More

    ದೆಹಲಿ ಹೋರಾಟಕ್ಕೆ ರೈತರ ಬೆಂಬಲ

    ಸೊರಬ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವಂತೆ ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟ ಬೆಂಬಲಿಸಿ ತಾಲೂಕಿನ ಆನವಟ್ಟಿಯಲ್ಲಿ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯಿಂದ ಶುಕ್ರವಾರ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು.

    ಸಂಘದ ರಾಜ್ಯ ಕಾರ್ಯಾಧ್ಯಕ್ಷ ಎನ್.ಕೆ.ಮಂಜುನಾಥ ಗೌಡ ನಿಸರಾಣಿ ಮಾತನಾಡಿ, ಅನ್ನ ನೀಡುವ ರೈತರ ಬಾಳಿಗೆ ಬೆಳಕಾಗುವ ಕಾಯ್ದೆ ತರಬೇಕಾದ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿರೋಧಿ ಧೋರಣೆ ಅನುಸರಿಸುತ್ತಿದೆ. ಈ ಮಾರಕ ಕಾಯ್ದೆಗಳನ್ನು ದೇಶಾದ್ಯಂತ ರೈತರು ವಿರೋಧಿಸುತ್ತಿದ್ದಾರೆ. ದೆಹಲಿಯಲ್ಲಿ ಶಾಂತಿಯುತ ಹೋರಾಟ ಮಾಡುತ್ತಿರುವ ರೈತರ ಮೇಲೆ ಲಾಠಿ ಚಾರ್ಜ್ ಮಾಡುವ ಮೂಲಕ ಹಕ್ಕು ಕಿತ್ತುಕೊಳ್ಳುವ ಜತೆಗೆ ಹೋರಾಟ ಹತ್ತಿಕ್ಕುವ ಕೆಲಸಕ್ಕೆ ಮುಂದಾಗಿರುವುದು ಖಂಡನೀಯ ಎಂದರು.

    ರೈತ ಮುಖಂಡ ಉಮೇಶ್ ಪಾಟೀಲ್ ಚಿಕ್ಕಸವಿ ಮಾತನಾಡಿ, ಕಾಪೋರೇಟ್ ಕಂಪನಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಮರಣ ಶಾಸನವಾಗುವಂತಹ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದು ರೈತರ ಬದುಕನ್ನು ಮೂರಾಬಟ್ಟೆ ಮಾಡಲು ಹೊರಟಿದೆ ಎಂದು ಆರೋಪಿಸಿದರು.

    ಸರ್ಕಾರಗಳು ರೈತರ ಹಿತಕಾಯುವಲ್ಲಿ ವಿಫಲವಾಗಿವೆ. ವಿಧಾನಸಭಾ ಅಧಿವೇಶನದಲ್ಲಿ ರೈತ ವಿರೋಧಿ ಸುಗ್ರೀವಾಜ್ಞೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಡಿ.7ರಂದು ಬೆಂಗಳೂರಿನಲ್ಲಿ ಬಾರಕೋಲು ಚಳವಳಿ ಮೂಲಕ ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದರು.

    ರೈತ ಸಂಘದ ತಾಲೂಕು ಅಧ್ಯಕ್ಷ ಈಶ್ವರಪ್ಪ ಕೊಡಕಣಿ, ಮುಖಂಡರಾದ ಶಿವಪ್ಪ ಹುಣಸವಳ್ಳಿ, ಶಿವಮೂರ್ತಿ ಸಾಹುಕಾರ್, ಈರನಗೌಡ, ನಾಗಪ್ಪ ದಡ್ಡಿಕೊಪ್ಪ, ನಾಗರಾಜ ಬೆಣಗೇರಿ, ಮೇಘರಾಜ್ ಬೆಟ್ಟದಕೂರ್ಲಿ, ಚಂದ್ರಪ್ಪ ಮಾಸ್ತರ್, ಚಂದ್ರಗೌಡ ಗಿಣಿವಾಲ, ಮಂಜಪ್ಪ ಬಾರಂಗಿ, ಬಸವರಾಜಪ್ಪ ಭಾರಂಗಿ, ಬಸಪ್ಪ ಭಾರಂಗಿ, ಸುನೀತಾ, ಸೀತಮ್ಮ, ಮಂಜುಳಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts