More

    ಜ.2ರವರೆಗೆ ಮಾಲ್ ಆಫ್ ಏಷ್ಯಾ ವಿರುದ್ಧ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಸೂಚನೆ

    ಬೆಂಗಳೂರು: ಕಾನೂನು ಸುವ್ಯವಸ್ಥೆ ನೆಪ ಮಾಡಿ ಏರ್‌ಪೋರ್ಟ್ ರಸ್ತೆಯ ಬ್ಯಾಟರಾಯನಪುರದಲ್ಲಿರುವ ಮಾಲ್ ಆಫ್ ಏಷ್ಯಾದ ವಿರುದ್ಧ ಮಂಗಳವಾರದವರೆಗೆ (ಜ. 2) ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ಸೂಚನೆ ನೀಡಿದೆ.

    ನಾಮಫಲಕಗಳಲ್ಲಿ ಶೇ.60 ಕನ್ನಡ ಬಳಕೆ ಮಾಡದ ಕಾರಣ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರ ಇತ್ತೀಚಿಗೆ ಮಾಲ್ ಮುಂದೆ ಪ್ರತಿಭಟನೆ ಮಾಡಿದ್ದರು. ಜತೆಗೆ ಮಾಲ್ ಆರಂಭವಾದಾಗಿನಿಂದಲೂ ಏರ್‌ಪೋರ್ಟ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ ಎಂಬುದಾಗಿ ಹಲವು ದೂರು ಪೊಲೀಸರಿಗೆ ಸಲ್ಲಿಕೆಯಾಗಿತ್ತು. ಇದನ್ನಾಧರಿಸಿ ನಗರ ಪೊಲೀಸರು ಜ.15ರವರೆಗೆ ಮಾಲ್ ಸುತ್ತಮುತ್ತ ಶನಿವಾರ ನಿಷೇಧಾಜ್ಞೆ ಹೇರಿದ್ದರು.

    ಇದನ್ನು ಪ್ರಶ್ನಿಸಿ ಸ್ಪಾರ್ಕಲ್ ಒನ್ ಮಾಲ್ ಡೆವಲಪರ್ಸ್ ಪ್ರೈ. ಲಿ. ಸಲ್ಲಿಸಿದ್ದ ತುರ್ತು ಅರ್ಜಿಯನ್ನು ಭಾನುವಾರ ನ್ಯಾ. ಎಂ.ಜಿ.ಎಸ್. ಕಮಲ್ ಅವರಿದ್ದ ರಜಾಕಾಲದ ಏಕ ಸದಸ್ಯ ಪೀಠವು ಈ ಆದೇಶ ಮಾಡಿತು.

    ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಾದ ಮಮಡಿಸಿದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಮಾಲ್‌ಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿಲ್ಲ. ಬದಲಿಗೆ ನಿಯಂತ್ರಣ ಮಾತ್ರ ವಿಧಿಸಲಾಗಿದೆ. ಈ ಕುರಿತು ಭಾನುವಾರ ಮಧ್ಯಾಹ್ನವೇ ಪೊಲೀಸ್ ಆಯುಕ್ತರೊಂದಿಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು.

    ಆಗ ನ್ಯಾ. ಎಂ.ಜಿ.ಎಸ್. ಕಮಲ್ ಚರ್ಚೆಯ ಫಲಶೃತಿಯನ್ನು ಜ.2ರಂದು ಹೈಕೋರ್ಟ್‌ಗೆ ತಿಳಿಸಿರಿ. ಅಲ್ಲಿಯವರೆಗೆ ಮಾಲ್ ವಿರುದ್ಧ ಕ್ರಮ ಕೈಗೊಳ್ಳಬಾರದು ಎಂದು ಸೂಚಿಸಿದರು.

    ಅರ್ಜಿದಾರ ಪರವಾಗಿ ವಾದ ಮಂಡಿಸಿದ ವಕೀಲ ಧ್ಯಾನ್ ಚಿನ್ನಪ್ಪ, ಮಾಲ್‌ಗೆ ನಿಷೇಧಾಜ್ಞೆ ವಿಧಿಸಿರುವ ಕ್ರಮ ಅನ್ಯಾಯದಿಂದ ಕೂಡಿದೆ. ಸಾರ್ವಜನಿಕರ ಪ್ರವೇಶ ನಿರ್ಬಂಧಿಸುವ ಆದೇಶ ಅಸ್ಪಷ್ಟವಾಗಿದೆ. ಜ.15ರವರೆಗೆ ಮಾಲ್ ಮುಚ್ಚುವಂತೆ ಪರಿಣಾಮ ಬೀರುತ್ತದೆ. ಸಮಸ್ಯೆ ಅಷ್ಟು ಗಂಭೀರವಾಗಿಲ್ಲ, ಅಂತಹ ಗಂಭೀರ ಕ್ರಮವೂ ಅಗತ್ಯವಿಲ್ಲ ಎಂದು ತಿಳಿಸಿದರು.

    ಕಾನೂನು ಸುವ್ಯವಸ್ಥೆ ಸರ್ಕಾರದ ಹೊಣೆ:

    ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ಸರ್ಕಾರ ಮಾಲ್ ಮುಚ್ಚಲು ಆದೇಶಿಸಿಲ್ಲ. ಸಾರ್ವಜನಿಕರ ಪ್ರವೇಶಕ್ಕೆ ಮಾತ್ರ ನಿರ್ಬಂಧ ಹೇರಿದೆ ಎಂದು ಪಠೀದ ಗಮನಕ್ಕೆ ತಂದರು.

    ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಹೊಣೆ. ಜಾರಿಗೆ ತರಬಹುದಾದ ಪರಿಹಾರದ ಬಗ್ಗೆ ಯೋಚಿಸಿದ್ದೀರಾ? ಇಷ್ಟು ದಿನದ ನಂತರ ಮಾಲ್ಗೆ ದಿಢೀರ್ ನಿರ್ಬಂಧ ವಿಧಿಸಿದ್ದು ಏಕೆ ? ಸಾರ್ವಜನಿಕರನ್ನು ಮಾಲ್ಗೆ ನಿರ್ಬಂಧಿಸುವುದು ಪರಿಹಾರವೇ? ಎಂದು ಪ್ರಶ್ನಿಸಿತು.

    ಜತೆಗೆ ಮಾಲ್‌ನಲ್ಲಿ ಯಾವುದೇ ಸಮಾವೇಶ, ಧಾರ್ಮಿಕ ಪ್ರವಚನಗಳು ನಡೆಯುತ್ತಿಲ್ಲ. ಕಳೆದ ಅಕ್ಟೋಬರ್‌ನಿಂದಷ್ಟೇ ಕಾರ್ಯಾರಂಭ ಮಾಡಿದೆ. ಸರ್ಕಾರದ ಆದೇಶ ಗೊಂದಲಕಾರಿಯಾಗಿರಬಾರದು, ಸ್ಪಷ್ಟವಾಗಿರಬೇಕು ಎಂದು ಹೇಳಿತು.

    ಡಿ.31ರ ಒಂದು ದಿನದ ಮಟ್ಟಿಗೆ ಮಾಲ್ ಮುಚ್ಚಲಾಗುವುದು ಮತ್ತು ಪೊಲೀಸ್ ಆಯುಕ್ತರ ಆದೇಶದಲ್ಲಿ ತಿಳಿಸಿರುವ ಸಮಸ್ಯೆಗಳಿಗೆ ಸೌಹಾರ್ದಯುತವಾಗಿ ಚರ್ಚೆ ನಡೆಸಿ ಪರಿಹಾರ ಕಂಡುಕೊಂಡಕೊಳ್ಳಲಾಗುವುದು ಎಂದು ಮಾಲ್ ಪರ ವಕೀಲರು ನೀಡಿದ ಭರವಸೆ ದಾಖಲಿಸಿಕೊಂಡ ಪೀಠ, ಮುಂದಿನ ವಿಚಾರಣೆವರೆಗೂ ಮಾಲ್ ವಿರುದ್ದ ಕ್ರಮಕ್ಕೆ ಮುಂದಾಗದಂತೆ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts