More

    ಪಂಚಕರ್ಮ ಆಸ್ಪತ್ರೆಗೆ ಹೈಟೆಕ್ ಸ್ಪರ್ಶ

    ವಿಜಯಪುರ: ಉತ್ತರ ಕರ್ನಾಟಕದಲ್ಲಿಯೇ ಅತ್ಯಂತ ದೊಡ್ಡ ಹಾಗೂ ಅತ್ಯಾಧುನಿಕ ಸೌಲಭ್ಯ ಹೊಂದಿದ ಆಸ್ಪತ್ರೆ ಖ್ಯಾತಿಯ ‘ಹೈಟೆಕ್ ಪಂಚಕರ್ಮ ಆಸ್ಪತ್ರೆ’ ಇದೀಗ ಮತ್ತಷ್ಟು ಹೈಟೆಕ್ ಆಗಿದ್ದು, ನೆರೆಯ ಮಹಾರಾಷ್ಟ್ರದಲ್ಲೂ ಪ್ರಖ್ಯಾತಿ ಪಡೆಯುತ್ತಿದೆ.

    ಇಲ್ಲಿನ ಜಿಲ್ಲಾಸ್ಪತ್ರೆ ಆವರಣದಲ್ಲಿ ನಿರ್ಮಾಣಗೊಂಡ ಆಯುಷ್ ಇಲಾಖೆಯ ಹೈಟೆಕ್ ಪಂಚಕರ್ಮ ಘಟಕ ದಿನೇ ದಿನೇ ಪ್ರಭಾವಳಿ ಹೆಚ್ಚಿಸಿಕೊಳ್ಳುತ್ತಿದ್ದು ಮಹಾರಾಷ್ಟ್ರದವರು ಮಾತ್ರವಲ್ಲದೇ ಐತಿಹಾಸಿಕ ನಗರಿಗೆ ಬರುವ ಪ್ರವಾಸಿಗರು ಸಹ ಭೇಟಿ ನೀಡುತ್ತಿದ್ದಾರೆ. ಹೀಗಾಗಿ ಪಂಚಕರ್ಮ ಘಟಕಕ್ಕೆ ಕಳೆ ಬಂದಿದ್ದು ಒಂದೆಡೆಯಾದರೆ ಮತ್ತಷ್ಟು ಆರ್ಥಿಕ ಬಲ, ಸಿಬ್ಬಂದಿ ಬಲ ನಿರೀಕ್ಷಿಸುತ್ತಿದೆ.

    ಸಮ್ಮಿಶ್ರ ಸರ್ಕಾರದಲ್ಲಿ ಆರೋಗ್ಯ ಮಂತ್ರಿಯಾಗಿದ್ದ ಹಾಲಿ ಜವಳಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲರ ಕಾಳಜಿಯ ಫಲವಾಗಿ ನಿರ್ಮಾಣಗೊಂಡ ಹೈಟೆಕ್ ಪಂಚಕರ್ಮ ಆಸ್ಪತ್ರೆ ನಿರೀಕ್ಷೆ ಮೀರಿ ಖ್ಯಾತಿ ಪಡೆಯುತ್ತಿದೆ. ‘ಕಾಯಕಲ್ಪ ಪ್ರಶಸ್ತಿ’ ವಿಜೇತ ಸರ್ಕಾರಿ ಜಿಲ್ಲಾಸ್ಪತ್ರೆ ಆವರಣದ ಸುಮಾರು 3 ಎಕರೆ ಪ್ರದೇಶದಲ್ಲಿ 3.80 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಾಣಗೊಂಡ ಈ ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ರೋಗಿಗಳ ಸಂಖ್ಯೆ ಇಮ್ಮಡಿಸುತ್ತಿದೆ.

    ಈ ಹಿಂದೆ ಬಬಲೇಶ್ವರ ನಾಕಾ ಬಳಿ ಇದ್ದ ಆಯುಷ್ ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆ ಆವರಣದಲ್ಲಿ ಪಂಚಕರ್ಮ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯ ಒದಗಿಸಲಾಗಿದ್ದು, ದಿನಕ್ಕೆ 120 ರಿಂದ 160 ಹೊರ ರೋಗಿಗಳು ಚಿಕಿತ್ಸೆಗೆ ಭೇಟಿ ನೀಡುತ್ತಿದ್ದಾರೆ. ಒಪಿಡಿ ಮತ್ತು ಡೇಕೇರ್ ಇದೇ ಪಂಚಕರ್ಮ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿದ್ದು, ಈ ಹಿಂದಿನ ಹಳೆಯ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

    ಬೃಹತ್ ಕಟ್ಟಡದಲ್ಲಿ ಔಷಧ ಉಗ್ರಾಣ, ಪ್ರಯೋಗಾಲಯ, ನರ್ಸಿಂಗ್ ಸ್ಟಾಫ್‌ರೂಮ್, ಪಂಚಕರ್ಮ ಘಟಕ, ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಧ್ಯಾನ ಕೇಂದ್ರ, ಯೋಗ ಕೇಂದ್ರ ಕೂಡ ಸ್ಥಾಪಿಸಲಾಗಿದೆ. ಬೆಳಗ್ಗೆ 6 ಗಂಟೆಯಿಂದಲೇ ಆರಂಭಗೊಳ್ಳಲಿದ್ದು ಸಂಜೆವರೆಗೂ ಚಿಕಿತ್ಸೆ ದೊರೆಯುತ್ತಿದೆ. ಬೆಳಗ್ಗೆ ಯೋಗಾ ಶಿಬಿರ ಕೂಡ ಏರ್ಪಡಿಸಲಾಗುತ್ತಿದೆ. ಕಟಿಬಸ್ತಿ, ಗ್ರೀವಾ ಬಸ್ತಿ, ಜಾನು ಬಸ್ತಿ, ಸ್ಟೀಮ್ ಮತ್ತು ಮಸಾಜ್ ಸೌಲಭ್ಯವಿದೆ. ಪ್ರತಿ ತಿಂಗಳು ಗ್ರಾಮೀಣ ಭಾಗಗಳಲ್ಲಿ ಶಿಬಿರಗಳನ್ನು ಏರ್ಪಡಿಸಲಾಗುತ್ತಿದೆ. ಸಣ್ಣ-ಪುಟ್ಟ ಕಾಯಿಲೆಗಳಿಗೆ ಮನೆ ಮದ್ದುಗಳ ಕುರಿತು ತಿಳಿವಳಿಕೆ ನೀಡಲಾಗುತ್ತಿದೆ. ಆಸ್ಪತ್ರೆ ಆವರಣದಲ್ಲಿ ಹರ್ಬಲ್ ಗಾರ್ಡನ್ ಕೂಡ ಮಾಡಲಾಗುತ್ತಿದೆ.

    ಸುಸಜ್ಜಿತ ಆಸ್ಪತ್ರೆಗೆ ಸಿಬ್ಬಂದಿ ಮತ್ತು ಆರ್ಥಿಕತೆ ಸವಾಲು ಕೂಡ ಇಲ್ಲದಿಲ್ಲ. ಗ್ರುಪ್ ಡಿ-22, ಎಫ್‌ಡಿಸಿ-1, ಕಚೇರಿ ಅಧೀಕ್ಷಕರು-2 ಹೀಗೆ ವಿವಿಧ 25 ಹುದ್ದೆಗಳು ಖಾಲಿ ಇವೆ. ಅದಾಗ್ಯೂ ಸಮರ್ಪಕವಾಗಿ ನಿಭಾಯಿಸಲಾಗುತ್ತಿದ್ದು, ಜಿಲ್ಲಾ ಆಯುಷ್ ಅಧಿಕಾರಿ ರಾಮನಗೌಡ ಪಾಟೀಲ ಸೇರಿದಂತೆ ಹೋಮಿಯೋಪತಿ, ಯುನಾನಿ, ಆಯುರ್ವೇದ ವೈದ್ಯರಿದ್ದಾರೆ. ಐವರು ಫಾಮಾಸಿಸ್ಟ್, ಮೂವರು ಮಹಿಳಾ ಸಿಬ್ಬಂದಿ ಹಾಗೂ ಏಳು ನರ್ಸಿಂಗ್ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚುತ್ತಿರುವ ಹೊರರೋಗಿಗಳ ಸಂಖ್ಯೆಯೇ ಆಸ್ಪತ್ರೆಯ ಕಾರ್ಯನಿರ್ವಹಣೆಗೆ ಹಿಡಿದ ಕೈಗನ್ನಡಿಯಾಗಿದೆ.
    ಬೆನ್ನು ನೋವು, ಕೀಲು ನೋವು, ಲಕ್ವಾ ಮತ್ತು ಸಕ್ಕರೆ ಕಾಯಿಲೆಗೆ ಸಂಬಂಧಿಸಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬರುತ್ತಿದ್ದಾರೆ. ಗುಣಮುಖರಾದ ಬಳಿಕ ಅವರೇ ಮೌಖಿಕವಾಗಿ ಪ್ರಚಾರ ನೀಡಿದ ಫಲ ಇಂದು ರೋಗಿಗಳ ಸಂಖ್ಯೆ ಇಮ್ಮಡಿಸಲು ಕಾರಣ ಎನ್ನುತ್ತಾರೆ ವೈದ್ಯ ಸಿದ್ದಲಿಂಗಯ್ಯ ಹಿರೇಮಠ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts