More

    ಬಿಸಿಲ ನಾಡಾಗುವತ್ತ ಮಂಗಳೂರು?, ಹಲವು ಬಾರಿ ದೇಶದಲ್ಲೇ ಗರಿಷ್ಠ ತಾಪಮಾನ ದಾಖಲು

    ಭರತ್ ಶೆಟ್ಟಿಗಾರ್ ಮಂಗಳೂರು

    ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಬಿಸಿಲ ನಾಡು ಎನ್ನುವ ಹೆಸರಿದೆ. ಈ ಬಾರಿ ಕರಾವಳಿಯ ಮಂಗಳೂರು ಕೂಡ ಬಿಸಿಲ ನಗರವಾಗುವತ್ತ ಹೆಜ್ಜೆ ಇಟ್ಟಿದ್ದು, ‘ಬಿಸಿಲ ರಾಜಧಾನಿ’ ಹೆಸರು ಬರುವ ಸಾಧ್ಯತೆಯಿದೆ.

    2020ರ ನವೆಂಬರ್‌ನಿಂದ ಇಲ್ಲಿವರೆಗೆ ಹಲವು ಬಾರಿ ದೇಶದಲ್ಲೇ ಗರಿಷ್ಠ ತಾಪಮಾನ ಮಂಗಳೂರಿನಲ್ಲಿ ದಾಖಲಾಗಿದ್ದು, ಮುಂದಿನ ದಿನಗಳಲ್ಲೂ ಇದು ಮುಂದುವರಿಯುವ ಸಾಧ್ಯತೆಯಿದೆ. ಕಳೆದ ವರ್ಷ ಬೇಸಿಗೆಯಲ್ಲಿ 38 ಡಿಗ್ರಿ ಸೆಲ್ಸಿಯಸ್‌ವರೆಗೆ ಗರಿಷ್ಠ ತಾಪಮಾನ ದಾಖಲಾಗಿತ್ತು. ಅಕ್ಟೋಬರ್- ನವೆಂಬರ್ ತಿಂಗಳಲ್ಲಿ 37ರ ವರೆಗೆ ತಲುಪಿದೆ. ಈ ಮಾರ್ಚ್ ವೇಳೆಗೆ ಮತ್ತೆ 37, 38 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತಲೂ ಮೇಲೆ ಹೋಗುವ ಸಂಭವವಿದೆ. ಜಾಗತಿಕ ತಾಪಮಾನದ ಏರಿಕೆ ಕರಾವಳಿಯ ಮೇಲೂ ಪರಿಣಾಮ ಬೀರುತ್ತಿದ್ದು, ಕಳೆದ ಕೆಲವು ವರ್ಷಗಳಿಂದ ಉಷ್ಣಾಂಶದಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡು ಬರುತ್ತಿದೆ.

    ಕರಾವಳಿಯಲ್ಲಿ ಮುಖ್ಯವಾಗಿ ಹಗಲು ವೇಳೆಯಲ್ಲಿ ಸಮುದ್ರದ ಮೇಲ್ಮೈಯಲ್ಲಿ ತಾಪಮಾನ ಜಾಸ್ತಿಯಾಗಿ ಬಿಸಿಗಾಳಿ ಭೂಮಿಯ ಕಡೆಗೆ ಬೀಸುತ್ತದೆ. ರಾತ್ರಿ ವೇಳೆ ಭೂಮಿಯಿಂದ ಸಮುದ್ರಕ್ಕೆ ಗಾಳಿ ಬೀಸುತ್ತದೆ. ಶಾಂತ ಸಾಗರದಲ್ಲಿ ಒಂದು ಡಿಗ್ರಿ ಉಷ್ಣಾಂಶ ಹೆಚ್ಚಾದರೆ, ಅರಬ್ಬಿ ಸಮುದ್ರ ವ್ಯಾಪ್ತಿಯಲ್ಲಿಯೂ ತಾಪಮಾನದಲ್ಲಿ ಏರಿಕೆಯಾಗುತ್ತದೆ. ಸಮುದ್ರದಿಂದ ಬಿಸಿಗಾಳಿ ತೀರದತ್ತ ಬೀಸಿದಾಗ ಸೆಕೆ ಹೆಚ್ಚಾಗುತ್ತದೆ. ಮುಖ್ಯವಾಗಿ ವಾತಾವರಣದಲ್ಲಿ ತೇವಾಂಶ(ನೀರಿನ ಅಂಶ) ಕಡಿಮೆಯಾಗುವುದರಿಂದ ಸೆಕೆ ಉಂಟಾಗುತ್ತದೆ ಎನ್ನುತ್ತಾರೆ ಹವಾಮಾನ ತಜ್ಞರು. ಕರಾವಳಿಯ ಇನ್ನೊಂದು ನಗರವಾದ ಕಾರವಾರದಲ್ಲೂ ಒಂದೆರಡು ಬಾರಿ ದೇಶದಲ್ಲೇ ಗರಿಷ್ಠ ತಾಪಮಾನ ದಾಖಲಾಗಿರುವುದನ್ನು ನೆನಪಿಸಿಕೊಳ್ಳಬಹುದು.

    ಎಳನೀರು-ತಂಪು ಪಾನೀಯ ಬೇಡಿಕೆ: ಬಿಸಿಲು ಹೆಚ್ಚಾಗುತ್ತಿರುವುದರಿಂದ ಎಳನೀರು, ಕಬ್ಬಿನ ಜ್ಯೂಸ್ ಸಹಿತ ತಂಪು ಪಾನೀಯ, ಐಸ್‌ಕ್ರೀಂಗಳಿಗೆ ಬೇಡಿಕೆ ಹೆಚ್ಚಾಗಿದೆ. ನಗರ ವ್ಯಾಪ್ತಿಯಲ್ಲಿ, ಹೆದ್ದಾರಿ ಬದಿಗಳಲ್ಲಿ ಸೀಯಾಳ, ಕಬ್ಬಿನ ಜ್ಯೂಸ್ ಮಾರಾಟದ ಗಾಡಿಗಳು ಕಾಣಿಸುತ್ತಿವೆ. ಮೈಸೂರು, ಹಾಸನ ಸಹಿತ ಹೊರ ಜಿಲ್ಲೆ ಹಾಗೂ ತಮಿಳುನಾಡಿನಿಂದ ದೊಡ್ಡ ಪ್ರಮಾಣದಲ್ಲಿ ಸೀಯಾಳ ನಗರಕ್ಕೆ ಪೂರೈಕೆಯಾಗುತ್ತಿದ್ದು, 25ರಿಂದ 35 ರೂ.ಗೆ ಮಾರಾಟವಾಗುತ್ತಿದೆ. ಕಬ್ಬಿನ ಜ್ಯೂಸ್ 15- 20 ರೂ. ದರವಿದೆ. ಬೇಡಿಕೆ ಹೆಚ್ಚಿರುವುದರಿಂದ ದಿನಕ್ಕೆ 75ರಿಂದ 150ರ ವರೆಗೂ ಮಾರಾಟವಾಗುತ್ತಿದೆ ಎನ್ನುತ್ತಾರೆ ವ್ಯಾಪಾರಿ ಷಣ್ಮುಗ. ಹೋಟೆಲ್, ರೆಸ್ಟೋರೆಂಟ್‌ಗಳಲ್ಲೂ, ಜ್ಯೂಸ್ ಅಂಗಡಿಗಳಲ್ಲಿ ಕಲ್ಲಂಗಡಿ, ಆರೆಂಜ್, ಮೂಸಂಬಿ, ಲಿಂಬೆ ಸೋಡ ಸಹಿತ ವಿವಿಧ ಬಗೆಯ ಜ್ಯೂಸ್‌ಗಳಿಗೆ ಬೇಡಿಕೆಯಿದೆ.

    ನಿರ್ಜಲೀಕರಣ ಸಮಸ್ಯೆ: ಬೇಸಿಗೆಯಲ್ಲಿ ದೇಹದಲ್ಲಿ ನಿರ್ಜಲೀಕರಣ (ಡಿಹೈಡ್ರೇಶನ್) ಸಮಸ್ಯೆ ಹೆಚ್ಚಾಗಿ ವರದಿಯಾಗುತ್ತದೆ. ದೇಹದಲ್ಲಿರುವ ನೀರಿನ ಅಂಶ ಬೆವರಿನ ರೂಪದಲ್ಲಿ ಹೊರ ಬರುವುದರಿಂದ ನೀರಿನ ಕೊರತೆ ಉಂಟಾಗುತ್ತದೆ. ಇದರ ನಿರ್ಲಕ್ಷೃ ಅಪಾಯಕಾರಿಯಾಗಿದ್ದು, ಒಆರ್‌ಎಸ್ (ಉಪ್ಪು-ಸಕ್ಕರೆ ಮಿಶ್ರಿತ ನೀರು) ಕುಡಿಯುವುದರಿಂದ ನಿರ್ಜಲೀಕರಣ ದೂರ ಇರಿಸಬಹುದು. ಕುದಿಸಿ ಆರಿಸಿದ ನೀರು ಕುಡಿಯುವುದು ಉತ್ತಮ. ವಾತಾವರಣದ ಈ ಬದಲಾವಣೆಯಿಂದ ಮಕ್ಕಳಲ್ಲಿ ವಾಂತಿ-ಭೇದಿಯಂತಹ ಸಮಸ್ಯೆ ಕಾಣಿಸಿಕೊಂಡು ಜ್ವರ ಬರುವ ಸಾಧ್ಯತೆಯೂ ಇದೆ. ವೈದ್ಯರನ್ನು ಸಂಪರ್ಕಿಸಿ ಸೂಕ್ತ ಸಲಹೆ- ಸೂಚನೆ ಪಡೆಯುವುದು ಉತ್ತಮ ಎನ್ನುತ್ತಾರೆ ತಜ್ಞರು.

    ಗರಿಷ್ಠ ತಾಪಮಾನ ದಿನಗಳು: – ಜನವರಿ 25- 35.8 ಡಿ.ಸೆ. – ಜನವರಿ 15- 34.7 ಡಿ.ಸೆ. – ನವೆಂಬರ್ 30- 37 ಡಿ.ಸೆ. – ನವೆಂಬರ್ 12-35.9 ಡಿ.ಸೆ.

    ರಾಜ್ಯದಲ್ಲಿ ಚಳಿ ಕಡಿಮೆಯಾಗಿದ್ದು, ತಾಪಮಾನ ಏರಿಕೆಯಾಗುತ್ತಿದೆ. ಬೇಸಿಗೆಯ ದಿನಗಳಲ್ಲಿ ಹತ್ತಿರ ಬರುತ್ತಿರುವುದರಿಂದ ತಾಪಮಾನ ಇನ್ನಷ್ಟು ಹೆಚ್ಚಾಗಬಹುದು.
    – ಡಾ.ಸಿ.ಎಸ್. ಪಾಟೀಲ್, ಹವಾಮಾನ ಇಲಾಖೆ ನಿರ್ದೇಶಕ, ಬೆಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts