ ಹೊತ್ತಿನಲ್ಲಿ ಕಾಣದಿರುವುದರಿಂದಲೂ ಅಪಘಾತಗಳು ಸಂಭವಿಸಿವೆ.

    ಸೂಚನಾ ಫಲಕಗಳಿಲ್ಲ: ಈ ಹೆದ್ದಾರಿ ಹಗಲು -ರಾತ್ರಿ ವಾಹನ ದಟ್ಟಣೆಯಿಂದ ಕೂಡಿದ್ದು, ವೇಗವಾಗಿ ಸಾಗುವ ವಾಹನ ಸವಾರರಿಗೆ ಇಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವ ಬಗ್ಗೆ ಅರಿವಿಲ್ಲ. ಕಾಮಗಾರಿ ಬಗ್ಗೆ ಯಾವುದೇ ಸೂಚನಾ ಫಲಕಗಳಿಲ್ಲ. ಧೂಳಿನ ರಸ್ತೆಯಲ್ಲಿ ಏಕಾೀಕಿ ಬ್ರೇಕ್ ಹಾಕಿದರೆ ಅಪಘಾತ ಖಚಿತ. ಗುತ್ತಿಗೆದಾರರು ರಸ್ತೆ ಕಾಮಗಾರಿ ಅರ್ಧದಲ್ಲೇ ನಿಲ್ಲಿಸಿದ್ದ್ದರಿಂದ ರಾಶಿ ಬಿದ್ದ ಜಲ್ಲಿ, ಮಣ್ಣಿನ ಮೇಲೆ ವಾಹನಗಳು ಸಂಚರಿಸುವಾಗ ರಸ್ತೆ ಧೂಳುಮಯವಾಗುತ್ತಿದೆ.

    ಬೆಳ್ವೆ ಪೇಟೆಯಲ್ಲಿ ಹೆದ್ದಾರಿ ರಸ್ತೆ ವಿಸ್ತರಣೆ ಕಾಮಗಾರಿ ಸ್ಥಗಿತಗಿಂದ ಧೂಳಿನ ಸಮಸ್ಯೆ ಕಾಡುತ್ತಿದೆ. ದಟ್ಟ ಧೂಳಿನಿಂದ ರಸ್ತೆ ಸಮೀಪದ ಮನೆ, ಅಂಗಡಿ ಹಾಗೂ ವ್ಯವಹಾರ ಮಾಡುವವರಿಗೆ ಪ್ರತಿದಿನ ತೊಂದರೆಯಾಗುತ್ತಿದೆ. ಸಂಬಂಧಿಸಿದವರು ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಸೂಕ್ತ ಕ್ರಮ ಕೈಗೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು.
    – ಬಿ.ಗೋಕುಲ್ ಕಿಣಿ ಬೆಳ್ವೆ, ಉದ್ಯಮಿ

    ಬೆಳ್ವೆ ಪೇಟೆಯಲ್ಲಿ ವಾಹನಗಳ ಸಂಚಾರ ದಟ್ಟಣೆಯಿದೆ. ರಸ್ತೆ ವಿಸ್ತರಣೆ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿರುವ ಕಾರಣ ಭಾರಿ ಧೂಳಿನಿಂದ ಸಮಸ್ಯೆಯಾಗುತ್ತಿದೆ. ರಸ್ತೆ ಕೆಲಸ ಪೂರ್ತಿಗೊಳಿಸಿ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡಬೇಕು.
    – ಅನ್ಸರ್ ಬ್ಯಾರಿ, ಬೆಳ್ವೆ ರಿಕ್ಷಾ ಮಾಲೀಕ ಚಾಲಕರ ಸಂಘ ಅಧ್ಯಕ್ಷ

    ಮಡಾಮಕ್ಕಿಯಿಂದ ಶಿರಂಗೂರು, ಅಲ್ಬಾಡಿಯಿಂದ ಬೆಳ್ವೆ, ಗೋಳಿಯಂಗಡಿ, ಗೋಳಿಯಂಗಡಿಯಿಂದ ಹೈಕಾಡಿ, ಕಾಸಾಡಿ, ಹಾಲಾಡಿಯವರೆಗೆ ರಸ್ತೆ ಬದಿಯ ಮರಗಳನ್ನು ತೆರವುಗೊಳಿಬೇಕಿದೆ. ಮರ ತೆರವುಗೊಳಿಸಲು ಅರಣ್ಯ ಇಲಾಖೆಗೆ ಪಾವತಿಸಬೇಕಾದ ಮೊತ್ತದ ಮಂಜೂರಾತಿಗೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮರ ತೆರವು ಬಳಿಕ ಹೆದ್ದಾರಿ ಕಾಮಗಾರಿ ಮುಂದುವರಿಯಲಿದೆ.
    – ಹರ್ಷವರ್ಧನ್ , ಕುಂದಾಪುರ ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts