More

    ತುಳುನಾಡಿನ ಕಂಬಳದ ‘ರನ್’ವೀರ ಶ್ರೀನಿವಾಸ ಗೌಡ

    ಮಂಗಳೂರು: ಸಾಂಪ್ರದಾಯಿಕ ಸ್ಪರ್ಶದ ತುಳುನಾಡಿನ ಜಾನಪದ ಕ್ರೀಡೆ ಕಂಬಳದಲ್ಲಿ 100 ಮೀಟರ್ ಓಟವನ್ನು 9.55 ಸೆಕೆಂಡ್‌ಗಳಲ್ಲಿ ಕ್ರಮಿಸಿರುವ ಅಶ್ವತ್ಥಪುರ ಶ್ರೀನಿವಾಸ ಗೌಡ ಈಗ ನವತಾರೆ.
    ಕಂಬಳ ಕ್ಷೇತ್ರದಲ್ಲಿ ಓಟಗಾರನಾಗಿ ಹಲವು ವರ್ಷಗಳಿಂದ ಗುರುತಿಸಿಕೊಂಡು ಹೆಸರು ಮಾಡಿರುವ ಶ್ರೀನಿವಾಸ ಗೌಡ(ಸೀನು), ಈಗ ಮಾಡಿರುವುದು ಸಾರ್ವಕಾಲಿಕ ದಾಖಲೆ. ಫೆ.1ರಂದು ನಡೆದ ಐಕಳಬಾವ ಕಾಂತಬಾರೆ ಬೂದಬಾರೆ ಜೋಡುಕರೆ ಕಂಬಳದಲ್ಲಿ ಇವರು ಇರುವೈಲು ಪಾಣಿಲ ಬಾಡ ಪೂಜಾರಿ ಅವರ ಕೋಣಗಳೊಂದಿಗೆ ನೇಗಿಲು ಹಿರಿಯ ವಿಭಾಗದಲ್ಲಿ 142.50 ಮೀಟರ್ ಉದ್ದದ ಕರೆಯಲ್ಲಿ 13.62 ಸೆಕೆಂಡ್‌ಗಳಲ್ಲಿ ಓಡಿದ್ದಾರೆ. ಇದನ್ನು 100 ಮೀಟರ್‌ಗೆ ಬದಲಾಯಿಸಿದರೆ 9.55 ಸೆಕೆಂಡ್‌ಗಳಲ್ಲಿ ಓಡಿದಂತಾಗುತ್ತದೆ. ಇಷ್ಟು ವೇಗದಲ್ಲಿ ಇದುವರೆಗೆ ಕಂಬಳ ಕರೆಯಲ್ಲಿ ಯಾರೂ ಓಡಿರುವ ದಾಖಲೆ ಇಲ್ಲ. ಈ ಹಿಂದಿನ ದಾಖಲೆಗಳತ್ತ ಗಮನ ಹರಿಸಿದಾಗ ಆನಂದ ಇರ್ವತ್ತೂರು ಮತ್ತು ಅಕ್ಕೇರಿ ಸುರೇಶ್ ಅವರು 100 ಮೀ. ದೂರವನ್ನು 9.57 ಸೆಕೆಂಡ್‌ಗಳಲ್ಲಿ ಕ್ರಮಿಸಿದ್ದಾರೆ.

    ವಿಶ್ವವಿಖ್ಯಾತ ಓಟಗಾರ ಜಮೈಕಾದ ಉಸೇನ್ ಬೋಲ್ಟ್ ಟ್ರಾೃಕ್‌ನಲ್ಲಿ 9.58 ಸೆಕೆಂಡ್‌ಗಳಲ್ಲಿ 100 ಮೀ. ಓಡಿರುವುದನ್ನು ಕೆಸರುಗದ್ದೆಯಲ್ಲಿ ಓಡಿರುವ ಶ್ರೀನಿವಾಸ ಗೌಡರು ಮೀರಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಇದರ ಹೋಲಿಕೆ ಸರಿಯಲ್ಲ ಎಂದು ಕಂಬಳ ಕ್ಷೇತ್ರದ ಪರಿಣತರೇ ಹೇಳುತ್ತಾರೆ.

    ಗ್ರಾಮೀಣ ಸಿಕ್ಸ್‌ಪ್ಯಾಕ್: ಮೂಡುಬಿದಿರೆ ಸಮೀಪದ ಮಿಜಾರು ನಿವಾಸಿ ಶ್ರೀನಿವಾಸ ಗೌಡ ಓದಿರುವುದು 10ನೇ ತರಗತಿ. ವಯಸ್ಸು 28. ವೃತ್ತಿಯಲ್ಲಿ ಕಟ್ಟಡ ಕಂಟ್ರಾೃಕ್ಟರ್-ಮೇಸ್ತ್ರಿ. ನವೆಂಬರ್‌ನಿಂದ ಮಾರ್ಚ್‌ವರೆಗೆ ಕಂಬಳದಲ್ಲಿ ಭಾಗವಹಿಸಿ ಉಳಿದ ಅವಧಿಯಲ್ಲಿ ಕಟ್ಟಡ ಸಹಿತ ಇತರೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಪಡಿವಾಲ್ಸ್‌ನವರ ಕೋಣಗಳನ್ನು ಸಾಕುವುದು ಇವರೇ. ಇವರದ್ದು ಮೇಲ್ನೋಟಕ್ಕೆ ಜಿಮ್‌ಗಳಲ್ಲಿ ದೇಹವನ್ನು ದಂಡಿಸಿದಂತೆ ಕಾಣುವ ಮೈಕಟ್ಟು. ಕಂಬಳದಲ್ಲಿ ಬರಿಮೈಯಲ್ಲಿ ಓಡುವ ಕಟ್ಟುಮಸ್ತಿನ ದೇಹವನ್ನು ನೋಡಿ ಮೆಚ್ಚುಗೆ ಸೂಸದವರಿಲ್ಲ.

    22 ಬಾರಿ ಓಟ!: ಇರುವೈಲು ಪಾಣಿಲ, ಮೂಡುಬಿದಿರೆ ನ್ಯೂ ಪಡಿವಾಲ್ಸ್, ಮಿಜಾರು ಪ್ರಸಾದ್ ನಿಲಯ, ಪದವು ಕಾನಡ್ಕ ಇವರ ಕೋಣಗಳನ್ನು ನೇಗಿಲು ಮತ್ತು ಹಗ್ಗ ವಿಭಾಗಗಳಲ್ಲಿ ಕಂಬಳಗಳಲ್ಲಿ ಓಡಿಸುವ ಶ್ರೀನಿವಾಸ್ ಗೌಡ ಸಾಮಾನ್ಯವಾಗಿ ಪ್ರತಿ ಕಂಬಳದಲ್ಲಿ 22 ಬಾರಿ ಓಡುತ್ತಾರೆ.

    ನಮ್ಮ ಗ್ರಾಮೀಣ ಪ್ರತಿಭೆಗಳು ಯಾರಿಗೂ ಕಡಿಮೆ ಇಲ್ಲವೆಂಬುದಕ್ಕೆ ಕಂಬಳ ಓಟಗಾರ ಶ್ರೀನಿವಾಸ ಗೌಡ ಸಾಕ್ಷಿ. ವಿಶ್ವಮಟ್ಟದ ದಾಖಲೆಯ ಪ್ರದರ್ಶನ ನೀಡಿದ ಕಂಬಳದ ವೇಗದ ಓಟಗಾರ ಶ್ರೀನಿವಾಸ ಗೌಡರಿಗೆ ಹಾರ್ದಿಕ ಅಭಿನಂದನೆ. ಈ ಪ್ರತಿಭೆಯನ್ನು ವಿಶ್ವಸ್ತರಕ್ಕೆ ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಪ್ರೋತ್ಸಾಹ ನೀಡಲಿದೆ.
    – ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಉಪಮುಖ್ಯಮಂತ್ರಿ

    ಕಂಬಳ ಅಕಾಡೆಮಿಯಲ್ಲಿ ತರಬೇತಿ:

    ಮೂಡುಬಿದಿರೆ: ಕಂಬಳ ಅಕಾಡೆಮಿಯಿಂದ ತರಬೇತಿ ಪಡೆದು 8 ವರ್ಷಗಳಲ್ಲಿ 100ಕ್ಕಿಂತಲೂ ಅಧಿಕ ಚಿನ್ನದ ಪದಕ ಪಡೆದಿರುವ ಓಟಗಾರ ಮಿಜಾರು ಅಶ್ವತ್ಥಪುರದ ಶ್ರೀನಿವಾಸ ಗೌಡ ಬಗ್ಗೆ ಕೆಲವರು ತಪ್ಪು ಮಾಹಿತಿ ಹರಡುತ್ತಿದ್ದಾರೆ ಎಂದು ಕಂಬಳ ಅಕಾಡೆಮಿ ಸಂಚಾಲಕ ಕೆ.ಗುಣಪಾಲ ಕಡಂಬ ಆಕ್ಷೇಪಿಸಿದ್ದಾರೆ.

    ಶ್ರೀನಿವಾಸ ಗೌಡ ಅಕಾಡೆಮಿಕ್ ತರಬೇತಿ ಪಡೆದಿಲ್ಲವೆನ್ನುವುದು ನಿಜವಲ್ಲ. ಕಂಬಳ ಅಕಾಡೆಮಿಯಿಂದ 2011ರಲ್ಲಿ ಶಿರ್ಲಾಲಿನಲ್ಲಿ ನಡೆದ ಕಂಬಳದ ಓಟಗಾರರ ತರಬೇತಿಗೆ ಸೇರಿದ್ದ ಮೊದಲ ಬ್ಯಾಚ್‌ನ ಶಿಬಿರಾರ್ಥಿ ಇವರು. ಈ ಸಾಧನೆ ಅಕಾಡೆಮಿ ಹಿರಿಮೆಯನ್ನು ಹೆಚ್ಚಿಸಿದೆ. ಈ ವರ್ಷ ನಡೆದ ಕಂಬಳದಲ್ಲಿ ಈಗಾಗಲೇ 32 ಬಹುಮಾನ ಪಡೆದುಕೊಂಡಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಕಂಬಳ ಅಕಾಡೆಮಿ ಬೋಗಸ್ ಹಾಗೂ ಶ್ರೀನಿವಾಸ ಗೌಡ ಅನರ್ಹ ಎಂದು ಜಿಲ್ಲಾ ಕಂಬಳ ಸಮಿತಿಯವರು ವೇಣೂರಿನ ಕಂಬಳದಲ್ಲಿ ಕರಪತ್ರ ಹಂಚಿದ್ದಾರೆ. ಲೇಸರ್ ಸಿಸ್ಟಂ ತರಬೇತಿ ಪಡೆದವರ ಸಾಧನೆಗಳನ್ನು ಸಹಿಸದ ತಂಡ ತಪ್ಪು ಮಾಹಿತಿ ನೀಡುತ್ತಿದೆ. ಆದ್ದರಿಂದ ಅಕಾಡೆಮಿ ಮಾಧ್ಯಮದ ಮುಂದೆ ಬರುವುದು ಅನಿವಾರ್ಯವಾಗಿದೆ ಎಂದರು.
    ಕಂಬಳ ಅಕಾಡೆಮಿ ನಿರ್ದೇಶಕರಾದ ಸರಪಾಡಿ ಅಪ್ಪಣ್ಣ, ಬಂಟ್ವಾಳ ಮಹಾಕಾಳಿಬೆಟ್ಟು ಸೀತಾರಾಮ ಶೆಟ್ಟಿ, ಸುರೇಶ್ ಕೆ.ಪೂಜಾರಿ, ಜ್ವಾಲಪ್ರಸಾದ್ ಮತ್ತು ಸ್ಕೈವ್ಯೆ ಸಂಸ್ಥೆ ರತ್ನಾಕರ ಎನ್, ಓಟಗಾರ ಅಶ್ವತ್ಥಪುರ ಶ್ರೀನಿವಾಸ ಗೌಡ ಸುದ್ದಿಗೋಷ್ಠಿಯಲ್ಲಿದ್ದರು.

     ಕಂಬಳದಲ್ಲಿ ನನ್ನ ಸಾಧನೆಗೆ ಅಕಾಡೆಮಿಯೇ ಕಾರಣ. ಅಕಾಡೆಮಿಯಿಂದ ತರಬೇತಿ ಪಡೆಯದಿದ್ದರೆ ಕೋಣಗಳನ್ನು ಓಡಿಸಲು ಸಾಧ್ಯವಾಗುತ್ತಿರಲಿಲ್ಲ. ಕೋಣಗಳನ್ನು ಓಡಿಸಲು ಕಂಬಳದ ನುರಿತ ಓಟಗಾರರಾದ ಕಾಬೆಟ್ಟು ರಘುರಾಮ ಶೆಟ್ಟಿ, ಇರ್ವತ್ತೂರು ಆನಂದ ಕೋಟ್ಯಾನ್, ನಕ್ರೆ ಜಯಕರ ಮಡಿವಾಳ, ಪಲಿಮಾರ್ ದೇವೇಂದ್ರ ಕೋಟ್ಯಾನ್ ಹಾಗೂ ರಾಜೇಶ್ ನೀಡಿದ ತರಬೇತಿ ಸಹಕಾರಿಯಾಗಿದೆ.
    – ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ, ಕಂಬಳದ ಓಟಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts