More

    ತಿಪಟೂರಿಗೆ ಬಂತು ಹೆಸರು ಬೆಳೆ ಕಟಾವು ಯಂತ್ರ

    ತಿಪಟೂರು: ತಾಲೂಕಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಹೆಸರು ಬೆಳೆ ಬಾರದಿದ್ದರೂ, ಇರುವ ಬೆಳೆ ಅಚ್ಚುಕಟ್ಟಾಗಿ ರೈತರ ಮನೆ ಸೇರಲು ಆಧುನಿಕ ಬೆಳೆ ಕಟಾವು ಯಂತ್ರ ನೆರವಾಗುತ್ತಿದೆ.
    ತಾಲೂಕಿನಲ್ಲಿ ಪ್ರಥಮ ಬಾರಿ ಕಟಾವು ಯಂತ್ರ ಪರಿಚಯಿಸಲಾಗಿದೆ. ಕೃಷಿ ಇಲಾಖೆ ಮತ್ತು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಸಹಯೋಗದೊಂದಿಗೆ ಹೊನ್ನವಳ್ಳಿ ಹೋಬಳಿ ನಾಗತಿಹಳ್ಳಿ ಗೇಟ್‌ನಲ್ಲಿ ಸ್ಥಾಪಿಸಲಾಗಿರುವ ಕೃಷಿ ಯಂತ್ರಧಾರೆ ಕೇಂದ್ರದಲ್ಲಿ ಕಟಾವು ಯಂತ್ರಗಳು ಬಾಡಿಗೆಗೆ ಲಭ್ಯವಿದೆ.

    ಈ ಹಿಂದೆ ಯಂತ್ರಗಳ ಮೂಲಕ ರಾಗಿ ಕಟಾವು ಮಾಡಿದಾಗ ಕಾಲು ಭಾಗ ಬೆಳೆ ಭೂಮಿ ಸೇರುತ್ತಿತ್ತು. ಆದರೆ, ಈ ಯಂತ್ರದಲ್ಲಿ ವಿಶೇಷ ತಂತ್ರಜ್ಞಾನ ಬಳಸಿರುವ ಕಾರಣ ಕಾಳು ನಷ್ಟವಾಗದೆ. ಸಂಪೂರ್ಣವಾಗಿ ಮನೆ ಸೇರಲಿದೆ. ಪ್ರಾರಂಭದಲ್ಲಿ ಒಂದು ಯಂತ್ರ ತರಿಸಲಾಗಿತ್ತು. ಬೇಡಿಕೆ ಹೆಚ್ಚಿದ ಪರಿಣಾಮ ಮತ್ತೆ 3 ಯಂತ್ರ ತರಿಸಿದ್ದರೂ ಬೇಡಿಕೆ ಕುಗ್ಗಿಲ್ಲ. ತಾಲೂಕಿನ ಉಳಿದ ಹೋಬಳಿಗಳ ಪೈಕಿ ಸದ್ಯ ಹೊನ್ನವಳ್ಳಿ ಹೋಬಳಿಯಲ್ಲಿ ಹೆಸರುಕಾಳು ಬೆಳೆ ಚೆನ್ನಾಗಿ ಬಂದಿರುವುದೂ ಯಂತ್ರಗಳ ಬೇಡಿಕೆ ಹೆಚ್ಚಲು ಕಾರಣ.

    ಅನ್ಯ ರಾಜ್ಯದ ಯಂತ್ರಗಳಿಗೆ ಕುಸಿದ ಬೇಡಿಕೆ: ತಮಿಳುನಾಡಿನಿಂದ ಕಟಾವು ಯಂತ್ರ ಬಂದಿದ್ದರೂ, ಕಾಳು ಹೆಚ್ಚು ಹಾಳಾಗದಿರುವ ಕಾರಣಕ್ಕೆ ಸ್ಥಳೀಯ ಯಂತ್ರಗಳಲ್ಲಿ ಕೊಯ್ಲು ಮಾಡಲು ರೈತರು ಉತ್ಸುಕತೆ ತೋರುತ್ತಿದ್ದಾರೆ. ಸಂಘದ ಯಂತ್ರ ಗಂಟೆಗೆ 1.5 ಎಕರೆ ಪ್ರದೇಶದಲ್ಲಿ ಕಾಳು ಬೇರ್ಪಡಿಸುತ್ತದೆ ಮತ್ತು ದರ ಗಂಟೆಗೆ 2,800 ರೂಪಾಯಿ ಇದೆ. ಆದರೆ ತಮಿಳುನಾಡಿನ ಯಂತ್ರಗಳಿಗೆ ಗಂಟೆಗೆ 3 ಸಾವಿರ ರೂ. ನಿಗದಿಪಡಿಸಲಾಗಿದೆ, ಮತ್ತು ಲೆಕ್ಕಾಚಾರದ ವಿಷಯದಲ್ಲಿ ಅವರದ್ದು ಸ್ವಲ್ಪ ತಕರಾರು ಮತ್ತು ಈ ಯಂತ್ರಗಳ ಕಾರ್ಯಕ್ಷಮತೆ ಕಮ್ಮಿ ಎನ್ನುವ ಕಾರಣ ಯಾರೂ ಅತ್ತ ತಿರುಗಿ ನೋಡುತ್ತಿಲ್ಲ.

    ಹೊನ್ನವಳ್ಳಿ ಕೃಷಿ ಯಂತ್ರಧಾರೆ ಯಂತ್ರದಿಂದ ಹೆಸರು ಗಿಡವನ್ನು ಕಡಿಮೆ ಖರ್ಚು ಮತ್ತು ಕಡಿಮೆ ಸಮಯದಲ್ಲಿ ಒಂದು ಕಾಳು ಕೂಡಾ ಹಾಳಾಗದಂತೆ ರೈತರ ಮನೆಬಾಗಿಲಿಗೆ ತಲುಪುತ್ತಿದೆ. ಹೊನ್ನವಳ್ಳಿ ಭಾಗದಲ್ಲಿ ಮೊದಲ ಪ್ರಯತ್ನ ಯಶಸ್ವಿಯಾಗಿದ್ದು, ಯಂತ್ರಗಳಿಗೆ ಬೇಡಿಕೆ ಇದೆ.
    ಪ್ರಸನ್ನ ಕುಮಾರ್ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಪ್ರಬಂಧಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts