More

    ದುರ್ಗದಲ್ಲಿ ಹೈಟೆಕ್ ಬಸ್ ನಿಲ್ದಾಣ

    ಚಿತ್ರದುರ್ಗ: ನಗರದಲ್ಲಿ ನೆರವೇರಿಸಿರುವ 45 ಕೋಟಿ ರೂ. ವೆಚ್ಚದ ಹೈಟೆಕ್ ಬಸ್ ನಿಲ್ದಾಣದ ಕಾಮಗಾರಿ ಒಂದು ವರ್ಷದೊಳಗೆ ಪೂರ್ಣಗೊಳಿಸಲಾಗುವುದು ಎಂದು ಹೊಳಲ್ಕೆರೆ ಶಾಸಕ, ಸಾರಿಗೆ ನಿಗಮದ ಅಧ್ಯಕ್ಷ ಎಂ.ಚಂದ್ರಪ್ಪ ಹೇಳಿದರು.

    ರಾಜ್ಯ ರಸ್ತೆ ಸಾರಿಗೆ ನಿಗಮ ಚಿತ್ರದುರ್ಗ ವಿಭಾಗದಿಂದ ನಗರದ ನಿಗಮದ ಡಿಪೋ ಬಳಿ ಶುಕ್ರವಾರ ನಿಲ್ದಾಣದ ಶಂಕುಸ್ಥಾಪನಾ ಸಮಾರಂಭ, ವಿನೂತನ ವಿದ್ಯುತ್ ಚಾಲಿತ ಪವರ್ ಪ್ಲಸ್ ಬಸ್ ಹಾಗೂ ಅಂಬಾರಿ ಉತ್ಸವ್ ಸ್ಲೀಪರ್ ಬಸ್ ಉದ್ಘಾಟಿಸಿ ಮಾತನಾಡಿದರು.

    ಸಾರ್ವಜನಿಕರು, ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ನೌಕರರಿಗೆ ಇನ್ನೂ ಹೆಚ್ಚಿನ ಸಾರಿಗೆ ಸೌಲಭ್ಯ ಒದಗಿಸುವ ದೃಷ್ಟಿಯಿಂದ 6 ಎಕರೆ ವಿಸ್ತೀರ್ಣದಲ್ಲಿ ನಿಲ್ದಾಣ ನಿರ್ಮಾಣಕ್ಕಾಗಿ ಮೊದಲ ಹಂತದಲ್ಲಿ 45 ಕೋಟಿ ರೂ. ಅನುದಾನ ಮಂಜೂರಾಗಿದ್ದು, 90 ಕೋಟಿ ರೂ. ವೆಚ್ಚದಲ್ಲಿ ಬಸ್ ಹೊಸ ನಿಲ್ದಾಣ ನಿರ್ಮಾಣವಾಗಲಿದೆ ಎಂದರು.

    ದಾವಣಗೆರೆಯಲ್ಲಿ 126 ಕೋಟಿ ರೂ. ಹಾಗೂ ತುಮಕೂರಲ್ಲಿ 100 ಕೋಟಿ ರೂ. ವೆಚ್ಚ ಹಾಗೂ ಇತರೆ ಜಿಲ್ಲಾ ಕೇಂದ್ರಗಳಲ್ಲೂ ಅತ್ಯುತ್ತಮ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಕೋವಿಡ್ ಸಂದರ್ಭದಲ್ಲಿ ಸಾವಿರಾರು ಕೋಟಿ ರೂ. ನಷ್ಟ ಉಂಟಾದರೂ ಕಳೆದ 4 ವರ್ಷಗಳಿಂದ ಪ್ರಯಾಣ ದರ ಹೆಚ್ಚಿಸಿಲ್ಲ ಎಂದು ಹೇಳಿದರು.

    ರಾಜ್ಯಾದ್ಯಂತ ವಿನೂತನ ಅತ್ಯುತ್ತಮ ಮಾದರಿ ವಿದ್ಯುತ್ ಚಾಲಿತ 350 ಹಾಗೂ 650 ಕ್ಕೂ ಹೆಚ್ಚಿನ ಹೊಸ ಬಸ್‌ಗಳನ್ನು ಖರೀದಿಸಲಾಗಿದೆ. ಕೆಎಸ್‌ಆರ್‌ಟಿಸಿ ಸಂಸ್ಥೆ ಸಂಕಷ್ಟದಲ್ಲಿದ್ದರೂ ಪ್ರಯಾಣಿಕರಿಗೆ ಗುಣಮಟ್ಟದ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಸಂಸ್ಥೆ ನೌಕರರಿಗೆ ಪ್ರತಿ ತಿಂಗಳು 1ನೇ ತಾರೀಖು ವೇತನ ಪಾವತಿಸಲಾಗುತ್ತಿದೆ ಎಂದು ತಿಳಿಸಿದರು.

    ಸಂಸ್ಥೆ ನೌಕರರು ಅಪಘಾತದಲ್ಲಿ ಮೃತರಾದರೆ, ಪ್ರೀಮಿಯಂ ಕಟ್ಟದೆ ಇದ್ದರೂ ಬ್ಯಾಂಕ್ ಖಾತೆ ಇದ್ದರೆ, ನೊಂದ ಕುಟುಂಬದವರಿಗೆ ಒಂದು ಕೋಟಿ ರೂ. ವಿಮಾ ಪರಿಹಾರ ದೊರೆಯುತ್ತದೆ. ಅಂಗವಿಕಲರಾದರೆ 40 ಲಕ್ಷ ರೂ., ಗಾಯಗೊಂಡರೆ 20 ಲಕ್ಷ ರೂ. ಕೊಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

    ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ನಗರದಲ್ಲಿ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿರುವುದರಿಂದ ಹೈಟೆಕ್ ಬಸ್ ನಿಲ್ದಾಣದ ಅಗತ್ಯವಿತ್ತು. ಹೊಸ ಬಸ್ ನಿಲ್ದಾಣದಿಂದ ಬೆಂಗಳೂರು, ಹೊಸಪೇಟೆ, ಬಳ್ಳಾರಿ, ಚಳ್ಳಕೆರೆ ಕಡೆಯಿಂದ ಬರುವ ಬಸ್‌ಗಳಿಗೆ ಅನುಕೂಲವಾಗಲಿದೆ ಎಂದರು.

    ಹೊಸ ನಿಲ್ದಾಣದಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಿರ್ಮಾಣದಿಂದ ಸಂಸ್ಥೆಗೆ ಆದಾಯ ಬರಲಿದೆ ಎಂದ ಅವರು, ಹೊಸ ನಿಲ್ದಾಣ ಬಳಿ ಸಿಬ್ಬಂದಿಗೆ ವಸತಿ ಗೃಹ ನಿರ್ಮಾಣಕ್ಕೆ ಮುಂದಾಗುವಂತೆ ಸಲಹೆ ನೀಡಿದರು.

    ನಗರಸಭೆ ಉಪಾಧ್ಯಕ್ಷೆ ಶ್ರೀದೇವಿ ಚಕ್ರವರ್ತಿ, ಸದಸ್ಯೆ ತಾರಕೇಶ್ವರಿ, ನಿಗಮದ ನಿರ್ದೇಶಕರಾದ ಪಿ.ರುದ್ರೇಶ್, ಆರುಂಡಿ ನಾಗರಾಜ್, ರಾಜು, ವೀರೇಂದ್ರ ಶೆಟ್ಟರ್, ನಿಗಮದ ಸಿಬ್ಬಂದಿ ಮತ್ತು ಜಾಗೃತ ವಿಭಾಗ ನಿರ್ದೇಶಕ ಪ್ರಶಾಂತ್‌ಕುಮಾರ್ ಮಿಶ್ರಾ, ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಎನ್.ಹೆಬ್ಬಾಳ್, ರಾಜಣ್ಣ ಇತರರಿದ್ದರು.

    ಶಿಷ್ಟಾಚಾರ ಪಾಲನೆಯಲ್ಲಿ ಲೋಪ
    ಶಂಕುಸ್ಥಾಪನೆಯ ಫಲಕದಲ್ಲಿ ಆದ ಶಿಷ್ಟಾಚಾರ ಪಾಲನೆ ಲೋಪಕ್ಕೆ ಅಸಮಾಧಾನ ವ್ಯಕ್ತಪಡಿಸಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಜಿ.ಟಿ.ಸುರೇಶ್ ಸಿದ್ದಾಪುರ ಅವರು ವೇದಿಕೆಯಿಂದ ನಿರ್ಗಮಿಸಿದರು. ಶಿಷ್ಟಾಚಾರ ಪಾಲನೆಯಲ್ಲಿ ಆದ ಲೋಪಕ್ಕಾಗಿ ಚಂದ್ರಪ್ಪ ವಿಷಾದ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts