More

    ಮೆಟ್ರೋ ಕಾಮಗಾರಿಗಾಗಿ ಮರ ಕಡಿಯಬಹುದು ಎಂದ ಹೈಕೋರ್ಟ್…

    ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ ಮಾರ್ಗದ ಕಾಮಗಾರಿಗಾಗಿ ಮರಗಳನ್ನು ಕಡಿಯುವುದಕ್ಕೆ ಸಲ್ಲಿಸಿದ್ದ ಆಕ್ಷೇಪ ಅರ್ಜಿಯನ್ನು ಸಲ್ಲಿಸಲಾಗಿತ್ತು. ಈಗ ಈ ಅರ್ಜಿಯನ್ನು ತಿರಸ್ಕರಿಸಿರುವ ಹೈಕೋರ್ಟ್, ಯೋಜನೆಗೆ ಮರಗಳನ್ನು ಕಡಿಯಲು ಬಿಎಂಆರ್‌ಸಿಎಲ್‌ಗೆ ಅನುಮತಿ ನೀಡಿದೆ.

    ಮೆಟ್ರೋ ಕಾಮಗಾರಿ ಸೇರಿ ಅಭಿವೃದ್ಧಿ ಕಾಮಗಾರಿಗಳಿಗಾಗಿ ಮರಗಳನ್ನು ಕಡಿಯುವುದನ್ನು ಆಕ್ಷೇಪಿಸಿ ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ಹಾಗೂ ಪರಿಸರವಾದಿ ದತ್ತಾತ್ರೇಯ ಟಿ. ದೇವರೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಹಾಗೂ ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ಪೀಠ ಈ ಆದೇಶ ಮಾಡಿತು.

    ತಾಂತ್ರಿಕ ಸಲಹಾ ಸಮಿತಿಯ ಅನುಮೋದನೆ ಆಧಾರದಲ್ಲಿ ಮರಗಳನ್ನು ಕತ್ತರಿಸಲು, ಸ್ಥಳಾಂತರಗೊಳಿಸಲು ಹಾಗೂ ಅರಣ್ಯೀಕರಣ ಮಾಡಲು ಅವಕಾಶ ನೀಡಿರುವ ಹೈಕೋರ್ಟ್, ಮರಗಳನ್ನು ಕತ್ತರಿಸುವುದನ್ನು ವಿರೋಧಿಸಲು ಸಮರ್ಥ ಕಾರಣಗಳನ್ನು ನೀಡಲಾಗಿಲ್ಲ. ಕಾಮಗಾರಿ ಈಗಾಗಲೇ ಸಾಕಷ್ಟು ವಿಳಂಬವಾಗಿರುವ ಹಿನ್ನೆಲೆಯಲ್ಲಿ ಯೋಜನೆ ಜಾರಿಗೆ ತಡೆ ನೀಡಲಾಗದು ಎಂದು ನ್ಯಾಯಪೀಠ ಹೇಳಿತು.

    ಅರ್ಜಿದಾರರ ನಿರೀಕ್ಷೆಯಂತೆ ಅರಣ್ಯೀಕರಣ ನಡೆಯದಿದ್ದರೂ, ಯೋಜನೆಯನ್ನು ನಿಗದಿತ ಸಮಯಕ್ಕೆ ಪೂರ್ಣಗೊಳಿಸಬೇಕಾಗಿದೆ. ಆದ್ದರಿಂದ, ವೃಕ್ಷ ಅಧಿಕಾರಿಯ ಮೇಲ್ವಿಚಾರಣೆಯಲ್ಲಿ ಮರಗಳನ್ನು ಕಡಿಯುವುದು, ಸ್ಥಳಾಂತರ ಮಾಡುವುದು ಹಾಗೂ ಸಸಿಗಳನ್ನು ನೆಡುವ ಕಾರ್ಯವನ್ನು ಮುಂದುವರಿಸಬಹುದು ಎಂದು ಪೀಠ ಆದೇಶಿಸಿದೆ. ಈ ಕುರಿತ ವಸ್ತು ಸ್ಥಿತಿ ಆಧಾರಿತ ವರದಿಯನ್ನು ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಬಿಎಂಆರ್‌ಸಿಎಲ್‌ಗೆ ಸೂಚಿಸಿ, ವಿಚಾರಣೆಯನ್ನು 2023ರ ಜ.10ಕ್ಕೆ ಮುಂದೂಡಿತು.

    578 ಮರ ಕಡಿಯಲು, 33 ಮರ ಸ್ಥಳಾಂತರಿಸಲು ಅನುಮತಿ:
    ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಕೆಂಪಾಪುರದಿಂದ ಶೆಟ್ಟಿಗೆರೆವರೆಗಿನ ಮೆಟ್ರೊ ಎರಡನೇ ಹಂತದಲ್ಲಿ 466 ಮರಗಳನ್ನು ಕಡಿಯಲು, 21ಮರಗಳನ್ನು ಸ್ಥಳಾಂತರಿಸಲು ಹಾಗೂ 4 ಮರಗಳನ್ನು ಉಳಿಸಿಕೊಳ್ಳು ತಾಂತ್ರಿಕ ಸಲಹಾ ಸಮಿತಿ ನೀಡಿರುವ ಅನುಮೋದನೆಯ ಆಧಾರದಲ್ಲಿ ವೃಕ್ಷ ಅಧಿಕಾರಿ ನೀಡಿರುವ ಅನುಮತಿಯನ್ನು ಬಿಎಂಆರ್‌ಸಿಎಲ್ ಕಾರ್ಯರೂಪಕ್ಕೆ ತರಬಹುದು ಎಂದು ಹೈಕೋರ್ಟ್ ಆದೇಶಿಸಿದೆ. ಅದೇ ರೀತಿ, ಸೆಂಟ್ರಲ್ ಸಿಲ್ಕ್ ಬೋರ್ಡ್ ಮಾರ್ಗದಲ್ಲಿ 112 ಮರಗಳನ್ನು ಕಡಿಯಲು, 12 ಮರಗಳನ್ನು ಸ್ಥಳಾಂತರಿಸಲು ಹಾಗೂ 3 ಮರಗಳನ್ನು ಹಾಗೇ ಉಳಿಸಿಕೊಳ್ಳಲು ಬಿಎಂಆರ್‌ಸಿಎಲ್‌ಗೆ ಹೈಕೋರ್ಟ್ ಅನುಮತಿ ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts