More

    ಹೈಟೆಕ್ ಹಾಕರ್ಸ್ ಜೋನ್

    ಬೆಳಗಾವಿ: ನಗರ ಪ್ರದೇಶಗಳಲ್ಲಿ ಬಿಸಿಲು, ಗಾಳಿ-ಮಳೆ ಲೆಕ್ಕಿಸದೆ ರಸ್ತೆ ಬದಿಯಲ್ಲಿ ಕುಳಿತು ಹೂ, ಹಣ್ಣು, ತರಕಾರಿ ವ್ಯಾಪಾರ ನಡೆಸಿ ಬದಕು ಸಾಗಿಸುತ್ತಿರುವ ಬೀದಿ ವ್ಯಾಪಾರಿಗಳಿಗಾಗಿ ಸರ್ಕಾರ ‘ಹೈಟೆಕ್ ಹಾಕರ್ಸ್ ಜೋನ್’ ನಿರ್ಮಾಣಕ್ಕೆ ಮುಂದಾಗಿದೆ. ಆ ಮೂಲಕ ತನ್ನ ಖಜಾನೆ ತುಂಬಿಸಿಕೊಳ್ಳಲೂ ನಿರ್ಧರಿಸಿದೆ.

    ನಗರದ ದಂಡು ಮಂಡಳಿ ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಯಯಲ್ಲಿ ಪ್ರತಿನಿತ್ಯ 4,350ಕ್ಕೂ ಹೆಚ್ಚು ಬೀದಿ ವ್ಯಾಪಾರಿಗಳು ಹಣ್ಣು-ಹಂಪಲು, ಕಾಯಿಪಲ್ಲೆ, ತಳ್ಳುವ ಗಾಡಿಗಳ ಮೂಲಕ ಜನರಿಗೆ ಬೇಕಿರುವ ಅಗತ್ಯ ವಸ್ತುಗಳ ಮಾರಾಟ ನಡೆಸುತ್ತಾರೆ. ಈ ವಹಿವಾಟು ಪ್ರಕ್ರಿಯೆಯಿಂದ ಮಹಾನಗರದ ಪಾಲಿಕೆಗೆ ಸಮರ್ಪಕ ಆದಾಯ ಬರುತ್ತಿಲ್ಲ. ಹೀಗಾಗಿ ಬೀದಿ ವ್ಯಾಪಾರಿಗಳಿಗೆ ಸೌಕರ್ಯ ಹಾಗೂ ಪಾಲಿಕೆಯ ಆದಾಯ ಹೆಚ್ಚಿಸಿಕೊಳ್ಳಲು ಸರ್ಕಾರ ಸ್ಮಾರ್ಟ್ ಸಿಟಿ ಯೋಜನೆಯಡಿ ‘ಹೈಟೆಕ್ ಹಾಕರ್ಸ್ ಜೋನ್’ ನಿರ್ಮಾಣಕ್ಕೆ ನಿರ್ಧರಿಸಿದೆ.

    9 ಕೋಟಿ ರೂ. ವೆಚ್ಚ ಶೇ. 70ರಷ್ಟು ವ್ಯಾಪಾರಿಗಳು ಪಾಲಿಕೆಯಿಂದ ಪರವಾನಗಿ ಪತ್ರ ಪಡೆದುಕೊಳ್ಳದೆ ಎಲ್ಲೆಂದರಲ್ಲಿ ಕುಳಿತು ವ್ಯಾಪಾರ ನಡೆಸಿ ಲಕ್ಷಾಂತರ ರೂ. ವಹಿವಾಟು ನಡೆಸುತ್ತಾರೆ. ಹೀಗಾಗಿ ಒಂದೆಡೆ ಬೀದಿ ವ್ಯಾಪಾರಿಗಳಿಗೆ ಸೌಕರ್ಯ ಕಲ್ಪಿಸುವುದು ಹಾಗೂ ಗ್ರಾಹಕರಿಗೆ ಒಂದೇ ಸ್ಥಳದಲ್ಲಿ ತರಕಾರಿ, ಹಣ್ಣು ಹಂಪಲ, ಹೂ ಇನ್ನಿತರ ದಿನಸಿ ವಸ್ತುಗಳು ಲಭ್ಯವಾಗುವಂತೆ ಮಾಡುವುದು ಪಾಲಿಕೆಯ ಉದ್ದೇಶವಾಗಿದೆ. ಹೀಗಾಗಿ ಸ್ಮಾರ್ಟ್ ಸಿಟಿ ಯೋಜನೆಯಡಿ ಮೊದಲ ಹಂತದಲ್ಲಿ ಬಸವೇಶ್ವರ ವೃತ್ತದಿಂದ ನಾಥ ಪೈ ಸರ್ಕಲ್‌ವರೆಗೆ 9 ಕೋಟಿ ರೂ. ವೆಚ್ಚದಲ್ಲಿ ಹಾಕರ್ಸ್ ಜೋನ್ ನಿರ್ಮಿಸಲು ಮುಂದಾಗಿದೆ. ಇದರಿಂದಾಗಿ ಸುಮಾರು 200 ಜನ ಒಂದೇ ಕಡೆ ಕುಳಿತು ವ್ಯಾಪಾರ ವಹಿವಾಟು ನಡೆಸಲು ಅನುಕೂಲವಾಗಲಿದೆ.

    ವರ್ಷದೊಳಗೆ ಪೂರ್ಣ: ಈಗಾಗಲೇ ಸ್ಮಾರ್ಟ್ ಸಿಟಿ ಯೋಜನೆಯಡಿ ಬೆಳಗಾವಿ ನಗರಕ್ಕೆ 909.41ಕೋಟಿ ರೂ. ಮಂಜೂರಾಗಿದ್ದು, ಅದರಲ್ಲಿ 396 ಕೋಟಿ ರೂ. ಬಿಡುಗಡೆಯಾಗಿದೆ. ಅದರಲ್ಲಿ 290.67 ಕೋಟಿ ರೂ. ಖರ್ಚಾಗಿದೆ. 66.48 ಕೋಟಿ ರೂ. ಕಾಮಗಾರಿ ಪೂರ್ಣಗೊಂಡಿದೆ. 200 ಕೋಟಿ ರೂ. ವೆಚ್ಚದ ಕಾಮಗಾರಿಗಳು ಅಂತಿಮ ಹಂತದಲ್ಲಿವೆ. ಶಾಪಿಂಗ್ ಮಾಲ್, ಪಾರ್ಕಿಂಗ್ ಸೌಲಭ್ಯ, ಸೈಕಲ್ ಟ್ರಾೃಕ್ ಸೇರಿದಂತೆ ಇನ್ನಿತರ ಹೊಸ ಕಾಮಗಾರಿಗಳು ಟೆಂಡರ್ ಹಂತದಲ್ಲಿವೆ. ಒಟ್ಟಿನಲ್ಲಿ 2021ರ ಅಂತ್ಯದೊಳಗೆ ಶೇ. 95ರಷ್ಟು ಕಾಮಗಾರಿಗಳು ಮುಗಿಯಲಿವೆ ಎಂದು ಸ್ಮಾರ್ಟ್ ಸಿಟಿ ಇಂಜಿನಿಯರ್‌ಗಳು ತಿಳಿಸಿದ್ದಾರೆ.

    ನಗರದ ನಾಥ ಪೈ ವೃತ್ತದಲ್ಲಿ ಹೈಟೆಕ್ ಹಾಕರ್ಸ್ ಜೋನ್ ನಿರ್ಮಾಣಕ್ಕಾಗಿ ಈಗಾಗಲೇ ಟೆಂಡರ್ ಪೂರ್ಣಗೊಂಡಿದ್ದು, ಶೀಘ್ರದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು. ಈ ವ್ಯವಸ್ಥೆಯಿಂದ ಬೀದಿ ವ್ಯಾಪಾರಿಗಳಿಗೆ ಪ್ರಯೋಜನವಾಗಲಿದ್ದು, ಪಾಲಿಕೆಗೂ ಆದಾಯ ಸಿಗಲಿದೆ. ಜತೆಗೆ ಸರ್ಕಾರಕ್ಕೂ ಬೀದಿ ವ್ಯಾಪಾರಿಗಳ ನಿಖರವಾದ
    ಅಂಕಿ-ಸಂಖ್ಯೆಗಳು ಲಭ್ಯವಾಗುತ್ತದೆ.
    |ಶಶಿಧರ ಕುರೇರ, ಸ್ಮಾರ್ಟ್ ಸಿಟಿ , ಎಂ.ಡಿ

    | ಮಂಜುನಾಥ ಕೋಳಿಗುಡ್ಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts