More

    ಕೃಷ್ಣಾ ನದಿ ತೀರದಲ್ಲಿ ಹೈ ಅಲರ್ಟ್

    ಚಿಕ್ಕೋಡಿ: ಮಹಾರಾಷ್ಟ್ರದ ವಿವಿಧ ಜಲಾಶಯಗಳು ಹಾಗೂ ಮಹಾಬಲೇಶ್ವರ, ಕೊಯ್ನ ಪ್ರದೇಶದಲ್ಲಿ ಸುರಿಯುತ್ತಿರುವ ವರ್ಷಧಾರೆಯಿಂದ ಚಿಕ್ಕೋಡಿ ತಾಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ ಸುಮಾರು 2 ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರು ಬರುತ್ತಿದ್ದು, ಸೋಮವಾರ ನದಿಯಲ್ಲಿ 6 ಅಡಿಯಷ್ಟು ಒಳಹರಿವು ಹೆಚ್ಚಾಗಿದೆ. ಹೀಗಾಗಿ ನದಿ ತೀರದ ಜನರಿಗೆ ಮತ್ತೆ ಪ್ರವಾಹ ಆತಂಕ ಎದುರಾಗಿದೆ.

    ಚಿಕ್ಕೋಡಿ ತಾಲೂಕಿನ ಕೃಷ್ಣಾ ವೇದಗಂಗಾ, ದೂಧಗಂಗಾ ನದಿ ತೀರದಲ್ಲಿಯೂ ಎರಡು ದಿನದಿಂದ ಮಳೆ ಸುರಿಯುತ್ತಿದ್ದು, ಕೃಷ್ಣಾ ಹಾಗೂ ಉಪ ನದಿಗಳಿಗೆ ಅಡ್ಡಲಾಗಿ ನಿರ್ಮಿಸಿರುವ ಎಲ್ಲ 7 ಕೆಳಹಂತದ ಸೇತುವೆಗಳು ಜಲಾವೃತಗೊಂಡಿದೆ. ನದಿ ನೀರು ಸುತ್ತಮುತ್ತಲಿನ ಜಮೀನುಗಳಿಗೆ ನುಗ್ಗಿದ್ದು, ಬೆಳೆಗಳೆಲ್ಲ ಜಲಾವೃತಗೊಂಡಿವೆ. ಜನರು ಕ್ಷಣಕ್ಷಣಕ್ಕೂ ಪ್ರವಾಹ ಆತಂಕ ಎದುರಿಸುತ್ತಿದ್ದಾರೆ.

    ಸಂಚಾರ ಕಡಿತ: ಕೃಷ್ಣಾ ನದಿಗೆ ಯಡೂರ ಬಳಿ ಅಡ್ಡಲಾಗಿ ನಿರ್ಮಿಸಲಾಗಿರುವ ಯಡೂರ-ಕಲ್ಲೋಳ, ದೂಧಗಂಗಾ ನದಿಗೆ ಮಲಿಕವಾಡ ಗ್ರಾಮದ ಬಳಿ ನಿರ್ಮಿಸಲಾಗಿರುವ ಮಲಿಕವಾಡ-ದತ್ತವಾಡ ಸೇತುವೆ ಮತ್ತು ವೇದಗಂಗಾ ನದಿಗೆ ಅಡ್ಡಲಾಗಿರುವ ಸಿದ್ನಾಳ-ಹುನ್ನರಗಿ, ಕಾರದಗಾ-ಬೋಜ, ಬೋಜವಾಡಿ-ಕುನ್ನೂರ, ಜತ್ರಾಟ-ಭೀವಶಿ, ಸಿದ್ನಾಳ-ಅಕ್ಕೋಳ ಸೇರಿದಂತೆ ಕೆಳಹಂತದ 7 ಸೇತುವೆಗಳು ಜಲಾವೃತಗೊಂಡು ರಸ್ತೆ ಸಂಚಾರ ಕಡಿತಗೊಂಡಿದೆ.

    ರಾಜ್ಯದ ಆಲಮಟ್ಟಿಯಿಂದ 2.50 ಲಕ್ಷ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಒಳಹರಿವಿನ ಪ್ರಮಾಣಕ್ಕಿಂತ ಹೆಚ್ಚುವರಿ ನೀರನ್ನು ಆಲಮಟ್ಟಿಯಿಂದ ನೀರು ಹೊರಬಿಡುತ್ತಿದ್ದರೂ ಮಹಾರಾಷ್ಟ್ರ ಸರ್ಕಾರ ವಿವಿಧ ಜಲಾಶಯಗಳಿಂದ ಹೆಚ್ಚುವರಿ ನೀರು ಬಿಡುತ್ತಿರುವುದರಿಂದ ಸೋಮವಾರ ರಾತ್ರಿ ವೇಳೆಗೆ ನದಿ ನೀರಿನ ಹರಿವಿನ ಪ್ರಮಾಣ ಹೆಚ್ಚಳವಾಗುವ ಲಕ್ಷಣಗಳಿವೆ.

    ಮಹಾರಾಷ್ಟ್ರದ ಕೊಯ್ನ ಸೇರಿದಂತೆ ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕೃಷ್ಣಾ ನದಿಗೆ ಸೋಮವಾರ ಸಂಜೆಯ ವೇಳೆಗೆ ಸುಮಾರು 2 ರಿಂದ 3 ಲಕ್ಷ ಕ್ಯೂಸೆಕ್ ನೀರು ಹರಿದು ಬರುವ ನಿರೀಕ್ಷೆ ಇದೆ. ಹೀಗಾಗಿ ನದಿ ತೀರಕ್ಕೆ ತೆರಳಿ ನೋಡಲ್ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಜನರು ಧೈರ್ಯದಿಂದ ಇರಬೇಕು.
    | ಸುಭಾಷ ಸಂಪಗಾವಿ, ತಹಸೀಲ್ದಾರ್, ಚಿಕ್ಕೋಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts